ಚಿತ್ರದುರ್ಗ (ಅ.08):  ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅಕ್ರಮ ನೇಮಕಾತಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಹಿಂದಿನ ಸಿಇಒ ಸತ್ಯಭಾಮ(ಈಗ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ), ಹಿರಿಯೂರು ತಾಪಂ ಇಒ ರಾಮಕುಮಾರ್‌ ಸೇರಿ 37 ಮಂದಿ ವಿರುದ್ಧ ಐಮಂಗಲ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಸತ್ಯಭಾಮ 5ನೇ ಆರೋಪಿಯಾಗಿದ್ದಾರೆ. ಜಿಪಂ ಸಿಇಒ ವಿರುದ್ದ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಗ್ರಾಪಂನ ನೀರಗಂಟಿ, ಸ್ವಚ್ಛತೆ ಹಾಗೂ ‘ಡಿ’ ಗ್ರೂಪ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಸ್ಥಳೀಯ ಸಂಸ್ಥೆಯ ಪೂರ್ವಾನುಮೋದನೆ ಪಡೆಯದೇ ನೇಮಕಾತಿ ಪ್ರಕ್ರಿಯೆ ನಡೆಸಿದ್ದನ್ನು ಪ್ರಶ್ನಿಸಿ 2018ರಲ್ಲಿ ಯರಬಳ್ಳಿ ಗ್ರಾಪಂ ಜನಪ್ರತಿನಿಧಿಯೊಬ್ಬರು ಸರ್ಕಾರಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್‌ ನೇಮಕಾತಿ ಅಕ್ರಮವಾಗಿದ್ದು, ಕೂಡಲೇ ರದ್ದುಪಡಿಸಿ ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದರು.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟವಿಲ್ಲ-2 ವಾರ ಕೊಡಿ : ರೋಹಿಣಿ ಸಿಂಧೂರಿ ..

ಯರಬಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕಂದೀಕೆರೆ ಜಗದೀಶ್‌ ಎಂಬುವರು ಪ್ರಕರಣವನ್ನು ನ್ಯಾಯಾಲಯದ ಅಂಗಳಕ್ಕೆ ಕೊಂಡೊಯ್ದು ಜಿಪಂ ಸಿಇಒ ಸತ್ಯಭಾಮಾ ಸೇರಿದಂತೆ ಹಿರಿಯೂರು ತಾಪಂ ಇಒ, ಜಿಪಂ ಸಿಬ್ಬಂದಿ, ಗ್ರಾಪಂ ಪಿಡಿಒ, ಪಂಚಾಯತ್‌ರಾಜ್‌ ಇಲಾಖೆಯ ಬೆಂಗಳೂರಿನ ಕೆಲವು ಉನ್ನತ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣ ಮೂರು ತಿಂಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ಹಿರಿಯೂರಿನ ಜೆಎಂಎಫ್‌ಸಿ ನ್ಯಾಯಾಲಯ ಕಳೆದ ಸೆಪ್ಟಂಬರ್‌ 25ರಂದು ಎಫ್‌ಐಆರ್‌ ದಾಖಲಿಸಲು ಆದೇಶ ಹೊರಡಿಸಿದೆ.