ಕಲಬುರಗಿ: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಕೊನೆಗೂ ದಕ್ಕಿದ ಸರ್ಕಾರದ ನೆರವು
ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕಲಬುರಗಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಲಾಗಿದ್ದ ಆರ್ಥಿಕ ನೆರವು ಸಮಯಕ್ಕೆ ಸರಿಯಾಗಿ ಕೈ ಸೇರದೆ ಸದರಿ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಗ್ಗೆ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್‌ಸೈಟ್ ವರದಿಯೊಂದನ್ನ ಪ್ರಕಟಿಸಿತ್ತು
ಕಲಬುರಗಿ(ಮಾ.14): ಮುಂಬೈ ಭೂಗತ ಲೋಕದ ನಂಟಿರುವ ಮುನ್ನಾ ಜೊತೆಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕಲಬುರಗಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಸರ್ಕಾರದಿಂದ 11.92 ಲಕ್ಷ ರೂ. ಆರ್ಥಿಕ ನೆರವು ನೀಡಿದೆ ಅಂತ ಡಿಜಿಪಿ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.
ಡಿಜಿಪಿ ಕರ್ನಾಟಕ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಡಿಜಿಪಿ ಪ್ರವೀಣ್ ಸೂದ್ ಅವರು, ಹುತಾತ್ಮರಾದ ಕಲಬುರಗಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ 11.92 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಆರ್ಥಿಕ ನೆರವು ನೀಡಲು ತಾಂತ್ರಿಕ ಕಾರಣದಿಂದ ತಡವಾಗಿದೆ. ಆದರೆ ಮಲ್ಲಿಕಾರ್ಜುನ ಬಂಡೆಯವರ ಮಕ್ಕಳಿಗೆ ನಮ್ಮ ಕ್ಷಮೆ ಅಂತ ಬರೆದುಕೊಂಡಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕಲಬುರಗಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಲಾಗಿದ್ದ ಆರ್ಥಿಕ ನೆರವು ಸಮಯಕ್ಕೆ ಸರಿಯಾಗಿ ಕೈ ಸೇರದೆ ಸದರಿ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಗ್ಗೆ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್‌ಸೈಟ್ ವರದಿಯೊಂದನ್ನ ಪ್ರಕಟಿಸಿತ್ತು. ವರದಿ ಪ್ರಕಟವಾದ ಬಳಿಕ ಎಚ್ಚೆತ್ತ ಸರ್ಕಾರ ಹುತಾತ್ಮರಾದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡಿದೆ.
ಕಲಬುರಗಿ: ಹುತಾತ್ಮ ಪಿಎಸ್‌ಐ ಬಂಡೆ ಮಕ್ಕಳ ಪೋಷಣೆ ಮರೆತ ಸರ್ಕಾರ
2014 ರ ಜನೆವರಿಯಲ್ಲಿ ಕಲಬುರಗಿ ಸಾಕ್ಷಿಯಾಗಿದ್ದ ಗುಂಡಿನ ಕಾಳಗದಲ್ಲಿ ತಲೆಗೆ ಗಂಡು ತಗುಲಿ ಗಾಯಗೊಂಡಿದ್ದ ಪಿಎಸ್‌ಐ ಬಂಡೆ ಜೀವನ್ಮರಣ ಹೋರಾಟ ನಡೆಸಿ ಜ.15ರಂದು ಸಾವನ್ನಪ್ಪಿದ್ದು ದೇಶಾದ್ಯಂತ ಗಮನ ಸೆಳೆದಿತ್ತು. ದಿ. ಬಂಡೆ ಬದುಕಿದ್ದರೆ ವಯೋನಿವೃತ್ತಿ ಹೊಂದುತ್ತಿದ್ದ ದಿನಾಂಕದವರೆಗೆ ಅವರು ಮರಣ ಹೊಂದಿದ್ದ ಸಮಯದಲ್ಲಿ ಪಡೆಯುತ್ತಿದ್ದ ವೇತನ ಮೊತ್ತ ಕುಟುಂಬಕ್ಕೆ ಪಾವತಿಸಲು ಸರ್ಕಾರ ಆದೇಶ ಮಾಡಿತ್ತು.
ವೇತನ ಪಾವತಿ ಏಕಾಏಕಿ ಸ್ಥಗಿತ:
ಆದೇಶದಂತೆ ಕುಟುಂಬಕ್ಕೆ 2019ರ ವರೆಗೂ ವೇತನ ಪಾವತಿಯಾಗಿ, ಕಳೆದ 4 ವರ್ಷದಿಂದ ಏಕಾಏಕಿ ಸ್ಥಗಿತಗೊಂಡಿದ್ದು ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ತಮಗಾಗಿರುವ ತೊಂದರೆಯನ್ನು ಕಲಬುರಗಿ ಎಸ್ಪಿ ಕಚೇರಿಯಿಂದ ಹಿಡಿದು ಬೆಂಗಳೂರು ಡಿಐಜಿ ಕಚೇರಿವರೆಗೂ ಪತ್ರ ಮೂಲಕ, ಮನವಿಗಳೊಂದಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಅಪ್ರಾಪ್ತ ಮಕ್ಕಳ ಪೋಷಣೆಯ ಹೊಣೆ ಹೊತ್ತವರು ಚಿಂತೆಗೀಡಾಗಿದ್ದರು.
ಪಗಾರ- ಶಾಲಾ ಶುಲ್ಕ ಪಾವತಿ ಇಲ್ಲ:
ಬಂಡೆ ಸಾವಾದ 2 ವರ್ಷ (2016ರಲ್ಲಿ) ದಲ್ಲೇ ಪತ್ನಿ ಮಲ್ಲಮ್ಮ ಸಾವಾಯ್ತು. ಮಕ್ಕಳಾದ ಶಿವಾನಿ ಹಾಗೂ ಸಾಯಿ ದರ್ಶನ್ ಅನಾಥರಾದಾಗ ಮಕ್ಕಳ ಪೋಷಕರಾಗಿ ರಮಾದೇವಿ ಮರಡಿ (ಬಂಡೆ ಪತ್ನಿ ಮಧು ಅಕ್ಕ) ಗೆ ಕೋರ್ಟ್ ನೇಮಕ ಮಾಡಿದೆ. ಶಿವಾನಿ ಹಾಗೂ ಸಾಯಿ ದರ್ಶನ ಅಪ್ಪಾ ಶಾಲೆಯಲ್ಲಿ 9ನೇ ಹಾಗೂ 5ನೇ ತರಗತಿಯಲ್ಲಿದ್ದಾರೆ. ಶಾಲಾ ವಾರ್ಷಿಕ ವೆಚ್ಚ ತಲಾ 1.50 ಲಕ್ಷ ರು, ಮಕ್ಕಳ ಶಿಕ್ಷಣಕ್ಕೆಂದು ಇಬ್ಬರಿಗೂ ಸರ್ಕಾರ ತಲಾ 12 ಸಾವಿರ ರು. ನೀಡುತ್ತಿತ್ತು. ಈಗ ಈ ಹಣವೂ ಸಂದಾಯವಾಗುತ್ತಿಲ್ಲ. ವಾಹನ, ಬೋಧನಾ ಶುಲ್ಕ ಪಾವತಿಯೂ ಕಷ್ಟವಾಗಿದೆ.
41 ತಿಂಗಳ ವೇತನ 13.21 ಲಕ್ಷ ರು ಪಾವತಿಯಾಗಿಲ್ಲ:
ಆದೇಶದಂತೆ ಪಿಎಸ್‌ಐ ಬಂಡೆ ಸಾವನ್ನಪ್ಪಿದ್ದ ಸಂದರ್ಭದಲ್ಲಿ ಅವರು ಪಡೆಯುತ್ತಿದ್ದ 32,226 ರು. ಮೊತ್ತದ ಮಾಸಿಕ ವೇತನವನ್ನೇ ಕುಟುಂಬಕ್ಕೆ ಸರ್ಕಾರ ಪಾವತಿಸಬೇಕು. ಆದರೆ 2019ರ ಅಕ್ಟೋಬರ್‌ನಿಂದ 2023ರ ಫೆಬ್ರುವರಿ ವರೆಗಿನ 41 ತಿಂಗಳ ವೇತನ ಮೊತ್ತ 13.21 ಲಕ್ಷ ರು. ಪಾವತಿಯಾಗಿಲ್ಲ. ತುಟ್ಟಿಭತ್ಯೆ, 2 ಬಾರಿ ವೇತನ ಪರಿಷ್ಕರಣೆಯಾದರೂ ಲಾಭ ಬಂಡೆ ಕುಟುಂಬಕ್ಕೆ ದಕ್ಕಿರಲಿಲ್ಲ.
ಕಚೇರಿ ಅಲೆದರೂ ಪ್ರತಿಫಲವಿಲ್ಲ:
41 ತಿಂಗಳ ವೇತನ ಗ್ರಹಣ ಮೋಕ್ಷ ಕೋರಿ ಬಂಡೆ ಮಕ್ಕಳ ಪೋಷಕರು ಕಲಬುರಗಿ ಎಸ್ಪಿ ಕಚೇರಿಯಿಂದ ಬೆಂಗಳೂರಿನ ಡಿಐಜಿ ಕಚೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದಿಯಾಗಿ ಹಲವು ಕಚೇರಿ ಅಲೆದರೂ ಪ್ರಯೋಜನವಾಗಿರಲಿಲ್ಲ.
ಅಂದು ಮಕ್ಕಳಿಗಾಗಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್, ಇಂದು ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದ!
ಪತ್ರದಲ್ಲೇ ಕಾಲಹರಣ:
ಹುತಾತ್ಮ ಬಂಡೆ ಪ್ರಕರಣದಲ್ಲಿ ವೇತನ ಯಾವ ಲೆಕ್ಕದಲ್ಲಿ ಕೂಡಿ ಕಳೆದು ಪಾವತಿಸಬೇಕು ಎಂಬುದೇ ಕಗ್ಗಂಟಾಗಿರೋದು ಕಲಬುರಗಿ ಎಸ್ಪಿ ಕಚೇರಿಯಿಂದ ಡಿಐಡಿಯವರಿಗೆ ಬರೆದ ಪತ್ರದಲ್ಲಿ ತಂಡಿದೆ. ವೇತನವನ್ನು ಯಾವ ಲೆಕ್ಕ ಶೀರ್ಷಿಕೆಯಡಿಯಲ್ಲಿ ಹಾಗೂ ಯಾವ ಕ್ಲೇಮ್‌ನಲ್ಲಿ ಡಾ ಮಾಡಿ ದಿ. ಬಂಡೆ ಅವರ ಅಪ್ರಾಪ್ತ ಮಕ್ಕಳ ಪೋಷಕರಿಗೆ ನೀಡಬೇಕೆಂಬ ಸ್ಪಷ್ಟೀಕರಣ ಕೋರಲಾಗಿದೆ, ಕೆ 2 ತಂತ್ರಾಂಶ ಸಮಸ್ಯೆ, ಖಜಾನೆ, ಖಜಾನೆ ಆಯುಕ್ತರ ಕಚೇರಿಗಳಿಂದಲೂ ಮಾಹಿತಿ ಸ್ಪಷ್ಟವಾಗಿಲ್ಲವೆಂಶ ಪತ್ರದಲ್ಲಿದೆ. ಕಳೆದ 4 ವರ್ಷದಿಂದ ಪತ್ರ ವ್ಯವಹಾರದಲ್ಲೇ ಕಾಲಹರಣವಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ!
ಬಂಡೆಯವರ ವೇತನ ಅಪ್ರಾಪ್ತ ಮಕ್ಕಳಿಗೆ ನೆರವಾಗುವಂತೆ ವಾರದೊಳಗೆ ಪಾವತಿಯಾಗದೆ ಹೋದಲ್ಲಿ ಮಕ್ಕಳಿಬ್ಬರ ಸಮೇತ ಕಲಬುರಗಿ ಎಸ್ಪಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ. ನೆರವು ನೀಡೋದಾಗಿ ಹೇಳಿ ಈ ರೀತಿ ಅಲಕ್ಷತನ ತೋರೋದು ಸರಿಯಲ್ಲ, ನಮ್ಮದೂ ಸಹನೆ ಮೀರಿದೆ, ಹೀಗಾಗಿ ನಮಗಾಗಿರುವ ನೋವು- ಯಾತನೆ ಬಹಿರಂಗವಾಗಿ ಹೇಳಿಕೊಂಡಿದ್ದೇವೆ ಅಂತ ಬಂಡೆ ಅಪ್ರಾಪ್ತ ಮಕ್ಕಳ ಪೋಷಕರು ರಮಾದೇವಿ ಹಣಮಂತ ಮರಡಿ ತಿಳಿಸಿದ್ದರು.