ಜೈ ಕಿಸಾನ್ ಮಾರುಕಟ್ಟೆ ಪದಾಧಿಕಾರಿಗಳು, ಅಧಿಕಾರಿಗಳ ವಿರುದ್ಧ FIR: ಶೀಘ್ರಗತಿ ತನಿಖೆಗೆ ಆಗ್ರಹ
• ಎಪಿಎಂಸಿಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ
• ನಕಲಿ ದಾಖಲೆ ಮೇಲೆ ಲೇಔಟ್ ನಕ್ಷೆ ಸಿದ್ಧಪಡಿಸಿದ ಆರೋಪ
• ತನಿಖೆ ಚುರುಕುಗೊಳಿಸಲು ರೈತ ಮುಖಂಡ ಸಿದಗೌಡ ಮೋದಗಿ ಆಗ್ರಹ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಏ.30): ಬೆಳಗಾವಿಯಲ್ಲಿ (Belagavi) ಎಪಿಎಂಸಿ ಮಾರುಕಟ್ಟೆಗೆ (APMC Market) ಸೆಡ್ಡು ಹೊಡೆದು ಜೈ ಕಿಸಾನ್ ಖಾಸಗಿ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಸ್ಥಾಪನೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಅನಧಿಕೃತವಾಗಿ ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ ಎಂಬ ಆರೋಪ ಬೆನ್ನಲ್ಲೇ ಖೊಟ್ಟಿ ದಾಖಲೆ ಸೃಷ್ಟಿ ಆರೋಪದಡಿ ಈ ಹಿಂದೆ ಇದ್ದಂತಹ ಅಧಿಕಾರಿಗಳ ವಿರುದ್ಧ ಹಾಗೂ ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿರೋದು ಗೊತ್ತಿರುವ ವಿಚಾರ.
ಇಂದು ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಪಿಎಂಸಿ ವರ್ತಕರು, ರೈತ ಮುಖಂಡರು ಹಾಗೂ ಆಪ್ ಮುಖಂಡರು ಪ್ರಕರಣದ ಶೀಘ್ರಗತಿ ತನಿಖೆಗೆ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಜೈ ಕಿಸಾನ್ ಹೆಸರಿನಲ್ಲಿ ಖಾಸಗಿ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಸ್ಥಾಪನೆಯಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಅನಧಿಕೃತವಾಗಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದ್ದು ಅದನ್ನು ಬಂದ್ ಮಾಡುವಂತೆ ಆಗ್ರಹಿಸಿ ಕಳೆದ 75 ದಿನಗಳಿಂದ ರೈತರು, ಎಪಿಎಂಸಿ ವರ್ತಕರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ.
Cabinet Expansion: ಹೈಕಮಾಂಡ್‌ನತ್ತ ಬೊಟ್ಟು ಮಾಡಿದ ಸಿಎಂ: ಸಚಿವಾಕಾಂಕ್ಷಿಗಳಲ್ಲಿ ಹೆಚ್ಚಿದ ಟೆನ್ಷನ್..!
ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ರೈತ ಮುಖಂಡ ಸಿದಗೌಡ ಮೋದಗಿ ಆರೋಪಿಸಿದ್ದಾರೆ. ಈಗ ಖಾಸಗಿ ಮಾರುಕಟ್ಟೆ ಇರುವ ಬೆಳಗಾವಿಯ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಜಮೀನು ಸರ್ವೇ ನಂಬರ್ 677, 678, 686/1, 686/2, 696/1, 697/2, 698/1 ಹಾಗೂ 698/2ರಲ್ಲಿ ಒಟ್ಟು ವಿಸ್ತೀರ್ಣ 8 ಎಕರೆ 34 ಗುಂಟೆ ಜಮೀನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವ ವೇಳೆ ಭೂ ಬಳಕೆ ಬದಲಾವಣೆಯಂತ ಪ್ರಮುಖ ದಾಖಲೆಗಳಲ್ಲಿ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಹೈಕೋರ್ಟ್ ನಿರ್ದೇಶನ ಮೇರೆಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ಈ ಹಿಂದಿನ ಜಿಲ್ಲಾಧಿಕಾರಿ, ತಹಶಿಲ್ದಾರ್, ಬುಡಾ ಆಯುಕ್ತರು ಸೇರಿ ಇತರ ಅಧಿಕಾರಿಗಳು ಹಾಗೂ ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ್ ಪಾಟೀಲ್ ಸೇರಿ ಇತರರ ವಿರುದ್ಧ ರೈತ ಮುಖಂಡ ಸಿದಗೌಡ ಮೋದಗಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ನ್ಯಾಯಾಲಯದ ಸೂಚನೆಯ ಮೆರೆಗೆ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಸಹಕಾರ ಮಾಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ.
'ನಮ್ಮ ಹೋರಾಟದ ಯಶಸ್ಸಿನ ಮೊದಲ ಭಾಗ': ಈ 2014-15ರ ವೇಳೆ ಬೆಳಗಾವಿಯಲ್ಲಿದ್ದ ಅಧಿಕಾರಿಗಳು ಹಾಗೂ ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವುದು ನಮ್ಮ ಹೋರಾಟದ ಯಶಸ್ಸಿನ ಮೊದಲ ಭಾಗ ಎಂದು ರೈತ ಮುಖಂಡ ಸಿದಗೌಡ ಮೋದಗಿ ತಿಳಿಸಿದ್ದಾರೆ. 2014-15ರಲ್ಲಿ ಬೆಳಗಾವಿಯಲ್ಲಿ ಇದ್ದ ಜಿಲ್ಲಾಧಿಕಾರಿ, ತಹಶಿಲ್ದಾರ್, ಬುಡಾ ಆಯುಕ್ತರು ದಾಖಲೆ ತಿದ್ದುವ ಕೆಲಸ ಮಾಡಿದ್ದರು. ನ್ಯಾಯಸಮ್ಮತ ದಾಖಲೆಯನ್ನು ನಾವು ನೀಡಿದ್ದೇವು, ದಾಖಲೆ ನೀಡಿದಾಗಲೂ ಅಧಿಕಾರಿಗಳು ನಮಗೆ ಸ್ಪಂದನೆ ನೀಡಲಿಲ್ಲ ಅಂತಾ ರೈತ ಮುಖಂಡ ಸಿದಗೌಡ ಮೋದಗಿ ಆರೋಪಿಸಿದ್ದಾರೆ.
ಅಂದು ಯಾರು ಡಿಸಿ, ತಹಶಿಲ್ದಾರ್ ಇದ್ದರು ಎಂಬ ಪ್ರಶ್ನೆಗೆ ಉತ್ತರಿಸುತ್ತಾ 2014-15ರಲ್ಲಿ ಬೆಳಗಾವಿ ಡಿಸಿ ಎನ್ ಜಯರಾಮ್ ಸರ್ ಇದ್ದರೂ ಹಾಗೂ ತಹಶಿಲ್ದಾರ್ ಆಗಿ ಈಗಿನ ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ಇದ್ದರು ಎಂದು ತಿಳಿಸಿದ್ದಾರೆ. 'ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಶೀಘ್ರದಲ್ಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಸಂಸ್ಥೆಯಾದ ಎಪಿಎಂಸಿ ಖಾಸಗಿ ಮಾರುಕಟ್ಟೆ ಮುಂದೆ ಮಂಡಿಯೂರಿದೆ. ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಿಸುವಂತೆ 75 ದಿನಗಳಿಂದ ನಿರಂತರ ಹೋರಾಟ ಮಾಡಿದ್ದೇವೆ. ಯಾವುದು ಪ್ರಯೋಜನವಾಗಿಲ್ಲ. ಎಪಿಎಂಸಿ ಕಚೇರಿಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಕುಳಿತ ವೇಳೆ ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿ ತನಿಖೆ ಮಾಡುವುದಾಗಿ ಹೇಳಿ ಇಲ್ಲಿಯವರೆ ಅದು ಏನಾಗಿದೆ ಎಂದು ಸ್ಪಷ್ಟವಾಗಿಲ್ಲ' ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ ನಮಗೆ ತಾಯಿ ಸಮಾನ-ಸೂರ್ಯ, ಚಂದ್ರ ಇರೋವರೆಗೂ ಕನ್ನಡ ಇರುತ್ತೆ: ಸಚಿವ ಕಾರಜೋಳ
ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಆರೋಪ: ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಮಾತನಾಡಿ, 'ಸಿದ್ದಲಿಂಗಪ್ಪ ಬಾವಿ 2011ರಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಹೆಸರಿನ ಮೇಲೆ ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಜೈ ಕಿಸಾನ್ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಎನ್ ಎ ಲೇಔಟ್ ಗೆ ಅರ್ಜಿ ಸಲ್ಲಿಸಿದ್ದರು. ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಅಧಿಕಾರಿಗಳು ಹಾಗೂ ಸರ್ಕಾರ ಸಹಕಾರ ಮಾಡಿದೆ. ಪ್ರಕರಣ ದಾಖಲಾದ ಅಧಿಕಾರಿಗಳ ಮೇಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದ್ದರಿಂದ ಸಹಜವಾಗಿ ಎಪಿಎಂಸಿ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ ನಿರ್ದೇಶನ ಮೇರೆಗೆ ಎಫ್ಐಆರ್ ದಾಖಲಾಗಿದ್ದು ಶೀಘ್ರಗತಿಯಲ್ಲಿ ತನಿಖೆ ನಡೆಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂಬುದು ಎಪಿಎಂಸಿ ವರ್ತಕರು, ರೈತ ಮುಖಂಡರ ಆಗ್ರಹ.