ಕೆಂಗೇರಿಯ ಆರ್ ವಿ ಕಾಲೇಜ್ ಬಳಿಯಲ್ಲಿನ ಎಸ್‌ಆರ್‌ಎಸ್‌ ಬಸ್‌ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಮೂರು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಪಕ್ಕದಲ್ಲಿದ್ದ ಬಸ್‌ಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದ್ದು, ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.

ಬೆಂಗಳೂರು (ಡಿ.27): ಸಿಲಿಕಾನ್‌ ಸಿಟಿಯ ಕೆಂಗೇರಿಯ ಆರ್ ವಿ ಕಾಲೇಜ್ ಬಳಿಯಲ್ಲಿನ ಎಸ್‌ಆರ್‌ಎಸ್‌ ಬಸ್‌ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಮೂರು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಪಕ್ಕದಲ್ಲಿದ್ದ ಬಸ್‌ಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದ್ದು, ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.

ಕೆಂಗೇರಿ ಬಳಿಯ ಆರ್‌ವಿ ಕಾಲೇಜು ಬಳಿಯಲ್ಲಿ ಎಸ್‌ಆರ್‌ಎಸ್‌ ಬಸ್‌ಗಳನ್ನು ನಿಲ್ಲಿಸಲು ಸುಮಾರು ಮೂರ್ನಾಲ್ಕು ಎಕೆರೆಯಷ್ಟು ಬಯಲು ಪ್ರದೇಶವನ್ನು ಬಿಡಲಾಗಿದೆ. ಪ್ರತಿದಿನ ರಾತ್ರಿ ಪ್ರಯಾಣಿಕರನ್ನು ಕರೆದೊಯ್ಯವ ಬಸ್‌ಗಳನ್ನು ಹಗಲು ವೇಳೆಯಲ್ಲಿ ಕೆಂಗೇರಿ ಬಳಿಯ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಬಸ್‌ಗಳು ಖಾಸಗಿ ಡಿಪೋದೊಳಗೆ ಹೋಗುವಾಗ ಪಟ್ಟಣಗೆರೆಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಕೆಲವು ಹೊತ್ತು ಬಸ್‌ಗಳನ್ನು ಸಾಲಾಗಿ ನಿಲ್ಲಿಸಲಾಗುತ್ತಿತ್ತು. ಇದರಿಂದ ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗುತ್ತಿತ್ತು. ಈಗ ಡಿಪೋದ ಒಳಗೆ ನಿಲ್ಲಿಸಿದ್ದ ಬಸ್‌ಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಎರಡು ಬಸ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಬಸ್‌ನ ಒಳಗೆ ಬ್ಯಾಟರಿಗೆ ಕನೆಕ್ಷನ್‌ ಮಾಡಿದ್ದ ವೈರ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್‌ ಆಗಿದ್ದು, ಇದರಿಂದ ಬಸ್‌ನ ಒಳಗೆ ಬೆಂಕಿ ಹೊತ್ತಿಕೊಂಡಿದೆ. ಒಂದು ಬಸ್‌ನಲ್ಲಿ ಬೆಂಕಿ ಹರಡಿಕೊಂಡ ತಕ್ಷಣವೇ ಅದನ್ನು ಡಿಪೋ ಸಿಬ್ಬಂದಿ ಗಮನಿಸುವುದಕ್ಕೂ ಮುಂಚೆಯೇ ಮತ್ತೆರಡು ಬಸ್‌ಗೆ ಬೆಂಕಿ ವ್ಯಾಪಿಸಿಕೊಂಡಿದೆ. ಡಿಪೋದ ಸಿಬ್ಬಂದಿ ಬೆಂಕಿ ಆರಿಸಲು ನೀರು ಹಾಗೂ ಅಲ್ಲಿದ್ದ ಬೆಂಕಿ ನಿರೋಧಕವನ್ನು ಬಳಸಿದರಾದರೂ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ನಂದಿಸಲು ಸಾಧ್ಯವಾಗಿಲ್ಲ. ನಂತರ ಅಕ್ಕಪಕ್ಕದ ಬಸ್‌ಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಆದರೆ, ಖಾಲಿ ಬಸ್‌ ಅನ್ನು ಡಿಪೋದಲ್ಲಿ ನಿಲ್ಲಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

Bus Accident: ಆನೇಕಲ್‌ ಸಮೀಪ ಖಾಸಗಿ ಬಸ್‌ ಪಲ್ಟಿ: ಓರ್ವ ಮಹಿಳೆ ಸಾವು, ಹಲವರಿಗೆ ಗಂಭೀರ ಗಾಯ

ಬಸ್‌ ರಿಪೇರಿ ಸ್ಥಳದಲ್ಲಿ ಬೆಂಕಿ: ಇನ್ನು ಎಸ್‌ಆರ್‌ಎಸ್‌ ಡಿಪೋದಲ್ಲಿ ಬಸ್‌ಗಳನ್ನು ರಿಪೇರಿ ಮಾಡುತ್ತಿದ್ದ ಸ್ಥಳದಲ್ಲಿ ಬೆಂಕಿಗೆ ಆಹುತಿಯಾದ ಬಸ್‌ಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ರಿಪೇರಿ ಸ್ಥಳವನ್ನು ಬಿಟ್ಟು ಬೇರೆಡೆ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದರೆ ಇನ್ನೂ ಹೆಚ್ಚಿನ ಬಸ್‌ಗಳು ಸುಟ್ಟು ಕರಕಲಾಗುತ್ತಿದ್ದವು. ಅದೃಷ್ಟವಶಾತ್‌ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುವುದು ತಪ್ಪಿದೆ.