ಉಳ್ಳಾಲ(ಜ.10): ಮಾರುಕಟ್ಟೆನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದ್ದ ಬೀಫ್‌ ಸ್ಟಾಲ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಬಳಿ ಶುಕ್ರವಾರ ತಡರಾತ್ರಿ ವೇಳೆ ಸಂಭವಿಸಿದೆ.

ಎಂ.ಸಿ. ಬಾವಾ, ಎಂ.ಸಿ. ಖಾದರ್‌ ಮತ್ತು ಹನೀಫ್‌ ಎಂಬವರಿಗೆ ಸೇರಿದ ಬೀಫ್‌ ಸ್ಟಾಲಿನ ತಾತ್ಕಾಲಿಕ ಶೆಡ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತೊಕ್ಕೊಟ್ಟು ಒಳಪೇಟೆ ನವೀಕರಣ ಕಾಮಗಾರಿ ಒಂದೂವರೆ ತಿಂಗಳಿನಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿದ್ದವರನ್ನು ಸ್ಥಳಾಂತರಕ್ಕೆ ನಗರಸಭೆ ಸೂಚಿಸಿದ ಹಿನ್ನೆಲೆಯಲ್ಲಿ ಬೀಫ್‌ ಸ್ಟಾಲ್‌ನವರು ರೈಲ್ವೇ ಹಳಿ ಬದಿಯ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಶೆಡ್‌ ರಚಿಸಿ ವ್ಯಾಪಾರ ನಡೆಸುತ್ತಿದ್ದರು.

ಘಟನಾ ಸ್ಥಳಕ್ಕೆ ಪೊಲೀಸ್‌ ಕಮೀಷನರ್‌ ಶಶಿ ಕುಮಾರ್‌, ಡಿಸಿಪಿ ಹರಿರಾಂ, ಉಳ್ಳಾಲ ಠಾಣಾಧಿಕಾರಿ ಸಂದೀಪ್‌ ಎಂ.ಜಿ. ಭೇಟಿ ನೀಡಿದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬಜರಂಗದಳ-ವಿ.ಹಿಂ.ಪ ಮನವಿ

ಅಕ್ರಮವಾಗಿ ದನದ ಮಾಂಸ ಸ್ಟಾಲ್‌ ಆರಂಭವಾಗಿದ್ದು, ಅದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಿಹಿಂಪ-ಬಜರಂಗದಳ ಉಳ್ಳಾಲ ನಗರ ಪ್ರಖಂಡದ ಸಂಚಾಲಕ ಅರ್ಜುನ್‌ ಮಾಡೂರು, ಜಿಲ್ಲಾ ಸಹಗೋರಕ್ಷ ಪ್ರಮುಖ್‌ ಪವಿತ್ರ ಕೆರೆಬೈಲ…, ಪ್ರಖಂಡ ಗೋರಕ್ಷ ಪ್ರಮುಖ್‌ ರಕ್ಷಿತ್‌ ತೊಕ್ಕೊಟ್ಟು ಮತ್ತು ಕೌಶಿಕ್‌ ಉಳ್ಳಾಲಬೈಲ್‌ ಉಳ್ಳಾಲ ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಉಳ್ಳಾಲ ಠಾಣಾಧಿಕಾರಿಗೆ ಇತ್ತೀ​ಚೆಗೆ ಮನವಿ ಸಲ್ಲಿಸಿದ್ದರು.

ಟೆಂಟ್‌ ಹಾಕಿ ಬದಲಿ ವ್ಯವಸ್ಥೆ: ಚಿತ್ರಾ ಚಂದ್ರಕಾಂತ್‌

ಘಟನಾ ಸ್ಥಳಕ್ಕೆ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್‌ ಭೇಟಿ ನೀಡಿ ‘ಶೀಘ್ರದಲ್ಲೇ ಅದೇ ಸ್ಥಳದಲ್ಲಿ ಟೆಂಟ್‌ ಹಾಕಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುತ್ತೇವೆ. ನಗರಸಭೆಯ ಎಲ್ಲಾ ಸದಸ್ಯರ, ಉಪಾಧ್ಯಕ್ಷ, ವರ್ತಕರ ಸಂಘದೊಂದಿಗೆ ಚರ್ಚಿಸಿ ಮುಂದೆಯೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಬೀಫ್‌ ಸ್ಟಾಲ್‌ನ ಲೈಸಸ್ಸ್‌ ರದ್ದಾಗಿಲ್ಲ. ತಡೆಹಿಡಿಯಲಾಗಿದೆ ಅಷ್ಟೇ ಎಂದರು.

ಕಿಡಿಗೇಡಿಗಳ ಪತ್ತೆಯಾಗದಿದ್ದಲ್ಲಿ ಪ್ರತಿಭಟನೆ: ಸಂತೋಷ್‌ ಶೆಟ್ಟಿ

ಘಟನಾ ಸ್ಥಳಕ್ಕೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿಅಸೈಗೋಳಿ ಭೇಟಿ ನೀಡಿದರು. 3 ದಿನದೊಳಗೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕು. ಇಲ್ಲವಾದ್ದಲ್ಲಿ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.

------