ಫೆಂಗಲ್ ಚಂಡಮಾರುತ ಪರಿಣಾಮ: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದ ಮೇಲೂ ಉಂಟಾಗಿದೆ. ಭಾನುವಾರ ಇಡೀ ದಿನ ಮಳೆ ಸುರಿದು, ಚಳಿ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ.
ಕೋಲಾರ (ಡಿ.01): ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಫೆಂಗಲ್ ಚಂಡಮಾರುತ ಉಂಟಾಗಿದ್ದು, ಇದರ ಪರಿಣಾಮ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದ ಮೇಲೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಇಡೀ ದಿನ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು, ಚಳಿ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತದಿಂದ ನಾಳೆ ಸೋಮವಾರ (ಡಿ.02) ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಾಯುಭಾರ ಕುಸಿತದಿಂದ ಫೆಂಗಲ್ ಚಂಡಮಾರುತ ಚೆನ್ನೈ ನಗರಕ್ಕೆ ಅಪ್ಪಳಿಸಿದ್ದು, ಇದರ ಪರಿಣಾ ಕೋಲಾರದ ಮೇಲೂ ಬೀರಿದೆ. ಕೋಲಾರದಲ್ಲಿ ಬೆಳಗ್ಗೆಯಿಂದ ಮಳೆ ಬೀಳುತ್ತಿದ್ದು, ಅತಿ ಹೆಚ್ಚು ಚಳಿ ಉಂಟಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸೋಮವಾರ ಅಂದರೆ ಡಿ.2ರಂದು ಒಂದು ದಿನದ ಮಟ್ಟಿಗೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ.
ಇನ್ನು ಈ ಒಂದು ದಿನದ ರಜೆಯನ್ನು ಮುಂದಿನ ಯಾವುದಾದರೂ ಒಂದು ರಜಾ ದಿನದಲ್ಲಿ ಪರ್ಯಾಯವಾಗಿ ಶಾಲಾ, ಕಾಲೇಜು ತರಗತಿಯನ್ನು ನಡೆಸುವ ಮೂಲಕ ನಾಳೆಯ ರಜೆಯನ್ನು ಸರಿದೂಗಿಸಬೇಕು. ಈ ಷರತ್ತಿಗೆ ಒಳಪಟ್ಟು ಕೋಲಾರ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ನಾಳೆಯ ದಿನ ಹೊರಗೆ ಹೋಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ಇದನ್ನೂ ಓದಿ: ನಟಿ ಶೋಭಿತಾಳ ಜೀವನದ ಗುಟ್ಟು ಬಿಚ್ಚಿಟ್ಟ ಗ್ರಾಮಸ್ಥರು; ಕಣ್ಣೀರಿಟ್ಟ ತಾಯಿ ದೇವಕಿ!
ಚಿಕ್ಕಬಳ್ಳಾಪುರ ಜಿಲ್ಲೆ ಶಾಲಾ ಕಾಲೇಜುಗಳಿಗೂ ರಜೆ: ಫೆಂಗಲ್ ಚಂಡಮಾರುತರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಒಂದು ದಿನದ ಮಟ್ಟಿಗೆ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ರಜಾ ದಿನದ ಕಲಿಕಾ ಪ್ರಕ್ರಿಯೆಗಳನ್ನ ಮುಂದಿನ ಸರ್ಕಾರಿ ರಜೆ ದಿನಗಳಲ್ಲಿ ಸರಿದೂಗಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.