ಹುಬ್ಬಳ್ಳಿ(ಜು. 01): ಹಾರ್ಡ್‌ವೇರ್‌ ಶಾಪ್‌ನಲ್ಲಿ ಕಳ್ಳತನ ಮಾಡಿರುವ ಆರೋಪಿಗೆ ಕೋವಿಡ್‌-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಾನಗರ ಉಪನಗರ ಪೊಲೀಸ್‌ ಠಾಣೆ ಸಿಬ್ಬಂದಿಗೆ ಕೊರೋನಾ ಭೀತಿ ಮೂಡಿದೆ. ಆರೋಪಿ ಸಂಪರ್ಕಕ್ಕೆ ಬಂದಿದ್ದ 24 ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಇಲ್ಲಿನ ನೀಲಿಜನ್‌ ಹಾರ್ಡ್‌ವೇರ್‌ ಅಂಗಡಿಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮುಷ್ಕಗಿರಿ ಮೂಲದ ಈತ ಸದ್ಯ ಗದಗದ ಬೆಟಗೇರಿಯ ಚರ್ಚ್‌ ಮಿಷನ್‌ ಕಾಂಪೌಂಡ್‌ ಬಳಿ ನಿವಾಸಿ. ಬಂಧನದ ಬಳಿಕ ಕ್ವಾರಂಟೈನ್‌ನಲ್ಲಿದ್ದ ಈತನನ್ನು ಕೊರೋನಾ ತಪಾಸಣೆಗೆ ಒಳಪಡಿಸಲಾಗಿತ್ತು. ಮಂಗಳವಾರ ಈತನಿಗೆ ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಇದರಿಂದಾಗಿ ಉತ್ತರ ವಿಭಾಗದ ಎಸಿಪಿ ಎಸ್‌.ಎಂ. ರಾಗಿ, ಪಿಐ ಸುಂದರೇಶ ಹೊಳೆಣ್ಣವರ, ಬಿ.ಕೆ. ಹೂಗಾರ ಸೇರಿದಂತೆ 24 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಆತಂಕ ಮೂಡಿದೆ.

ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್‌, ಮತ್ತೆ 17 ಕೊರೋನಾ ಪಾಸಿಟಿವ್‌

ಈಗಾಗಲೇ ಎಲ್ಲ ಅಧಿಕಾರಿಗಳ ಸ್ವ್ಯಾಬ್‌ ಪರೀಕ್ಷೆ ಮಾಡಲಾಗಿದ್ದು, ವರದಿ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ಇನ್ನು, ಉಪನಗರ ಪೊಲೀಸ್‌ ಠಾಣೆಯನ್ನು ಮಂಗಳವಾರ ಸ್ಯಾನಿಟೈಸ್‌ ಮಾಡಲಾಗಿದೆ ಎಂದು ಪಿಐ ಸುಂದರೇಶ ಹೊಳೆಣ್ಣವರ ತಿಳಿಸಿದರು.