ಬೆಂಗಳೂರು(ಏ.03): ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ ಕಿರು ಅರಣ್ಯದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಓಡಾಟ ಕಡಿಮೆ ಇದ್ದ ಕಾರಣ ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಳಗ್ಗೆ 9.15ರ ಸುಮಾರಿಗೆ ಮೊದಲಿಗೆ ಜ್ಞಾನಭಾರತಿ ಆವರಣದ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಕಟ್ಟಡದ ಹಿಂಭಾಗದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಎರಡು ವಾಹನದಲ್ಲಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಾರಂಭಿಸಿದ್ದಾರೆ.

ಬಿಸಿಲು ಏರುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗತೊಡಗಿದ್ದು, ಪರಿಸರ ಭವನ, ಗಾಂಧಿ ಭವನದ ಕಡೆ ಬೆಂಕಿ ಕಾಣಿಸಿಕೊಂಡಿದೆ. ಒಂದು ಕಡೆ ಬೆಂಕಿ ನಂದಿಸುತ್ತಿದ್ದರೆ, ಮತ್ತೊಂದು ಕಡೆ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು. ಕೂಡಲೇ ಇನ್ನು ಎರಡು ವಾಹನದಲ್ಲಿ ಬಂದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬೆಂಗಳೂರು ವಿವಿ ಬಿ.ಕಾಂ-ಬಿಎಸ್ಸಿ ಪ್ರಶ್ನೆ ಪತ್ರಿಕೆ ಅದಲು ಬದಲು..!

ಶುಕ್ರವಾರ ಸರ್ಕಾರಿ ರಜೆ ಇದ್ದ ಕಾರಣ ವಿಶ್ವವಿದ್ಯಾಲಯ ಮುಚ್ಚಿಲ್ಪಟ್ಟಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆÜ ನಾಗರಭಾವಿ ಅಗ್ನಿ ಶಾಮಕ ಸಂರಕ್ಷಣಾಧಿಕಾರಿ ಕರಿರಾಜು ಅವರ ನೇತೃತ್ವದ 25 ಅಗ್ನಿ ಶಾಮಕ ಸಿಬ್ಬಂದಿ ನಾಲ್ಕು ವಾಹನಗಳೊಂದಿಗೆ ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಕಡೆ ಸಣ್ಣದಾದ ಸ್ಥಳವಾಗಿದ್ದರಿಂದ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಪರದಾಡಬೇಕಾಯಿತು.

ಬೆಂಕಿ ಹೇಗೆ ಬಿದ್ದಿತ್ತು, ಕಿಡಿಗೇಡಿಗಳ ಹಾಕಿದ್ದಾರೆಯೇ ಎಂಬುದು ನಮಗೆ ಗೊತ್ತಿಲ್ಲ. ಸಂಜೆ ವೇಳೆ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು ಎಂದು ಪಶ್ಚಿಮ ವಲಯದ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಮಹೇಶ್‌ ತಿಳಿಸಿದರು.