ಉಡುಪಿ(ಮೇ.08): ಕುಂದಾಪುರದ ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಸ್ಥಳೀಯ ಮತ್ತು ಉತ್ತರಕನ್ನಡ ಜಿಲ್ಲೆಯ ಮೀನುಗಾರರ ನಡುವೆ ಮೀನುಗಾರಿಕೆ ವಿಷಯದಲ್ಲಿ ಜಟಾಪಟಿ ನಡೆದಿದ್ದು, ಉಕ ಜಿಲ್ಲೆಯ ದೋಣಿಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ.

ಭಟ್ಕಳ ಎಂಟು ಪರ್ಸಿನ್‌ ಮೀನುಗಾರಿಕಾ ದೋಣಿಗಳು ಗುರುವಾರ ಗಂಗೊಳ್ಳಿ ಬಂದರಿಗೆ ಪ್ರವೇಶ ಮಾಡಿದ್ದವು. ಅವುಗಳಲ್ಲಿ ಹೊರರಾಜ್ಯ - ಹೊರಜಿಲ್ಲೆಯ ಸುಮಾರು 20 ಮಂದಿ ಮೀನುಗಾರರಿದ್ದರು. ಇದಕ್ಕೆ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದರು.

ಕೊರೋನಾಗೆ ತತ್ತರಿಸಿದ ಮೀನುಗಾರರು, ವಿಶೇಷ ಪ್ಯಾಕೇಜ್ ಕೇಳಿದ ಶಾಸಕ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಲವು ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿಂದ ಬಂದ ಮೀನುಗಾರರಿಂದ ಅದು ಉಡುಪಿಯಲ್ಲಿ ಹರಡಬೇಡಿ ಎಂದು ಗಂಗೊಳ್ಳಿ ಮೀನುಗಾರರು ತಗಾದೆ ತೆಗೆದು, ಭಟ್ಕಳದ ದೋಣಿಗಳು ಬಂದರಿನಲ್ಲಿ ಲಂಗರು ಹಾಕಲು ಅಡ್ಡಿಪಡಿಸಿದರು. ಇದರಿಂದ ಉಭಯ ಜಿಲ್ಲೆಯ ಮೀನುಗಾರರ ನಡುವೆ ಪರಸ್ಪರ ಮಾತಿನ ವಿನಮಯ ನಡೆಯಿತು.

ಈ ಬಗ್ಗೆ ಮಾಹಿತಿ ಪಡೆದ ಬಂದರಿನ ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಲಾಕ್‌ಡೌನ್‌ ಸಂಪೂರ್ಣ ತೆರವಾಗಿ, ಮೀನುಗಾರಿಕೆ ಆರಂಭವಾಗುವವರೆಗೆ ಹೊರರಾಜ್ಯ - ಹೊರಜಿಲ್ಲೆಗಳ ದೋಣಿಗಳಿಗೆ ಉಡುಪಿ ಜಿಲ್ಲೆಯ ಬಂದರು ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯ ಮೀನುಗಾರರು ಅಧಿಕಾರಿಗಳನ್ನು ಒತ್ತಾಯಿಸಿದರು.

ಇಂದಿನಿಂದ ಕಾರವಾರದಲ್ಲಿ ಕಡಲಿಗಿಳಿಯುತ್ತೆ ಮೀನು ಬೇಟೆ ಬೋಟುಗಳು..!

ನಂತರ ಅಧಿಕಾರಿಗಳು ಕರಾವಳಿ ಕಾವಲು ಪಡೆಯ ಪೊಲೀಸರ ಸಹಾಯದಿಂದ ಭಟ್ಕಳದ ದೋಣಿಗಳನ್ನು ಮೀನುಗಾರರ ಸಹಿತ ಹಿಂದಕ್ಕೆ ಕಳುಹಿಸಿದರು. ಲಾಕ್‌ ಡೌನ್‌ ಇರುವುದರಿಂದ ನಾಡ ದೋಣಿಗಳನ್ನು ಬಿಟ್ಟು ಬೇರೆ ದೋಣಿಗಳಲ್ಲಿ ಮೀನುಗಾರಿಕೆಗೆ ನಿರ್ಬಂಧ ಇದೆ. ಈ ನಿರ್ಬಂಧವನ್ನು ಉಲ್ಲಂಘಿಸಿದ ಈ ಮೀನುಗಾರರ ವಿವರಗಳನ್ನು ಸಂಗ್ರಹಿಸಿ, ಉಕ ಜಿಲ್ಲೆಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ ತಿಳಿಸಿದ್ದಾರೆ.