ಉಚಿತ ಭಾಗ್ಯಗಳ ನೆಪದಲ್ಲಿ ರೈತರನ್ನು ಮರೆತಿದೆ
ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು ಜಾರಿ ಮಾಡುವ ನೆಪದಲ್ಲಿ ರೈತರನ್ನು ಮರೆತಿರುವುದು ಖಂಡನೀಯ. ಅನಿಯಮಿತವಾಗಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಬೀದಿಗೆ ಬರುವ ವಾತಾವರಣ ಸೃಷ್ಟಿಯಾಗಿದೆ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಹೇಳಿದರು.
ಶಿರಾ : ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು ಜಾರಿ ಮಾಡುವ ನೆಪದಲ್ಲಿ ರೈತರನ್ನು ಮರೆತಿರುವುದು ಖಂಡನೀಯ. ಅನಿಯಮಿತವಾಗಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಬೀದಿಗೆ ಬರುವ ವಾತಾವರಣ ಸೃಷ್ಟಿಯಾಗಿದೆ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಹೇಳಿದರು.
ಬೆಸ್ಕಾಂ ಕಚೇರಿ ಮುಂಭಾಗ ತಾಲೂಕು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಒಂದೆಡೆ ರಾಜ್ಯದಲ್ಲಿ ಬರಗಾಲ ಮತ್ತೊಂದೆಡೆ ರಾಜ್ಯ ಸರ್ಕಾರ ಮನಸೋ ಇಚ್ಛೆ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡುತ್ತಿದ್ದು, ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ವಿದ್ಯುತ್ ಸಮಸ್ಯೆ ಇದ್ದಾಗಲೂ ಬೇರೆ ರಾಜ್ಯಗಳಿಂದ ಖರೀದಿಸಿ ಪ್ರತಿನಿತ್ಯ ೭ಗಂಟೆ ೩ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಈ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರ ವಿದ್ಯುತ್ ಹೆಚ್ಚಾಗಿ ಬೇರೆ ರಾಜ್ಯಗಳಿಗೆ ನೀಡುತ್ತಿದ್ದರು. ಆದರೆ, ಈ ಸರ್ಕಾರ ವಿದ್ಯುತ್ ಉತ್ಪಾದನೆ ಬಗ್ಗೆ ಸರಿಯಾಗಿ ಕ್ರಮವಹಿಸದೆ ಕೇವಲ ಭಾಗ್ಯಗಳ ಬಗ್ಗೆ ಚಿಂತನೆ ಮಾಡಿ ಭಾಗ್ಯಗಳನ್ನು ನೀಡುವ ಬಗ್ಗೆ ಗಮನ ಕೊಟ್ಟು ಪ್ರಚಾರ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ೫ ಗ್ಯಾರಂಟಿಗಳು ವಿಫಲವಾಗಿವೆ. ಕೇವಲ ನೆಪ ಮಾತ್ರಕ್ಕೆ ಗ್ಯಾರಂಟಿ ಕೊಟ್ಟು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಸಮರ್ಪಕ ವಿದ್ಯುತ್ ಕೊಡದಿದ್ದರೆ ತಾಲೂಕಿನಾದ್ಯಂತ ಪಕ್ಷಾತೀತ ಉಗ್ರ ಹೋರಾಟ ಮಾಡಲಾಗುವುದು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಮಳೆ ಕೊರತೆಯಿಂದ ಒಂದೆಡೆ ರೈತರು ಸಂಕಷ್ಟದಲ್ಲಿದ್ದರೆ ಮತ್ತೊಂದೆಡೆ ಸರ್ಕಾರ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮನಸೋಇಚ್ಛೆ ವಿದ್ಯುತ್ ಲೋಡ್‌ಶೆಡ್ಡಿಂಗ್ ಮೂಲಕ ರೈತರಿಗೆ ದ್ರೋಹ ಬಗೆಯುತ್ತಿದೆ.ಶಿರಾ ತಾಲೂಕು ತೀವ್ರ ಬರಗಾಲದಿಂದ ನರಳುತ್ತಿದ್ದು, ರೈತಾಪಿ ಕುಟುಂಬ ಮಳೆ, ಬೆಳೆ ಇಲ್ಲದೆ ತೀರ ಸಂಕಷ್ಟದಲ್ಲಿದ್ದಾರೆ. ಸಮರ್ಪಕ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವುದು ಶೋಚನೀಯ ಸಂಗತಿ. ಕೂಡಲೇ ಸರ್ಕಾರ ವಿದ್ಯುತ್ ಲೊಡ್ ಶೆಡ್ಡಿಂಗ್ ತಪ್ಪಿಸಿ ಹಗಲಿನಲ್ಲಿ ೫ ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ 5 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರಂಗಶಾಮಯ್ಯ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಲು ಇಂಧನ ಸಚಿವರೇ ನೇರ ಹೊಣೆ.ಇಂಧನ ಸಚಿವ ಜಾರ್ಜ್ ಅವರಿಗೆ ಇಂಧನ ಇಲಾಖೆಯ ಬಗ್ಗೆ ಏನು ಗೊತ್ತಿಲ್ಲ. ಇಂತವರನ್ನು ಇಂಧನ ಸಚಿವರನ್ನಾಗಿ ನೇಮಿಸಿರುವುದರಿಂದ ಇಷ್ಟೆಲ್ಲಾ ಸಮಸ್ಯೆ ಉಂಟಾಗುತ್ತಿದೆ. ಸೋನಿಯಾ ಗಾಂಧಿಯವರ ಕೃಪಾ ಕಟಾಕ್ಷದಿಂದ ಮಂತ್ರಿಯಾಗಿರುವ ಇವರಿಗೆ ಲೋಡ್‌ಶೆಡ್ಡಿಂಗ್ ಎಂದರೇನು? ಎಂಬುದೇ ಗೊತ್ತಿಲ್ಲ. ಕೂಡಲೇ ಇಂಧನ ಸಚಿವರು ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಗರಸಭಾ ಸದಸ್ಯರಾದ ಆರ್.ರಾಮು, ಮಾಜಿ ಸದಸ್ಯ ಆರ್.ರಾಘವೇಂದ್ರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ನರಸಿಂಹೇಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಟಿ.ಡಿ.ನರಶಿಂಹ ಮೂರ್ತಿ, ಬ್ಯಾಡಗೆರೆ ಕೊಲ್ಲಾರಪ್ಪ, ಹೇಮಂತ್‌ಕುಮಾರ್, ನಿಸರ್ಗ ಸುರೇಶ್, ಎಸ್.ಎಸ್.ನಾಗಭೂಷಣ್, ಸೋಮಶೇಖರ್, ಶ್ರೀರಂಗ, ಮುದ್ದುಗಣೇಶ್, ಸುನಿಲ್‌ಕುಮಾರ್, ಮಹದೇವ್, ಮಹಿಳಾ ಘಟಕದ ಲಲಿತಮ್ಮ, ರೇಣುಕಮ್ಮ ಇದ್ದರು.