ಮಂಗಳೂರು(ಫೆ.06): ನಗರದ ಬೆಂದೂರ್‌ವೆಲ್‌ ಬಳಿ ಬುಧವಾರ ರಸ್ತೆ ಮಧ್ಯೆ ಖಾಸಗಿ ಸಿಟಿ ಬಸ್‌ ಚಾಲಕರ ನಡುವೆ ಹೊಡೆದಾಟ ನಡೆದಿದೆ. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಇತ್ತಂಡ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳಾದೇವಿಯಿಂದ ಸುರತ್ಕಲ್‌ಗೆ ಹೋಗುವ ಎರಡು ಸಿಟಿ ಬಸ್‌ಗಳ ಚಾಲಕರು ಆಗ್ನೇಸ್‌ ಕಾಲೇಜು ಎದುರಿನ ರಸ್ತೆಯಲ್ಲಿ ಸಮಯದ ವಿಚಾರದಲ್ಲಿ ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ವಾಹನ ದಟ್ಟಣೆಯಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ಕಲಬುರಗಿ ಸಾಹಿತ್ಯ ಸಮ್ಮೇಳನ: ನಿರೀಕ್ಷೆಗೂ ಮೀರಿ ಜನ, ಊಟಕ್ಕೆ ನೂಕುನುಗ್ಗಲು

ಈ ಸಂದರ್ಭ ಕಾರು ಚಾಲಕರೊಬ್ಬರು ಎರಡೂ ಬಸ್‌ ಚಾಲಕರ ನಡುವಿನ ಹೊಡೆದಾಟವನ್ನು ಬಿಡಿಸಿ ಬಸ್‌ ಚಲಾಯಿಸಿಕೊಂಡು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ಇಬ್ಬರೂ ತಮ್ಮ ಬಸ್‌ಗಳನ್ನು ಚಲಾಯಿಸಿಕೊಂಡು ತೆರಳಿದ್ದಾರೆ. ಹೊಡೆದಾಟದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ. ಹೊಡೆದಾಟದ ಸಂದರ್ಭ ಎರಡೂ ಬಸ್‌ಗಳ ನಿರ್ವಾಹಕರು ಕೈ ಕಟ್ಟಿಕೊಂಡು ನೋಡಿದರೇ ವಿನಃ ಜಗಳ ಬಿಡಿಸುವ ಗೋಜಿಗೆ ಹೋಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಗರದಲ್ಲಿ ಸಿಟಿ ಬಸ್‌ಗಳ ಚಾಲಕರು ಸಮಯದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಮಾತಿನ ಚಕಮಕಿ ನಡೆಸುವುದು ಸಾಮಾನ್ಯವಾಗಿದೆ. ಸ್ಪರ್ಧಾತ್ಮಕವಾಗಿ ಅತಿ ವೇಗದಿಂದ ಬಸ್‌ ಚಾಲನೆ ಮಾಡುವುದು ಕಂಡು ಬರುತ್ತಿದೆ. ದ್ವಿಚಕ್ರ ಸವಾರರು ಹಾಗೂ ಬಸ್‌ನಲ್ಲಿರುವ ಪ್ರಯಾಣಿಕರು ಪ್ರಾಣ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಸಂಚಾರಿ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಎರಡು ಬಸ್‌ಗಳ ಮಾಲೀಕರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.