ನೆರೆ ಇಳಿಕೆ : ಈಗ ಎದುರಾಗಿದೆ ಮತ್ತೊಂದು ಭೀತಿ
ಭಾರೀ ಪ್ರಮಾಣದಲ್ಲಿ ಮಳೆಯಿಂದ ಎದುರಾಗಿದ್ದ ಪ್ರವಾಹ ಪರಿಸ್ಥಿತಿ ಇದೀಗ ಕೊಂಚ ತಗ್ಗಿದೆ. ಆದರೆ ಇದೇ ಬೆನ್ನಲ್ಲೇ ಜನರಲ್ಲಿ ಮತ್ತೊಂದು ರೀತಿಯಾದ ಆತಂಕ ಮನೆ ಮಾಡಿದೆ.
ಶಿವಮೊಗ್ಗ [ಆ.12]: ಸಂತ್ರಸ್ತರನ್ನು ಸಂರಕ್ಷಿಸುವ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ನೆರೆಯೂ ಇಳಿದಿದೆ. ಇದೀಗ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ ಮಹತ್ತರ ಜವಾಬ್ದಾರಿ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಹೆಗಲಿಗೆ ಏರಿದೆ.
ಶಿವಮೊಗ್ಗ ನಗರದ ಸುಮಾರು 16 ಬಡಾವಣೆಗಳಿಗೂ ಅಧಿಕ ಕಡೆಗಳಿಗೆ ನೀರು ನುಗ್ಗಿತ್ತು. ನುಗ್ಗಿದ್ದು ಕೇವಲ ತುಂಗೆಯ ನೀರು ಮಾತ್ರವಲ್ಲ, ಶಿವಮೊಗ್ಗದ ಬಹುತೇಕ ಗಲೀಜು ಈ ಬಡಾವಣೆಗಳಿಗೆ ನುಗ್ಗಿದ ನೀರಿಗೆ ಸೇರ್ಪಡೆಗೊಂಡಿದೆ. ಇದೇ ನೀರು ಮನೆಯೊಳಗೂ ನುಗ್ಗಿದೆ. ಮನೆಯ ನೀರು ಸಂಗ್ರಹ ತೊಟ್ಟಿಗೂ ಇಳಿದಿದೆ. ಹೀಗಾಗಿ ಈ ಗಲೀಜನ್ನು ಪೂರ್ಣವಾಗಿ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಇದರಿಂದ ಸಾಂಕ್ರಾಮಿಕ ರೋಗದ ಸಾಧ್ಯತೆ ಇನ್ನಷ್ಟುಹೆಚ್ಚಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತುಂಗೆ ಮೂಲಕ ಸತ್ತ ಜಲಚರಗಳು ಕೂಡ ಬಡಾವಣೆಯ ಚರಂಡಿ ಮತ್ತಿತರ ಪ್ರದೇಶಗಳಲ್ಲಿ ಇರುವ ಸಾಧ್ಯತೆ ಇದೆ. ಇವುಗಳ ಬಗ್ಗೆ ಗಮನ ಹರಿಸಬೇಕಾಗಿದೆ. ನೀರು ಇಳಿಯುತ್ತದ್ದಂತೆ ಭಾನುವಾರ ಬೆಳಗ್ಗೆಯೇ ನಗರದ ವಿವಿಧ ಬಡಾವಣೆಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕುವ ಕೆಲಸ ನಗರಪಾಲಿಕೆಯಿಂದ ನಡೆದಿದೆ.