'ಬಿಜೆಪಿ ದೇಶಕ್ಕೆ ದೊಡ್ಡ ಆಪತ್ತು ಸೃಷ್ಟಿಸಿದೆ'

ಬಿಜೆಪಿ ತನ್ನ ದುರಾಡಳಿತ, ಜನ ವಿರೋಧಿ ಆರ್ಥಿಕ, ರೈತ ಹಾಗು ಕಾರ್ಮಿಕ ನೀತಿಗಳಿಂದ ದೇಶಕ್ಕೆ ದೊಡ್ಡ ಆಪತ್ತು ಸೃಷ್ಟಿಸಿದೆ ಎಂದು ಬಿಎಸ್‌ಪಿ ಮುಖಂಡರೋರ್ವರು ಅಸಮಾಧಾನ ಹೊರಹಾಕಿದರು. 

BSP Leader Slams BJP Leaders in chikkaballapura snr

 ಚಿಕ್ಕಬಳ್ಳಾಪುರ (ಮಾ.18):  ದೇಶದಲ್ಲಿ ಕಾಂಗ್ರೆಸ್‌ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಕೋಮುವಾದಿ ಬಿಜೆಪಿ ತನ್ನ ದುರಾಡಳಿತ, ಜನ ವಿರೋಧಿ ಆರ್ಥಿಕ, ರೈತ ಹಾಗು ಕಾರ್ಮಿಕ ನೀತಿಗಳಿಂದ ದೇಶಕ್ಕೆ ದೊಡ್ಡ ಆಪತ್ತು ಸೃಷ್ಟಿಸಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಮುನಿಯಪ್ಪ ಕಿಡಿಕಾರಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕ್ಯಾನ್ಷಿರಾಂ ಜನ್ಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಹುಜನರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಧರ್ಮದ ಉನ್ಮಾದ ಬೆಳೆಸುತ್ತಿದೆ :  ದೇಶವನ್ನು ಕಿತ್ತು ತಿನ್ನುವ ಬಡತನ, ನಿರುದ್ಯೋಗದಿಂದ ಯುವಕರ ಆತ್ಮಹತ್ಯೆ, ರೈತರ ಆತ್ಮಹತ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನ ಅಸ್ತವ್ಯವಸ್ಥೆಗೊಂಡಿದೆ. ಬ್ಯಾಂಕ್‌ ಹಣ ಲೂಟಿ, ರುಪಾಯಿ ಮೌಲ್ಯ ಕುಸಿತ, ದಲಿತ, ದಮನಿತರ ಮೇಲೆ ಕೊಲೆ, ಸುಲಿಗೆ, ದೌರ್ಜನ್ಯ ಹೆಚ್ಚಾಗಿದ್ದು ಮೋದಿ ಸರ್ಕಾರ ದೇಶದಲ್ಲಿ ಧರ್ಮದ ಉನ್ಮಾದ ಬೆಳೆಸುತ್ತಿದೆ. ಜನ ವಿರೋಧಿ ಕಾಯ್ದೆಗಳಿಂದ ದೇಶದ ರೈತರು, ಕಾರ್ಮಿಕರು ಆತಂಕದ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳನ್ನ ಹೊರಗೆ ಕಳುಹಿಸಿ ಮೀಟಿಂಗ್: ಉಪ ಚುನಾವಣೆಗೆ ರಣ ತಂತ್ರ ಹೆಣೆದ ಸಿಎಂ ...

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಪಿ.ವಿ.ನಾಗಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರ, ಅಲ್ಪಸಂಖ್ಯಾತರ ಹಾಗು ಹಿಂದುಳಿದ ವರ್ಗಗಳ ಮೇಲೆ ಹೆಚ್ಚು ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆಯೆಂದರು.

ಬಿಎಸ್ಪಿಯಿಂದ ಸರ್ವರಿಗೂ ಸಮಪಾಲು :  ಮೇಲ್ವರ್ಗದ ಮೀಸಲಾತಿ ಹೋರಾಟಗಳು ದಲಿತರ ಮೀಸಲಾತಿ ನಾಶ ಮಾಡುವ ಹುನ್ನಾರ ಎಂದು ಆರೋಪಿಸಿದ ಅವರು, ಬಹುಜನರು ಅಧಿಕಾರಕ್ಕೆ ಬಂದಾಗ ಮಾತ್ರ ಸಮಾಜದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ದೊರೆಯುತ್ತದೆಂದರು. ಕ್ಯಾನ್ಷಿರಾಂ ರವರ ರಾಜಕೀಯ ತತ್ವ, ಸಿದ್ದಾಂತಗಳ ಅವರ ಹೋರಾಟದ ಹಾದಿಯನ್ನು ಪ್ರತಿಯೊಬ್ಬ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಅನುಸರಿಸಬೇಕೆಂದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಮುನಿಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಗುರ್ರಯ್ಯ, ಮಾಜಿ ಜಿಲ್ಲಾಧ್ಯಕ್ಷ ಸೋಮಶೇಖರ್‌, ಜಿಲ್ಲಾ ಸಂಯೋಜಕರಾದ ಡಾ.ದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್‌, ಜಿಲ್ಲಾ ಕಾರ್ಯದರ್ಶಿ ಮೂರ್ತಿ, ಚಿಂತಾಮಣಿ ತಾಲೂಕು ಅಧ್ಯಕ್ಷ ಸುರೇಶ್‌, ಚಿಕ್ಕಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios