ನಾಗಮಂಗಲ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಸಮಾಜ ಸೇವಕ ಫೈಟರ್‌ ರವಿ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಪರಸ್ಪರ ಭೇಟಿಯಾಗಿರುವುದು ಸಾಕಷ್ಟುಕುತೂಹಲ ಮೂಡಿಸಿದೆ.

ನಾಗಮಂಗಲ(ಅ.31): ನಾಗಮಂಗಲ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಸಮಾಜ ಸೇವಕ ಫೈಟರ್‌ ರವಿ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಪರಸ್ಪರ ಭೇಟಿಯಾಗಿರುವುದು ಸಾಕಷ್ಟುಕುತೂಹಲ ಮೂಡಿಸಿದೆ.

ತಾಲೂಕಿನ ಬೆಂಗಳೂರು- ಮಂಗಳೂರು (Bengaluru ) ರಾಷ್ಟ್ರೀಯ ಹೆದ್ದಾರಿ (Highway) ಬದಿಯ ವೈಶಾಲಿ ಹೋಟೆಲ್‌ನಲ್ಲಿ .ಶಿವರಾಮೇಗೌಡ ಮತ್ತು ಫೈಟರ್‌ ರವಿ ಇಬ್ಬರೂ ಒಟ್ಟಿಗೆ ಕುಳಿತು 2023ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಹಾಲಿ ಶಾಸಕ ಸುರೇಶ್‌ಗೌಡರನ್ನು ಶತಾಯಗತಾಯ ಸೋಲಿಸಲು ಹಟಕ್ಕೆ ಬಿದ್ದಿರುವ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಹೋಟೆಲ್‌ನಿಂದ ಜೊತೆಯಾಗಿ ಹೊರ ಬರುತ್ತಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಾತುಕತೆ ವೇಳೆ ಫೈಟರ್‌ ರವಿ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ ಎಲ….ಆರ್‌.ಶಿವರಾಮೇಗೌಡರು ಸಮಾಜ ಸೇವೆ ಮೂಲಕ ನೀವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಈವರೆಗೂ ಯಾವೊಬ್ಬ ರಾಜಕಾರಣಿಯೂ ಸಹ ಮಾಡಿಲ್ಲ. ನಿಮ್ಮ ಅತ್ಯದ್ಭುತ ಸೇವೆಗಳು ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತವೆ. ಈ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಎಲ….ಆರ್‌ ಶಿವರಾಮೇಗೌಡರು, ನಾನು ಭಾನುವಾರ ಬೆಳ್ಳೂರು ಹೋಬಳಿಯಲ್ಲಿ ಪ್ರವಾಸದಲ್ಲಿದ್ದ ವೇಳೆ ಕಾಫಿ ಕುಡಿಯಲೆಂದು ಹೋಟೆಲ್‌ಗೆ ತೆರಳಿದ್ದೆ. ಅದೇ ಹೋಟೆಲ್‌ಗೆ ಬಂದ ಫೈಟರ್‌ ರವಿ ಅವರಿಗೆ ಹಸ್ತಲಾಘವ ನೀಡಿ ಉಭಯ ಕುಶಲೋಪರಿ ವಿಚಾರಿದೆ. ಮಧ್ಯಾಹ್ನದ ಊಟಕ್ಕೆ ಬಂದಿರುವುದಾಗಿ ರವಿ ತಿಳಿಸಿದರು ಅಷ್ಟೆ. ಆದರೆ, ರಾಜಕೀಯವಾಗಿ ಯಾವುದೇ ಚರ್ಚೆ ನಡೆಸಲಿಲ್ಲ. ಇದೊಂದು ಆಕಸ್ಮಿಕ ಮತ್ತು ಸೌಜನ್ಯದ ಭೇಟಿಯಷ್ಟೆಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಸ್ಪರ್ಧೆ ಖಚಿತ

ನಾಗಮಂಗಲ

ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಜನರು ನನಗೆ ಆಶೀರ್ವದಿಸಿ ಬೆಂಬಲಿಸಬೇಕೆಂದು ಸಮಾಜ ಸೇವಕ ಫೈಟರ್‌ ರವಿ ಮನವಿ ಮಾಡಿದರು.

ತಾಲೂಕಿನ ದೊಡ್ಡಜಟಕ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ ಅನ್ನದಾಸೋಹ ಭವನ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಜೊತೆಗೆ ರಾಜಕೀಯವಾಗಿ ಮತ್ತಷ್ಟುಶಕ್ತಿಪಡೆದು ತಾಲೂಕಿನ ಎಲ್ಲ ವರ್ಗದ ಜನರ ಬದುಕು ಹಸನಗೊಳಿಸಬೇಕೆಂಬ ಆಶಯ ನನ್ನದಾಗಿದೆ. ಇದಕ್ಕೆ ಬೆಂಬಲ ನೀಡಬೇಕು. ನಾನು ಮಾಡುತ್ತಿರುವ ಸಮಾಜ ಸೇವೆ ಕೆಲ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವ ಜೊತೆಗೆ ನನ್ನ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಇವರ ದೌರ್ಜನ್ಯಕ್ಕೆ ಹೆದರಿ ನಾನು ಸಮಾಜ ಸೇವೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನಿಂದ ಅಭ್ಯರ್ಥಿಯಾಗಲು ನಾನು ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಜೆಡಿಎಸ್‌ ಟಿಕೆಟ್‌ ನಿರಾಕರಿಸಿ ಬೇರೆ ಯಾವುದೇ ಪಕ್ಷಗಳು ಟಿಕೆಟ್‌ ಕೊಟ್ಟರೂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಂತೂ ನಿಶ್ಚಿತ. ನೀವೆಲ್ಲರೂ ನನಗೆ ಪ್ರೋತ್ಸಾಹಿಸಬೇಕು ಎಂದರು.

ಗ್ರಾಮಸ್ಥರ ಕೋರಿಕೆ ಮೇರೆಗೆ ದಾಸೋಹ ಭವನ ನಿರ್ಮಾಣಕ್ಕೆ ವೈಯುಕ್ತಿಕವಾಗಿ 1.5ಲಕ್ಷ ರು. ಆರ್ಥಿಕ ನೆರವು ನೀಡಿದ್ದೇನೆ. ತಾಲೂಕಿನ ಎಲ್ಲ ಮಕ್ಕಳು ಮತ್ತು ಜನಸಾಮಾನ್ಯರು ಆರೋಗ್ಯವಂತರಾಗಿ ಶಾಂತಿ ನೆಮ್ಮದಿಯ ಬದುಕು ನಡೆಸಬೇಕೆಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳೂ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಮತ್ತು ಆರೋಗ್ಯ ಸೇವೆ ಒದಗಿಸುತ್ತಿದ್ದೇನೆ. ಇದು ನನ್ನ ಜೀವಿತಾವಧಿವರೆಗೂ ಮುಂದುವರಿಯುತ್ತದೆ ಎಂದರು.

ಬಳಿಕ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಜಾತ್ರಾಮಹೋತ್ಸವದಲ್ಲಿ ಶ್ರೀ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಗೆ ಹೆಗಲುಕೊಟ್ಟಫೈಟರ್‌ ರವಿ ಅವರನ್ನು ಗ್ರಾಮಸ್ಥರು ಗೌರವಿಸಿದರು.