ಬೆಂಗಳೂರು(ನ.25): ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ 25 ಲಕ್ಷ ಲಾಟರಿ ಬಹುಮಾನದ ಆಮಿಷವೊಡ್ಡಿ 1.38 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್‌ ನಿವಾಸಿ ರೂಪಾ ವಂಚನೆಗೊಳಗಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್‌ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ದೀರನ್‌ ಪ್ರತಾಪ್‌ ಸಿಂಗ್‌ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮನ್ಸೂರ್‌ ಇ-ಮೇಲಲ್ಲಿ ಲಂಚಾವತಾರ ಜಾತಕ..!

ನ.10ರಂದು ರೂಪಾಗೆ ಅಪರಿಚಿತ ನಂಬರ್‌ನಿಂದ ಕರೆ ಮಾಡಿ, ತನ್ನನ್ನು ದೀರನ್‌ ಪ್ರತಾಪ್‌ ಸಿಂಗ್‌ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಹೆಸರಿಗೆ 25 ಲಕ್ಷ ಲಾಟರಿ ಬಂದಿದೆ ಎಂದು ಆಧಾರ್‌ ಕಾರ್ಡ್‌, ಬ್ಯಾಂಕ್‌ ವಿವರ ಕೇಳಿದ್ದ. ಆರೋಪಿ ನಂಬಿದ್ದ ರೂಪಾ, ವಾಟ್ಸಾಪ್‌ ಮೂಲಕ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ವಿವರವನ್ನು ಕಳುಹಿಸಿದ್ದರು.

ಬಳಿಕ ಮತ್ತೆ ಕರೆ ಮಾಡಿದ್ದ ವ್ಯಕ್ತಿ, ಲಾಟರಿ ಹಣ 25 ಲಕ್ಷ ಪಡೆದುಕೊಳ್ಳಲು, ಜಿಎಸ್‌ಟಿ, ವಿಮೆ, ಅಕೌಂಟ್‌ ಅಪ್‌ಗ್ರೇಡ್‌ ಶುಲ್ಕ ಪಾವತಿಸಬೇಕು. ಇಲ್ಲವಾದರೆ ಹಣ ಸಿಗುವುದಿಲ್ಲ ಎಂದಿದ್ದ. ಆತನ ಮಾತು ನಂಬಿದ ರೂಪಾ, ಆರೋಪಿ ನೀಡಿದ್ದ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ 1.38 ಲಕ್ಷ ಸಂದಾಯ ಮಾಡಿದ್ದರು. ಹಣ ಪಾವತಿಸಿದ ಬಳಿಕ ಆರೋಪಿ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಈ ಸಂಬಂಧ ರೂಪಾ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.