ಕಲಬುರಗಿ: ಸ್ವಂತ ಖರ್ಚಲ್ಲಿ ರಸ್ತೆ ಸರಿಪಡಿಸಿದ ಬಡದಾಳ ರೈತರು..!
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಹೊಲಕ್ಕೆ ಹೋಗುವ ದಾರಿ ಮಾಡಿಕೊಳ್ಳುತ್ತಿದ್ದಾರೆ.
ಚವಡಾಪುರ(ಡಿ.06): ಹೊಲ ಗದ್ದೆಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ನಮ್ಮ ಹೊಲ ನಮ್ಮ ದಾರಿ ಯೋಜನೆ ಇದೆ. ಅಲ್ಲದೆ ಮುರುಮ್ ರಸ್ತೆ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳಲ್ಲಿ ಅವಕಾಶವಿದೆ. ಇಷ್ಟಿದ್ದೂ ಹೊಲದ ರಸ್ತೆ ನಿರ್ಮಿಸದಿರುವುದಕ್ಕೆ ರೈತರೆಲ್ಲ ತಾವೇ ಹಣ ಸೇರಿಸಿ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ.
ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಹೊಲಕ್ಕೆ ಹೋಗುವ ದಾರಿ ಮಾಡಿಕೊಳ್ಳುತ್ತಿದ್ದಾರೆ. ಮಳೆ ಹೆಚ್ಚಾಗಿ ಬಡದಾಳ ಸಿನ್ನೂರ ಮಾರ್ಗದ ರಸ್ತೆಯಲ್ಲಿನ ಹಳ್ಳ ಹರಿಯುತ್ತಿದೆ. ಹೀಗಾಗಿ ಹೊಲಗದ್ದೆಗಳಿಗೆ ಹೋಗುವ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಅಲ್ಲದೆ ಕಬ್ಬು ಕಟಾವು ಮಾಡಿ ಸಾಗಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯಿಂದ ಕಂಗಾಲಾದ ರೈತರು ತಾತ್ಕಾಲಿಕವಾಗಿ ಮುರುಮ್ ರಸ್ತೆಯನ್ನಾದರೂ ಮಾಡಿ ಎಂದು ಗ್ರಾಮ ಪಂಚಾಯಿತಿಗೆ ವಿನಂತಿಸಿದರೂ ಕೂಡ ರಸ್ತೆ ನಿರ್ಮಿಸದೇ ಇರುವುದರಿಂದ 40 ರೈತರು 40 ಸಾವಿರ ರುಪಾಯಿ ಸಂಗ್ರಹಿಸಿ ತಾತ್ಕಾಲಿಕವಾಗಿ ಮುರುಮ್ ರಸ್ತೆ ಮಾಡಿಕೊಂಡಿದ್ದಾರೆ.
KALABURAGI: ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಈಶ್ವರ ಖಂಡ್ರೆ
ಕಳೆದ ಐದು ವರ್ಷದ ಅವಧಿಯಲ್ಲಿ ಇಬ್ಬರು, ಈ ವರ್ಷ ಒಬ್ಬರು ಅಲ್ಲೊಂದಿಷ್ಟುಇಲ್ಲೊಂದಿಷ್ಟುಮುರುಮ್ ಚೆಲ್ಲಿ ಅನುದಾನ ನುಂಗಿ ಹಾಕಿದ್ದಾರೆ. ಹೊರತು ಹಾಳಾದ ರಸ್ತೆ ಸರಿಪಡಿಸಿ ನಮಗೆ ಅನುಕೂಲ ಮಾಡಿಕೊಟ್ಟಿಲ್ಲ. ಅಧಿಕಾರಿಗಳು ಮತ್ತು ಸದಸ್ಯರು ಅಲ್ಲದೆ ಊರಿನ ಒಂದಿಷ್ಟುಪುಢಾರಿಗಳು ಸೇರಿ ಅನುದಾನ ನುಂಗಿ ಹಾಕಿ ಊರಿನ ಅಭಿವೃದ್ಧಿ ಮರೆತಿದ್ದಾರೆ. ಇಂತವರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿ ಲ್ಲ ಹೀಗಾಗಿ ನಾವೇ ನಮ್ಮ ಸ್ವಂತ ಹಣದಿಂದ ಮುರುಮ್ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಕಾಂತಪ್ಪ ಹಿರೋಳಿ, ದುಂಡಪ್ಪ ಮೇತ್ರೆ, ಧನರಾಜ್ ಖೈರಾಟ್, ಶರಣು ಪಕಾಲಿ, ಭೀಮಶಾ ಇಬ್ರಾಹಿಂಪೂರ, ಖಾಜಪ್ಪ ಹಿಂಚಗೇರಿ, ಭೀಮಣ್ಣ ಡೆಬ್ಬಿ, ಕಲ್ಲಪ್ಪ ಚಾಂಬಾರ, ಶ್ರೀಮಂತ ಸಿನ್ನೂರ, ದತ್ತು ತೆನ್ನಳ್ಳಿ, ಚನಮಲ್ಲಪ್ಪ ಹಿರೋಳಿ, ಚನ್ನಪ್ಪ ಮಳಗಿ, ಶ್ರೀಮಂತ ಸಿನ್ನೂರ ಸೇರಿದಂತೆ ಅನೇಕರು ಇದ್ದರು.