ಹಿರೇಕೆರೂರು(ನ.30): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿ.ಸಿ. ಪಾಟೀಲ ಉಂಡು ಹೋದ, ಕೊಂಡು ಹೋದ ಎಂದಿರುವುದು ಸತ್ಯ. ಆದರೆ ಸಿದ್ದರಾಮಯ್ಯ ಕೊಟ್ಟ ನೋವನ್ನು ಉಂಡು ಸ್ವಾಭಿಮಾನವನ್ನು ಕೊಂಡು ಹೋದವರು ಎಂದು ಚಲನಚಿತ್ರ ನಟಿ ಶೃತಿ ತಿರುಗೇಟು ನೀಡಿದ್ದಾರೆ.

ಅವರು ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳ ಅಣಜಿ, ತಡಕನಹಳ್ಳಿ ಹಳಿಯಾಳ, ಪುರದಕೇರಿ, ಕಿರಗೇರಿ, ಮಡ್ಲೂರು, ಗುಡ್ಡದಮಾದಾಪುರ, ಚಿಕ್ಕಮತ್ತೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್‌ ಮತಯಾಚನೆ ನಡೆಸಿ ಅವರು ಮಾತನಾಡಿದರು.

ಈ ಹಿಂದೆ ಹಿರೇಕೆರೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ಬಿ.ಸಿ. ಪಾಟೀಲ ವಿರೋಧವಾಗಿ ಭಾಷಣ ಮಾಡಿದ್ದೆ. ಒಬ್ಬ ಉತ್ತಮ ನಾಯಕ ಎಂಥಹ ಕೆಟ್ಟ ಪಕ್ಷದಲ್ಲಿದ್ದಾರೆ ಎಂದು. ಆದರೆ ನನಗೆ ಈಗ ಸಂತೋಷವಾಗುತ್ತಿದೆ, ಉತ್ತಮ ನಾಯಕ ಉತ್ತಮ ಪಕ್ಷದಲ್ಲಿದ್ದಾರೆ ಎಂದು. ಬಿ.ಸಿ. ಪಾಟೀಲರಗೆ ಕಾಂಗ್ರೆಸ್‌ ಎಂಬುದೇ ಒಂದು ಕಳಂಕವಾಗಿತ್ತು. ಹಣ ಅಧಿಕಾರ ಹಾಗೂ ಸ್ವಾರ್ಥಕ್ಕಾಗಿ ಅವರು ರಾಜೀನಾಮೆ ನೀಡಲಿಲ್ಲ. ಅವರು ರಾಜೀನಾಮೆ ನೀಡಿದ್ದು ಸ್ವಾಭಿಮಾನಕ್ಕಾಗಿ. ಸಮ್ಮಿಶ್ರ ಸರ್ಕಾರದ ಕಿತ್ತಾಟ ಹಾಗೂ ಒಳಜಗಳವನ್ನು ನೋಡಿ ಅವರು ಹೊರಬಂದರು ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು ನಮ್ಮ ಪಾಲಿಗೆ ಸುವರ್ಣಯುಗ. ನೀವು ಬಿ.ಸಿ. ಪಾಟೀಲರಿಗೆ ಮತಹಾಕುವುದು ಒಬ್ಬ ಶಾಸಕನ ಆಯ್ಕೆಗಾಗಿ ಅಲ್ಲ, ಒಬ್ಬ ಮಂತ್ರಿಗಾಗಿ ಎಂಬುದನ್ನು ಮರೆಯಬಾರದು. ಎಲ್ಲರೂ ತಪ್ಪದೆ ಕಮಲಕ್ಕೆ ಮತಹಾಕುವ ಮೂಲಕ ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಹಾಗೂ ಹಿರೇಕೆರೂರ ಉಪಚುನಾವಣೆ ಉಸ್ತವಾರಿ ದತಾತ್ರೇಯ, ತಾಲೂಕು ಅಧ್ಯಕ್ಷ ಎಸ್‌.ಆರ್‌.ಅಂಗಡಿ, ಮಹೇಶ ಗುಬ್ಬಿ, ನಿಂಗಪ್ಪ ಚಳಗೇರಿ, ರಾಘವೇಂದ್ರ ರಂಗಕ್ಕನವರ, ಮನೋಜ ಹಾರ್ನಳ್ಳಿ, ನವೀನ ಪಾಟೀಲ, ಇತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.