ಬೆಂಗಳೂರು(ಮಾ.26): ಬೆಂಗಳೂರು ನಗರ ವಿಶ್ವವಿದ್ಯಾಲಯದ ಎಡವಟ್ಟಿನಿಂದ ಗುರುವಾರ ನಡೆದ ಬಿ.ಕಾಂ ಮತ್ತು ಬಿಎಸ್ಸಿ ಪದವಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಅದಲು ಬದಲಾಗಿ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದ್ದಲ್ಲದೆ ತಪ್ಪು ಸರಿಪಡಿಸಿ ಪರೀಕ್ಷೆ ನಡೆಸಲು ಎರಡು ಗಂಟೆ ವಿಳಂಬ ಮಾಡಿದೆ.

ಗುರುವಾರ ನಡೆದ ಪರೀಕ್ಷೆಯಲ್ಲಿ ಬಿ.ಕಾಂ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ಬಿಎಸ್ಸಿ ವಿದ್ಯಾರ್ಥಿಗಳಿಗೆ, ಬಿಎಸ್ಸಿ ಪ್ರಶ್ನೆ ಪತ್ರಿಕೆಗಳನ್ನು ಬಿ.ಕಾಂ ವಿದ್ಯಾರ್ಥಿಗಳಿಗೆ ಅದಲು ಬದಲು ಮಾಡಿ ವಿತರಿಸಲಾಗಿದೆ. ಆದರೆ, ಇದನ್ನು ಅರಿಯದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ನೋಡಿ ಒಂದು ಕ್ಷಣ ಗಾಬರಿಗೊಂಡ ವಿದ್ಯಾರ್ಥಿಗಳು ಪಠ್ಯಕ್ರಮಕ್ಕೂ ಪ್ರಶ್ನೆಗಳಿಗೂ ಸಂಬಂಧವೇ ಇಲ್ಲ ಹೇಗೆ ಉತ್ತರಿಸುವುದು ಎಂದು ಆತಂಕಗೊಂಡಿದ್ದಾರೆ. ತಕ್ಷಣ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಕರೆಸಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ನಾವು ವ್ಯಾಸಂಗ ಮಾಡಿದ ಪಠ್ಯಕ್ಕೂ ಪ್ರಶ್ನೆ ಪತ್ರಿಕೆಗೂ ಸಂಬಂಧವೇ ಇಲ್ಲ. ಇದಕ್ಕೆ ನಾವು ಉತ್ತರಿಸಿದರೆ ತೀವ್ರ ಕಳಪೆ ಅಥವಾ ಅನುತ್ತೀರ್ಣ ಫಲಿತಾಂಶ ಗ್ಯಾರಂಟಿ ಎಂದು ತಿಳಿಸಿದ್ದಾರೆ.

ಕೊರೋನಾ : 5 ದಿನ ತರಗತಿಗಳು ಬಂದ್

ತಕ್ಷಣ ಎಚ್ಚೆತ್ತ ಮೇಲ್ಚಿಚಾರಕರು ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿದಾಗ, ಪ್ರಶ್ನೆ ಪತ್ರಿಕೆಗಳೂ ಅದಲು ಬದಲಾಗಿರುವುದು ಕಂಡುಬಂದಿದೆ. ಕೂಡಲೇ ವಿಶ್ವವಿದ್ಯಾಲಯಕ್ಕೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ನಂತರ ವಿವಿ ಕಳುಹಿಸಿದ ಹೊಸ ಪ್ರಶ್ನೆ ಪತ್ರಿಕೆಯನ್ನು ಕಾಲೇಜು ಹಂತದಲ್ಲೇ ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಪರೀಕ್ಷೆಯು 1.30 ಗಂಟೆ ವಿಳಂಬವಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿವಿಯ ಈ ಎಡವಟ್ಟು ಈಗ ಚರ್ಚೆಗೆ ಗ್ರಾಸವಾಗಿದೆ. ಕಾಲೇಜು ಹಂತದಲ್ಲಿ ಮುದ್ರಣ ಮಾಡಿ ಪ್ರಶ್ನೆ ಪತ್ರಿಕೆ ನೀಡಿದ್ದು ವಿವಿಯಲ್ಲಿ ಅನುಮಾನ, ಅಕ್ರಮದ ಆರೋಪಗಳಿಗೂ ಎಡೆಮಾಡಿಕೊಟ್ಟಿದೆ.

ತಾಂತ್ರಿಕ ದೋಷ

ಈ ಕುರಿತು ಸ್ಪಷ್ಟನೆ ನೀಡಿರುವ ಬೆಂಗಳೂರು ಕೇಂದ್ರ ವಿವಿ ಕುಲಸಚಿವ (ಮೌಲ್ಯಮಾಪನ) ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ. ಪ್ರಶ್ನೆ ಪತ್ರಿಕೆಯ ಕೋಡ್‌ನಲ್ಲಿ ಗೊಂದಲ ಉಂಟಾಗಿ ಬೇರೆ ವಿಷಯದ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳ ಕೈಸೇರಿತ್ತು. ಅನಂತರ ಇದನ್ನು ಸರಿಪಡಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.