ಮೇಲುಕೋಟೆ(ಜೂ.07): ಯೋಗನರಸಿಂಹಸ್ವಾಮಿ ಬೆಟ್ಟದ ರಾಜಗೋಪುರದ ಬಾಗಿಲಿಗೆ ಬೆಂಕಿ ಹತ್ತಿಕೊಂಡು ಸಣ್ಣ ಪ್ರಮಾಣದಲ್ಲಿ ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಆದರೆ ಆಗಮೋಕ್ತ ಪ್ರಾಯಶ್ಚಿತ್ತ ಶಾಂತಿ ಹೋಮ ಮತ್ತು ಅಭಿಷೇಕ ಮಾತ್ರ ನಡೆಯಬೇಕಿದೆ.

ಚಂದ್ರಗ್ರಹಣದ ದಿನದಂದೇ ಈ ದುರ್ಘಟನೆ ನಡೆದಿದ್ದು, ನಾಗರಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ದೇವಾಲಯದಲ್ಲಿ ಒಂದೆರಡು ಸಿಬ್ಬಂದಿ ಇದ್ದು ರಾಜಗೋಪುರದ ಬಾಗಿಲು ಮತ್ತು ಒಳಭಾಗದ ಬಾಗಿಲು ಹಾಕಿ ವಾಡಿಕೆಯಂತೆ ದೇವಾಲಯದ ಒಳಾವರಣದಲ್ಲಿ ಸೇರಿಕೊಂಡಿದ್ದಾರೆ. ಪೂಜೆ ಮುಗಿದು ಬಾಗಿಲು ಹಾಕಿದ ನಂತರ ಶುಕ್ರವಾರ ಮಧ್ಯಾಹ್ನ 1-30 ರ ವೇಳೆಗೆ ಈ ಘಟನೆ ನಡೆದಿದೆ. ಭಕ್ತರು ಬಾಗಿಲ ಮೇಲೆ ಕರ್ಪೂರ ಹಚ್ಚಿದ ಕಾರಣ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ಬೆಂಕಿಹತ್ತಿಕೊಂಡ ನಂತರ ಹೊರಗಿನಿಂದ ಮಾಹಿತಿ ತಿಳಿದ ತಕ್ಷಣ ಮಣೇಗಾರ್‌ ಮತ್ತು ಪಾರುಪತ್ತೇಗಾರರ ಗಮನಕ್ಕೆ ತಂದು ಬೆಂಕಿಯನ್ನು ನಂದಿಸಲಾಗಿದೆ. ದೇವಾಲಯದ ಇ.ಒ ನಂಜೇಗೌಡ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.