ಚಿಕ್ಕಬಳ್ಳಾಪುರ (ನ.25) :  ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಇತ್ತೀಚೆಗೆ ಪೊಲೀಸ್‌ ಪೇದೆಗಳ ನೇಮಕಾತಿಗೆ ನಗರದಲ್ಲಿ ನಡೆದ ದೈಹಿಕ ಪರೀಕ್ಷೆ ವೇಳೆ ಅಕ್ರಮವಾಗಿ ನೇಮಕಾತಿಗೆ ಕುಮ್ಮಕ್ಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಗುಪ್ತಚರ ಇಲಾಖೆ ಎಎಸ್‌ಐ ಸೇರಿ ನಾಲ್ವರ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಯಲ್ಲಿ ಎಸ್ಪಿಗೆ ಛಾಯಾಗ್ರಾಹಕರಾಗಿದ್ದ ಮುತ್ತುರಾಜ, ಎಸ್ಪಿ ಅಂಗರಕ್ಷಕ ಧನವಿಜಯ್‌ ರಾವ್‌, ಎಪಿಸಿ-166 ನಾಗೇಶ್‌ ಹಾಗೂ ರಾಜ್ಯ ಗುಪ್ತ ವಾರ್ತೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ್‌ ವಿರುದ್ಧ ದೂರು ದಾಖಲಾಗಿದೆ.

ಏನಿದು ಪ್ರಕರಣ:

ನಗರದ ಸರ್‌ಎಂವಿ ಜಿಲ್ಲಾ ಕ್ರಿಡಾಂಗಣದಲ್ಲಿ ಪೊಲೀಸ್‌ ಪೇದೆಗಳ ದೈಹಿಕ ಪರೀಕ್ಷೆ ನಡೆಯುವ ವೇಳೆ ಓಟದ ಪರೀಕ್ಷೆಯಲ್ಲಿ ಭಾಗವಹಿಸಿದಂತಹ ಅಭ್ಯರ್ಥಿಗಳಲ್ಲಿ ಅರ್ಹತೆ ಪಡೆಯದ ಕೆಲವು ಅಭ್ಯರ್ಥಿಗಳನ್ನು ಅರ್ಹರಿದ್ದಾರೆಂದು ಸುಳ್ಳು ಹೇಳಿ ಕರ್ತವ್ಯ ಲೋಪ ಮಾಡಿರುವುದು ವಿಡಿಯೋ ದೃಶ್ಯವಾಳಿಗಳಲ್ಲಿ ಕಂಡು ಬಂದಿತ್ತು. ಇದಕ್ಕೆ ಪೇದೆ ಮುತ್ತುರಾಜು, ಡಿಆರ್‌ ಸಿಬ್ಬಂದಿ ಧನವಿಜಯರ್‌ ರಾವ್‌, ಪೇದೆ ನಾಗೇಶ್‌ ಹಾಗೂ ಎಎಸ್‌ಐ ಸದಾನಂದ್‌ ಕಾರಣವೆಂದು ಆರೋಪಿಸಲಾಗಿದೆ.

25 ಲಕ್ಷದ ಲಾಟರಿ ಆಮಿಷ ತೋರಿಸಿ 1.38 ಲಕ್ಷ ವಂಚನೆ..! ...

ಚಿಕ್ಕಬಳ್ಳಾಪುರ ಡಿವೈಎಸ್‌ಪಿ ಹಾಗೂ ಚಿಂತಾಮಣಿ ಡಿವೈಎಸ್‌ಪಿ ರವರು ವಿಡಿಯೋ ಪರಿಶೀಲಿಸಿದಾಗ ಎಎಸ್‌ಐ ಸದಾನಂದ ಸೇರಿ ಮೂವರು ಪೇದೆಗಳು ಪೊಲೀಸ್‌ ನೇಮಕಾತಿ ವೇಳೆ ತಮ್ಮ ಸಂಬಂಧಿಕರಿಗೆ ನೆರವಾಗಲು ಅಕ್ರಮ ವೆಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌ ಕಚೇರಿಯ ಗುಪ್ತಶಾಖೆಯ ಪೊಲೀಸ್‌ ನಿರೀಕ್ಷಕ ಮುನಿಕೃಷ್ಣ ಡಿ.ಎಚ್‌. ಅವರು ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅನರ್ಹಗೊಂಡ ಅಭ್ಯರ್ಥಿಗಳು ಇವರು

ಪೊಲೀಸ್‌ ನೇಮಕಾತಿ ವೇಳೆ ಶ್ರೀನಾಥ್‌ ಡಿ.ವಿ, ರೆಡ್ಡಿದ್ಯಾವರಹಳ್ಳಿ, ಸಂಗಮೇಶ ಕುಂಬಾರ, ವಿಜಯಪುರ, ಅರುಣ್‌ ಕುಮಾರಿ.ಸಿ ಬಿನ್‌ ರುದ್ದಪ್ಪ, ಅಳಿಗಂಬಿಕೇರಿ, ಚಂದ್ರಪ್ಪ.ಎಲ್‌ ಬಿನ್‌ ಲಕ್ಷ್ಮಣಪ್ಪ, ಅಜ್ಜಹಳ್ಳಿ, ನವೀನ್‌ ಕುಮಾರ್‌ .ಎಚ್‌.ಪಿ, ಹುಲಿಕಟ್ಟೆ, ಗೌತಮ….ಎಸ್‌ ಮುಸ್ಟೂರು, ಮಧುಕುಮಾರ್‌.ಆರ್‌ ಗೌರಿಬಿದನೂರು ರವರು ನಿಗಧಿತ ಸಮಯದೊಳಗೆ ಓಟವನ್ನು ಪೂರ್ಣಗೊಳಿಸದೆ ಇದ್ದರೂ ಸಹ ಪೂರ್ಣಗೊಳಿಸಿದ್ದಾರೆಂದು ಸುಳ್ಳು ಮಾಹಿತಿಯನ್ನು ನೀಡಲಾಗಿತ್ತು.

ಈ ಪೈಕಿ ಗೌತಮ್‌ ಎಸ್‌. ಗುಪ್ತ ವಾರ್ತೆ ಎಎಸ್‌ಐ ಸದಾನಂದ ಪುತ್ರನಾಗಿದ್ದರೆ, ಅಭ್ಯರ್ಥಿ ಡಿ.ವಿ. ಶ್ರೀನಾಥ್‌ ಪೇದೆ ನಾಗೇಶ್‌ ಸಂಬಂಧಿ ಎಂದು ತಿಳಿದು ಬಂದಿದೆ.