ನಾಗಮಂಗಲ ಕ್ಷೇತ್ರದ ಸಮಾಜ ಸೇವಕ ಫೈಟರ್‌ ರವಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಯುವ ಮುಖಂಡ ಎಸ್‌.ಸಚ್ಚಿದಾನಂದ ಬಿಜೆಪಿ ಬಾವುಟ ಹಿಡಿಯುವುದರೊಂದಿಗೆ ಕಮಲ ಪಾಳಯ ಸೇರಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಸ ಹುರಿಯಾಳುಗಳು ದೊರಕಿದ್ದು, ಇದರೊಂದಿಗೆ ಜಿಲ್ಲೆಯ ಚುನಾವಣಾ ಅಖಾಡ ಮತ್ತಷ್ಟುರಂಗೇರಿಸಿಕೊಂಡಿದೆ.

 ಮಂಡ್ಯ (ನ.29) : ನಾಗಮಂಗಲ ಕ್ಷೇತ್ರದ ಸಮಾಜ ಸೇವಕ ಫೈಟರ್‌ ರವಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಯುವ ಮುಖಂಡ ಎಸ್‌.ಸಚ್ಚಿದಾನಂದ ಬಿಜೆಪಿ ಬಾವುಟ ಹಿಡಿಯುವುದರೊಂದಿಗೆ ಕಮಲ ಪಾಳಯ ಸೇರಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಸ ಹುರಿಯಾಳುಗಳು ದೊರಕಿದ್ದು, ಇದರೊಂದಿಗೆ ಜಿಲ್ಲೆಯ ಚುನಾವಣಾ ಅಖಾಡ ಮತ್ತಷ್ಟುರಂಗೇರಿಸಿಕೊಂಡಿದೆ.

ಬೆಂಗಳೂರಿನಲ್ಲಿ (Bengaluru) ನಡೆದ ಸರಳ ಸಮಾರಂಭದಲ್ಲಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನೇತೃತ್ವದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಶಾಸಕ ಸುರೇಶ್‌ಗೌಡ ಟಾರ್ಗೆಟ್‌:

ಕಳೆದ ಏಳೆಂಟು ತಿಂಗಳಿಂದ ನಾಗಮಂಗಲ ಕ್ಷೇತ್ರದೊಳಗೆ ಸಮಾಜಸೇವೆ ಹೆಸರಿನಲ್ಲಿ ಫೈಟರ್‌ ರವಿ ಬಿರುಸಿನ ಸಂಚಾರ ನಡೆಸುತಿದ್ದರು. ಶಾಲೆಗಳಿಗೆ (School) ಶುದ್ಧ ಕುಡಿಯುವ ನೀರಿನ ಘಟಕ, ಪ್ರೊಜೆಕ್ಟರ್‌, ಕ್ರೀಡಾ ಸಾಮಗ್ರಿಗಳ ವಿತರಣೆ, ಆರೋಗ್ಯ ಮೇಳ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಕ್ಷೇತ್ರದಲ್ಲಿರುತ್ತಾ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು.

ದೀಪಾವಳಿ ವೇಳೆಗೆ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ ಫೈಟರ್‌ ರವಿ, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಟಿಕೆಟ್‌ ಸಿಗುವುದಿಲ್ಲವೆಂಬುದನ್ನು ಮನಗಂಡು ಅಂತಿಮವಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಇದರಿಂದ ನಾಗಮಂಗಲದಲ್ಲಿ ಕಾಂಗ್ರೆಸ್‌-ಜೆಡಿಎಸ್‌ಗೆ ಪೈಪೋಟಿ ನೀಡುವುದಕ್ಕೆ ಪ್ರಬಲ ಹುರಿಯಾಳು ಬಿಜೆಪಿಗೆ ದೊರಕಿದಂತಾಗಿದೆ. ಟಿಕೆಟ್‌ ಫೈಟ್‌ಗೆ ನಾಗಮಂಗಲದಲ್ಲಿ ಅಭ್ಯರ್ಥಿಗಳೇ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಫೈಟರ್‌ ರವಿ ಬಿಜೆಪಿ ಪರ ಚುನಾವಣಾ ಕದನ ನಡೆಸಲು ಸಜ್ಜಾಗಿದ್ದಾರೆ.

ಜೆಡಿಎಸ್‌ ಶಾಸಕ ಕೆ.ಸುರೇಶ್‌ಗೌಡರನ್ನು ಗುರಿಯಾಗಿಸಿಕೊಂಡು ಕ್ಷೇತ್ರ ಪ್ರವೇಶಿಸಿರುವಂತೆ ಫೈಟರ್‌ ರವಿ ಕಂಡುಬರುತ್ತಿದ್ದಾರೆ. ಕಳೆದ ಮೂರು ಚುನಾವಣೆಗಳಿಂದ ಸತತವಾಗಿ ಸುರೇಶ್‌ಗೌಡರಿಗೆ ಚುನಾವಣಾ ಸಮಯದಲ್ಲಿ ಆರ್ಥಿಕ ನೆರವು ನೀಡುತ್ತಾ ಫೈಟರ್‌ ರವಿ ಬೆಂಬಲವಾಗಿ ನಿಂತಿದ್ದರು ಎನ್ನಲಾಗಿದೆ. ಆದರೆ, ಆ ಕೃತಜ್ಞತೆ ಇಲ್ಲದೆ ಸುರೇಶ್‌ಗೌಡರು ಫೈಟರ್‌ ರವಿ ವಿರುದ್ಧವೇ ತಿರುಗಿಬಿದ್ದು ಸಾಕಷ್ಟುತೊಂದರೆ ನೀಡಿದರು. ಇದೇ ಕಾರಣಕ್ಕೆ ಸುರೇಶ್‌ಗೌಡರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದಕ್ಕೆ ನೇರವಾಗಿ ಫೈಟರ್‌ ರವಿ ಅವರೇ ಚುನಾವಣಾ ಅಖಾಡ ಪ್ರವೇಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸುರೇಶ್‌ಗೌಡರು ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಬಾರದು. ಇದು ಫೈಟರ್‌ ರವಿ ಗುರಿಯಾಗಿದ್ದು, ಅದಕ್ಕೆ ಪೂರಕವಾಗಿ ಚುನಾವಣಾ ಅಖಾಡದಲ್ಲಿದ್ದುಕೊಂಡೇ ಸುರೇಶ್‌ಗೌಡರಿಗೆ ಸೋಲುಣಿಸುವುದಕ್ಕೆ ಸಂಕಲ್ಪ ಮಾಡಿದ್ದಾರೆ. ಇದರಿಂದ ನಾಗಮಂಗಲ ರಾಜಕೀಯ ರೋಚಕತೆ ಪಡೆದುಕೊಂಡಿದೆ.

ಯಾರಿಗೆ ಮುಳುವಾಗುವರು ಸಚ್ಚಿದಾನಂದ:

ಅಂಬರೀಶ್‌ ಇದ್ದ ಕಾಲದಿಂದಲೂ ಕಾಂಗ್ರೆಸ್‌ ಪಾಳಯದೊಳಗೇ ಗುರುತಿಸಿಕೊಂಡಿದ್ದ ಯುವ ಮುಖಂಡ ಎಸ್‌.ಸಚ್ಚಿದಾನಂದ ಇದೀಗ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನಿರ್ಧಾರಕ್ಕೆ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಅವರನ್ನು ಬೆಂಬಲಿಸಿದ್ದರಿಂದ ಸಚ್ಚಿದಾನಂದ ಉಚ್ಛಾಟನೆಗೊಂಡಿದ್ದರು. ಆ ನಂತರ ಸುಮಲತಾ ಬೆಂಬಲಿಗರ ಪಾಳಯದಲ್ಲಿ ಗುರುತಿಸಿಕೊಂಡು ಬಂದಿದ್ದರು.

ಇದೀಗ ಸಂಸದೆ ಸುಮಲತಾ ಸೂಚನೆಯಂತೆ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಶ್ರೀರಂಗಪಟ್ಟಣದಲ್ಲೂ ಹೊಸ ಅಭ್ಯರ್ಥಿ ಕಮಲ ಪಡೆಗೆ ದೊರಕಿದಂತಾಗಿದೆ. ಶ್ರೀಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ಹೆಸರಿನಲ್ಲಿ ಕೊರೋನಾದಿಂದ ಮೃತಪಟ್ಟಬಡ ಕುಟುಂಬದವರಿಗೆ ಆರ್ಥಿಕ ನೆರವು, ಋುತುಮತಿಯಾದವರಿಗೆ ಪೌಷ್ಟಿಕ ಆಹಾರ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದೊಳಗೆ ಗುರುತಿಸಿಕೊಂಡಿದ್ದ ಎಸ್‌.ಸಚ್ಚಿದಾನಂದ 2018ರ ಚುನಾವಣೆಯಲ್ಲೇ ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ರಮೇಶ್‌ ಬಂಡಿಸಿದ್ದೇಗೌಡ ಪಕ್ಷ ಸೇರ್ಪಡೆಯಿಂದ ಟಿಕೆಟ್‌ ದೊರಕಿರಲಿಲ್ಲ. ನಂತರದಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದರಿಂದ ಮತ್ತೆ ಆ ಪಕ್ಷದತ್ತ ಮುಖ ಮಾಡಲಿಲ್ಲ. 2023ರ ಚುನಾವಣೆಗೆ ಸ್ಪರ್ಧಿಸಿದಲ್ಲಿ ಕಾಂಗ್ರೆಸ್‌ ಮತ ಬ್ಯಾಂಕ್‌ಗೆ ಕೈ ಹಾಕುವ ಸಾಧ್ಯತೆಗಳಿವೆ. ಇದು ಕಾಂಗ್ರೆಸ್‌ನವರಲ್ಲಿ ಹೊಸ ಆತಂಕ ಮೂಡಿಸಿದೆ. ಸಚ್ಚಿದಾನಂದ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ಕೈಬಿಟ್ಟುಹೋಗುವ ಸಾಧ್ಯತೆಗಳಿರುವುದರಿಂದ ಎಸ್‌.ಸಚ್ಚಿದಾನಂದ ಸ್ಪರ್ಧೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರಿಗೆ ತಲೆಬಿಸಿ ಉಂಟುಮಾಡಿದೆ.

ಕಾಂಗ್ರೆಸ್‌ ಚುನಾವಣೆಯಲ್ಲಿ ನೇರವಾಗಿ ಜೆಡಿಎಸ್‌ ಟಾರ್ಗೆಟ್‌ ಮಾಡಿಕೊಂಡಿದ್ದರೂ ಸಹ ನಾಗಮಂಗಲ ಮತ್ತು ಶ್ರೀರಂಗಪಟ್ಟಣದಲ್ಲಿ ಕಮಲ ಪಾಳಯದಿಂದ ಕಣಕ್ಕಿಳಿಯಲು ಸಿದ್ಧರಾಗಿರುವ ಎಸ್‌.ಸಚ್ಚಿದಾನಂದ ಹಾಗೂ ಫೈಟರ್‌ ರವಿ ಯಾರಿಗೆ ಮುಳುವಾಗುವರು, ಯಾರ ಗೆಲುವಿಗೆ ನೆರವಾಗುವರು ಎನ್ನುವುದನ್ನು ಕಾದುನೋಡಬೇಕಿದೆ.