ಚಿಕ್ಕಬಳ್ಳಾಪುರ: ಮಠಕ್ಕೆ ಸೇರಿದ ಕಟ್ಟಡ ತೆರವು, ನಗರಸಭೆ ಆಯುಕ್ತರ ಮೇಲೆ FIR
ತಡೆಯಾಜ್ಞೆ ಉಲ್ಲಂಘಿಸಿ ಮಠಕ್ಕೆ ಸೇರಿದ ಕಟ್ಟಡ ತೆರವುಗೊಳಿಸಿದ ಆರೋಪ| ವಾಪಸಂದ್ರದ ನಿಡುಮಾಮಿಡಿ ಮಠಕ್ಕೆ ಸೇರಿದ ಹಳೆ ಕಟ್ಟಡದ ಜಾಗ| ಪರಂಪರಾಗತ ಧಾರ್ಮಿಕ ಭಾವನೆಗಳಿಗೆ ಡಿ.ಲೋಹಿತ್ ಕುಮಾರ್ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ನಮೂದು|
ಚಿಕ್ಕಬಳ್ಳಾಪುರ(ಮಾ.20): ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಮಠಕ್ಕೆ ಸೇರಿದ ಹಳೆ ಕಟ್ಟಡವನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್ ಕುಮಾರ್ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ವಾಪಸಂದ್ರದ ನಿಡುಮಾಮಿಡಿ ಮಠಕ್ಕೆ ಸೇರಿದ ಹಳೆ ಕಟ್ಟಡಡದ ಜಾಗ ನಗರಸಭೆಗೆ ಸೇರಿದ ಆಸ್ತಿ ಎಂದು ಇತ್ತೀಚೆಗೆ ನಗರಸಭೆ ಆಯುಕ್ತ ಡಿ.ಲೋಹಿತ್ ಕುಮಾರ್ ಹಾಗೂ ಕಂದಾಯ ಶಾಖೆಯ ಸಿಬ್ಬಂದಿ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿದ್ದರು.
ಕಟ್ಟಡ ತೆರವು ಮಾಡಿದ್ದರ ವಿರುದ್ಧ ಮಠದ ಆಡಳಿತಾಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಡಿ.ಲೋಹಿತ್, ಕಂದಾಯ ಶಾಖೆಯ ಅಧಿಕಾರಿ ರಮೇಶ್ ಬಾಬು, ಬಿಲ್ ಕಲೆಕ್ಟರ್ ಗಿರೀಶ್, ಕೊಂಡಪ್ಪ, ಚಾಂದ್‌ಪಾಷ ಮೇಲೆ ಎಫ್‌ಐಆರ್ ದಾಖಲಾಗಿದೆ.
ನಿಡುಮಾಮಿಡಿ ಮಠದ ಆವರಣದಲ್ಲಿದ್ದ ಹಳೆ ದೇವಾಲಯವೊಂದರ ಕಟ್ಟಡಕ್ಕೆ ನಗರಸಭೆ ಆಯುಕ್ತರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಪ್ರವೇಶ ಮಾಡಿ ಜಮೀನಲ್ಲಿದ್ದ ಗದ್ದುಗೆಗಳು ಮತ್ತು 17ನೇ ಶತಮಾನದ ಪ್ರಾಚೀಲ ಶಿಲ್ಪಗಳನ್ನು ಜೆಸಿಬಿ ಮೂಲಕ ಒಡೆದು ಹಾಕಿದ್ದಾರೆ. ಇದರಿಂದ ಪರಂಪರಾಗತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
'ಬಿಜೆಪಿ ದೇಶಕ್ಕೆ ದೊಡ್ಡ ಆಪತ್ತು ಸೃಷ್ಟಿಸಿದೆ'
ವಿವಾದಿತ ಜಾಗ ನಗರಸಭೆ ಆಸ್ತಿಯೆಂದು ಕೆಳ ಹಂತದ ನ್ಯಾಯಾಲಯದಲ್ಲಿ ನಗರಸಭೆ ಪರವಾಗಿ ತೀರ್ಪು ಬಂದಿತ್ತು ಎನ್ನಲಾಗಿದೆ. ಆದರೆ ಕೆಳ ಹಂತದ ತೀರ್ಪು ಪ್ರಶ್ನಿಸಿ ನಿಡುಮಾಮಿಡಿ ಮಠ ಹೈಕೊರ್ಟ್‌ನಲ್ಲಿ ಕಟ್ಟಡ ತೆರವುಗೊಳಿಸದಂತೆ ತಡೆಯಾಜ್ಞೆ ತಂದಿದ್ದರು. ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಆಯುಕ್ತರು ಉಲ್ಲಂಘಿಸಿ ಕಟ್ಟಡ ತೆರವು ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿಕ್ರಿಯೆಗೆ ನಕಾರ:
ಇನ್ನೂ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರ ವಿರುದ್ದ ನಿಡುಮಾಮಿಡಿ ಮಠದ ವತಿಯಿಂದ ಎಫ್‌ಐಆರ್ ದಾಖಲಿಸಿರುವ ಕುರಿತು ಸ್ಥಳೀಯ ನಿಡುಮಾಮಿಡಿ ಮಠದ ಆಡಳಿತಾಧಿಕಾರಿ ಡಾ.ಕೆ.ಶಿವಜ್ಯೋತಿ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಾಮಾನ್ಯ ಸಭೆಗೆ ಆಯುಕ್ತರ ಗೈರು
ತಮ್ಮ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್ ಕುಮಾರ್ ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಗೂ ಗೈರಾಗಿದ್ದು ಕಂಡು ಬಂತು. ಮೊಬೈಲ್‌ಗೆ ಕರೆ ಮಾಡಿದರೂ ಸ್ಪೀಕರಿಸಲಿಲ್ಲ.