ಆಸ್ಪತ್ರೆಯ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಒಂದು ಪತ್ತೆಯಾಗಿದೆ. ಈ ಬಗ್ಗೆ ಹಲವು ರೀತಿ ಅನುಮಾನಗಳು ಮೂಡಿವೆ.

ಮಾಗಡಿ (ಸೆ.23) : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡಿನ ಶೌಚಾಲಯದಲ್ಲಿ ಏಳುವರೆ ತಿಂಗಳಿನ ಮೃತ ಹೆಣ್ಣು ಶಿಶುವಿನ ಭ್ರೂಣ ಪತ್ತೆಯಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ರೋಗಿಗಳ ವಾರ್ಡಿನಲ್ಲಿರುವ ಶೌಚಾಲಯಕ್ಕೆ ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ನಾನ್‌ ಕ್ಲಿನಿಕ್‌ ಸಿಬ್ಬಂದಿಯೊಬ್ಬರು ತೆರಳಿದ್ದಾರೆ. ಈ ಸಮಯದಲ್ಲಿ ಅಲ್ಲಿ ಹೆಣ್ಣು ಮಗುವಿನ ಭ್ರೂಣ ಇರುವುದನ್ನು ಗಮನಿಸಿ ತಕ್ಷಣ ಕರ್ತ​ವ್ಯ​ದ​ಲ್ಲಿದ್ದ ವೈದ್ಯರಿಗೆ ವಿಷಯವನ್ನು ತಿಳಿಸಿದ್ದು, ಅವರು ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಬಾಣಂತಿ ಈ ಆಹಾರ ಸೇವಿಸಿದರೆ ಶಿಶುವಿಗೆ ಹೃದ್ರೋಗ! ಎಚ್ಚರ .

ಪೊಲೀಸ್‌ ಠಾಣೆಗೆ ದೂರು : ಆರೋಗ್ಯ ವೈದ್ಯಾಧಿಕಾರಿ ರಾಜೇಶ್‌ ಅವರು ಆಸ್ಪತ್ರೆಯ ಮಹಿಳಾ ರೋಗಿಗಳ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಕಂಡು ಬಂದಿದೆ ಎಂದು ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ವೀಕ್ಷಿಸಿದ್ದು ಯಾವುದೇ ಅನುಮಾನಸ್ಪದ ಘಟನೆಗಳು ಕಂಡು ಬಂದಿಲ್ಲದಿದ್ದರೂ ಸಹ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಆರೋಗ್ಯ ವೈದ್ಯಾಧಿಕಾರಿ ರಾಜೇಶ್‌ ಮಾತನಾಡಿ, ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಎರಡು ಹೆರಿಗೆ ಕೇಸ್‌ಗಳು ಬಂದಿದ್ದು, ಇಲ್ಲಿಯೇ ಹೆರಿಗೆ ಆಗಿವೆ. ಆದರೆ, ಮಹಿಳಾ ರೋಗಿಗಳ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಹೇಗೆ ಬಂದಿದೆ ಎಂದು ತಿಳಿದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದು, ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ ಎಂದು ಪ್ರತಿ​ಕ್ರಿ​ಯಿ​ಸಿ​ದರು.