ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಹಾಕಬಾರದು ಎಂದ ಬಸವರಾಜಪ್ಪ ಹೇಳಿದ್ದಾರೆ. ಇದಕ್ಕೆ ಸ್ವಯಂ ಘೋಷಿತ ಅದ್ಯಕ್ಷರಾಗಿರುವ ಹೆಚ್ ಆರ್ ಬಸವರಾಜಪ್ಪನಿಗು ರೈತ ಸಂಘಕ್ಕು ಸಂಬಂಧ ಇಲ್ಲ ಎಂದು - ದಾವಣಗೆರೆ ರೈತ ಸಂಘ ಹೇಳಿದೆ.
ದಾವಣಗೆರೆ, (ಜುಲೈ.01): ರಾಜ್ಯದ ಎರಡು ಪ್ರಮುಖ ಹೋರಾಟಗಳನ್ನು ನಿಲ್ಲಿಸಲು ಹಣ ಪಡೆದಿದ್ದಾರೆ ಎಂಬ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಆರೋಪ ಮುಕ್ತರಾಗಿ ಹೊರ ಬರುವವರೆಗೂ ಅವರು ರೈತರ ಘನತೆಯ ಚಿಹ್ನೆಯಾಗಿರುವ ಹಸಿರು ಶಾಲನ್ನು ಧರಿಸದಿರಲಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜಪ್ಪ ಕೆಎಸ್ ಆರ್ ಟಿಸಿ ಮುಷ್ಕರ ನಿಲ್ಲಿಸಲು 35 ಕೋಟಿ ರೂ. ಲಂಚ ಪಡೆದಿದ್ದಾರೆ ಹಾಗೂ ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ನಿಲ್ಲಿಸಲು 2500 ಸಾವಿರ ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಸುದ್ದಿ ವಾಹಿನಿಯೊಂದರಲ್ಲಿ ಸ್ಟಿಂಗ್ ಆಪರೇಶನ್ ಮೂಲಕ ಕೋಡಿಹಳ್ಳಿ ವಿರುದ್ಧ ಆರೋಪಿಸಲಾಗಿತ್ತು. ಆದರೆ ಕೋಡಿಹಳ್ಳಿಯವರು ಈ ಆರೋಪಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡದಿರುವುದನ್ನು ನೋಡಿದರೆ, ಅವರು ಆರೋಪಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ತೋರಿಸುತ್ತದೆ ಎಂದರು.
ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ
ನಂಜುಂಡಸ್ವಾಮಿ ಹಾಗೂ ಅನೇಕ ಹಿರಿಯ ರೈತ ಮುಖಂಡರುಗಳು ಕಟ್ಟಿರುವ ಈ ಸಂಘ ಅನೇಕ ಹೋರಾಟಗಳ ಮೂಲಕ ತ್ಯಾಗ, ಬಲಿದಾನ ಮಾಡಿರುವ ಸಂಘಟನೆಯಾಗಿದ್ದು, ಇಂತಹ ರೈತ ಸಂಘಟನೆಗೆ ಅಪಖ್ಯಾತಿ ಬಂದಿದೆ. ಕೋಡಿಹಳ್ಳಿಯವರಿಗೆ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಒತ್ತಾಯಿಸಿ ಬೇಕಿತ್ತು. ಆರೋಪಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಇದೆಲ್ಲಾ ನೋಡಿದರೆ ಪರೋಕ್ಷವಾಗಿ ಈ ಆರೋಪಗಳನ್ನು ಅವರು ಒಪ್ಪಿಕೊಂಡಂತಿದೆ ಎಂದು ಹೇಳಿದರು.
ರೈತಸಂಘದ ರಾಜ್ಯ ಪದಾಧಿಕಾರಿಗಳು ಸಭೆ ಕರೆದು, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸಭೆಯು ಒಮ್ಮತದಿಂದ ಕೋಡಿಹಳ್ಳಿಯವರನ್ನು ವಜಾ ಮಾಡಲಾಗಿದೆ. ಸಂಯುಕ್ತ ಕಿಸಾನ್ ಹೋರಾಟ ಸಂಘಟನೆಯ ಸಂಚಾಲಕ ಸ್ಥಾನದಿಂದಲೂ ಕೋಡಿಹಳ್ಳಿಯವರನ್ನು ವಜಾ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಅವರು ಸಾಲಮನ್ನಾ ಸೇರಿದಂತೆ ಯಾವುದೇ ಲೆಕ್ಕಪತ್ರಗಳನ್ನು ಇದುವರೆಗೆ ಸಲ್ಲಿಸಿಲ್ಲ. ಅವರು ಕೂಡಲೇ ಲೆಕ್ಕಪತ್ರ ನೀಡಬೇಕು. ತನಿಖೆ ಮುಗಿದು ಅವರು ಆರೋಪ ಮುಕ್ತರಾಗುವವರೆಗೆ ಹಸಿರು ಶಾಲನ್ನು ಧರಿಸಬಾರದು ಎಂದು ಬಸವರಾಜಪ್ಪ ಆಗ್ರಹಿಸಿದರು.
ಈಗಾಗಲೇ ನಮ್ಮ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಚಿಕ್ಕಸ್ವಾಮಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ವರದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ರೈತಸಂಘಗಳು ಒಂದಾಗಲಿವೆ.
ನಾನು ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲಾ ರೈತ ಸಂಘಟನೆಗಳು ಒಂದಾಗುವ ಆಸಕ್ತಿ ತೋರಿದ್ದು, ನಾವೆಲ್ಲರೂ ಒಂದಾಗಲಿದ್ದೇವೆ. ಅನೇಕ ಸಂಘಟನೆಗಳ ಮುಖಂಡರು ನಮಗೆ ಕರೆ ಮಾಡಿ ಮಾತನಾಡಿ, ತಮ್ಮ ಜಿಲ್ಲೆಗಳಿಗೆ ನಮಗೆ ಆಹ್ವಾನ ನೀಡಿದ್ದಾರೆ. ಎಲ್ಲಾ ಸಂಘಟನೆಗಳು ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಿ, ರೈತರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದೇವೆ ಎಂದರು. ಜುಲೈ 21 ರಂದು ನವಲಗುಂದ ರೈತ ಹುತಾತ್ಮ ದಿನಾಚರಣೆ , ಪದಗ್ರಹಣ ನಡೆಯಲಿದ್ದು, ಶಂಕರಪ್ಪ ಅಂಬಲಿ, ಬಡಗಲಪುರ ನಾಗೇಂದ್ರಪ್ಪ ಸೇರಿದಂತೆ ರಾಜ್ಯದ ಎಲ್ಲ ರೈತ ಮುಖಂಡರು ಆಗಮಿಸಲಿದ್ದಾರೆ. ಈ ಸಂಬಂಧ ಧಾರವಾಡದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದೇವೆ ಎಂದರು.
ಹೆಚ್ ಆರ್ ಬಸವರಾಜಪ್ಪಗು ರೈತ ಸಂಘಕ್ಕು ಸಂಬಂಧ ಇಲ್ಲ
ಸ್ವಯಂ ಘೋಷಿತ ರಾಜ್ಯ ರೈತಸಂಘದ ಅಧ್ಯಕ್ಷರಾಗಿರುವ ಎಚ್.ಆರ್. ಬಸವರಾಜಪ್ಪ ಅವರಿಗೂ ರೈತಸಂಘಕ್ಕೂ ಸಂಬಂಧವೇ ಇಲ್ಲ. ಹಾಗಾಗಿ ಅವರು ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ,ಚಿನ್ನಸಮುದ್ರ ಶೇಖರ್ ನಾಯ್ಕ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2016 ರಲ್ಲಿ ಎಚ್.ಆರ್. ಬಸವರಾಜಪ್ಪ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ರೈತಸಂಘ ರಾಜ್ಯ ಸಂಘಕ್ಕೆ ಸಲ್ಲಿಸಿದ ದೂರಿನ ಅನ್ವಯ ಅನ್ನಪೂರ್ಣಮ್ಮ ನೇತೃತ್ವದ ಸಮಿತಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಅವರ ವಿರುದ್ಧದ ಆರೋಪ ರುಜುವಾತು ಆದ ಹಿನ್ನೆಲೆಯಲ್ಲಿ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ. ರೈತಸಂಘದಲ್ಲಿ ಇರಲು ಅವರು ಅರ್ಹರಲ್ಲ ಎಂದು ತಿಳಿಸಿದರು.
ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರೈತಸಂಘದಿಂದ ಐದು ವರ್ಷಗಳ ಕಾಲ ಹೊರಗಿಡಲಾಗಿದೆ. ಅಂತಹವರು ತಾವೇ ರೈತಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆಯೇ ಇಲ್ಲ. ಬಸವರಾಜಪ್ಪ ಉಚ್ಚಾಟನೆ ಆಗಿರುವ ಅವರು ಕೂಡಲೇ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಬಸರಾಜಪ್ಪ ಅವರು ಯಡಿಯೂರಪ್ಪ ಅವರೊಂದಿಗೆ ಶಾಮೀಲಾಗಿರುವ ಜೊತೆಗೆ ಹಣ ತೆಗೆದುಕೊಂಡಿರುವ ಆರೋಪ ಮತ್ತೆ ಕೇಳಿ ಬಂದಿದೆ. ಆಗಲೂ ರೈತಸಂಘ ಮತ್ತೆ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಿತ್ತು. ಆಗಲೂ ಅವರ ವಿರುದ್ಧದ ಆರೋಪ ರುಜುವಾತು ಆಗಿದೆ. ಈಗಲೂ ಅವರ ಮೇಲೆ ಆರೋಪ ಇದೆ. ಅಂತಹವರು ನಾವೇ ಅಧ್ಯಕ್ಷ ರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ, ಶತಕೋಟಿ ಬಸಪ್ಪ, ಬಸವರಾಜ ದಾಗಿನಕಟ್ಟೆ, ಕರೇಕಟ್ಟೆ ಕಲೀಂವುಲ್ಲ, ನಾಗರಾಜಪ್ಪ, ಸತೀಶ್, ರಂಗಸ್ವಾಮಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
