Asianet Suvarna News Asianet Suvarna News

ಕೂಡ್ಲಿಗಿ: ಟರ್ಕಿ ಸಜ್ಜೆ ಬೆಳೆದು ಬರ ಮೆಟ್ಟಿ ನಿಂತ ರೈತರು..!

ನೀವು ಟರ್ಕಿ ದೇಶದ ಸಜ್ಜೆ ನೋಡಿದರೆ ಅಬ್ಬಬ್ಬಾ ಇದು ಸಜ್ಜೆ ನಾ... ಎಂದು ಅಚ್ಚರಿಪಡುತ್ತೀರಿ. ನಾವು ಬೆಳೆಯುವ ಸಜ್ಜೆ ಅಂದಾಜು ಎಂದರೆ 1 ಅಡಿಯಷ್ಟೇ ಉದ್ದವಾದ ತೆನೆ ಇರಬಹುದು. ಆದರೆ ಟರ್ಕಿ ಸಜ್ಜೆ 3 ರಿಂದ 4 ಅಡಿಗಿಂತಲೂ ಉದ್ದವಾದ ತೆನೆ ಇರುತ್ತದೆ. ಹೀಗಾಗಿಯೇ ನಮ್ಮ ಸಜ್ಜೆಗಿಂತ 3 ಪಟ್ಟು ಇಳುವರಿ ಪಡೆಯಬಹುದು. ಟರ್ಕಿ ದೇಶದ ಈ ಸಜ್ಜೆ ನಮ್ಮ ಸಜ್ಜೆಯಂತೆಯೇ ಊಟಕ್ಕೂ, ಪಶು, ಪಕ್ಷಿಗಳ ಆಹಾರಕ್ಕೂ ಬಳಸಬಹುದು. 

Farmers Turkey Sorghum Crop Grow Up at Kudligi in Vijayanagara grg
Author
First Published Sep 29, 2023, 1:53 PM IST

ಭೀಮಣ್ಣ ಗಜಾಪುರ

ಕೂಡ್ಲಿಗಿ(ಸೆ.29):  ಈ ಬಾರಿ ಸಮರ್ಪಕ ಮಳೆ ಬಾರದೇ ರಾಜ್ಯದಲ್ಲಿ ಬರ ಆವರಿಸಿದೆ. ಈ ಮಧ್ಯೆ ತಾಲೂಕಿನ ಚಿಕ್ಕಜೋಗಿಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದ ನಾಲ್ವರು ರೈತರು ಕಡಿಮೆ ಮಳೆಗೆ ಬೆಳೆಯುವ ಟರ್ಕಿ ದೇಶದ ಸಜ್ಜೆ ಬೆಳೆದು ಬರಗಾಲಕ್ಕೆ ಸೆಡ್ಡು ಹೊಡೆದಿದ್ದಾರೆ. ರೈತರಾದ ಶೇಖರಪ್ಪ 5 ಎಕರೆ, ಪ್ರದೀಪ್ 2 ಎಕರೆ, ಮನೋಹರ್ 2 ಎಕರೆ, ಮಹಾಂತೇಶ್ ಗೌಡ 2 ಎಕರೆಯಲ್ಲಿ ಟರ್ಕಿ ಸಜ್ಜೆ ಬೆಳೆದು ಯಶಸ್ವಿಯಾಗಿದ್ದಾರೆ.

ಮನೋಹರ್ ಅವರು ಈಗಾಗಲೇ 2 ಎಕರೆ ಸಜ್ಜೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಇನ್ನೂ ಮೂವರು ರೈತರು ಕಟಾವು ಮಾಡುವ ಹಂತದಲ್ಲಿದ್ದಾರೆ. ನಮ್ಮ ಪಾರಂಪರಿಕ ಸಜ್ಜೆ ಬೆಳೆ ಬೆಳೆಯಲು ಕನಿಷ್ಠ ಮೂರು ತಿಂಗಳು ಬೇಕು. ಈ ಟರ್ಕಿ ಸಜ್ಜೆ ಬೆಳೆಯಲು ಮೂರುವರೆ ತಿಂಗಳು ತೆಗೆದುಕೊಳ್ಳುತ್ತದೆ. ಇಳಕಲ್‌ನಲ್ಲಿ ಶ್ರೀನಿವಾಸ್ ಗೌಡ ಅವರಿಂದ ಟರ್ಕಿ ದೇಶದ ಸಜ್ಜೆಯನ್ನು ಕೆಜಿಗೆ ₹800ರಂತೆ ತಂದು ಈ ನಾಲ್ವರು ರೈತರು ಬಿತ್ತನೆ ಮಾಡಿದ್ದಾರೆ. ಶ್ರೀನಿವಾಸ್ ಗೌಡ ಅವರು ರಾಜಸ್ಥಾನದಿಂದ ಕೆಜಿಗೆ ₹2 ಸಾವಿರ ನೀಡಿ ತಂದಿದ್ದಾರಂತೆ.

ಹೊಸಪೇಟೆ: ಗದಗ ಬಳಿ ಭೀಕರ ಅಪಘಾತ: ಸಾಹಿತ್ಯಪ್ರೇಮಿ ಡಾ. ಬಾಲರಾಜ್‌, ವಿನಯ್‌ ದುರ್ಮರಣ

ಅಬ್ಬಾ ಇದು ಸಜ್ಜೆ ನಾ?:

ನೀವು ಟರ್ಕಿ ದೇಶದ ಸಜ್ಜೆ ನೋಡಿದರೆ ಅಬ್ಬಬ್ಬಾ ಇದು ಸಜ್ಜೆ ನಾ... ಎಂದು ಅಚ್ಚರಿಪಡುತ್ತೀರಿ. ನಾವು ಬೆಳೆಯುವ ಸಜ್ಜೆ ಅಂದಾಜು ಎಂದರೆ 1 ಅಡಿಯಷ್ಟೇ ಉದ್ದವಾದ ತೆನೆ ಇರಬಹುದು. ಆದರೆ ಟರ್ಕಿ ಸಜ್ಜೆ 3 ರಿಂದ 4 ಅಡಿಗಿಂತಲೂ ಉದ್ದವಾದ ತೆನೆ ಇರುತ್ತದೆ. ಹೀಗಾಗಿಯೇ ನಮ್ಮ ಸಜ್ಜೆಗಿಂತ 3 ಪಟ್ಟು ಇಳುವರಿ ಪಡೆಯಬಹುದು. ಟರ್ಕಿ ದೇಶದ ಈ ಸಜ್ಜೆ ನಮ್ಮ ಸಜ್ಜೆಯಂತೆಯೇ ಊಟಕ್ಕೂ, ಪಶು, ಪಕ್ಷಿಗಳ ಆಹಾರಕ್ಕೂ ಬಳಸಬಹುದು. ರಾಜ್ಯದಲ್ಲಿ ರೈತರು ಮೆಕ್ಕೆಜೋಳ ಮುಂತಾದ ಹೆಚ್ಚು ಮಳೆ ಬೇಕಾಗಿರುವ ಬೆಳೆ ಬೆಳೆದು ಕೈಸುಟ್ಟುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಡಿಮೆ ಮಳೆಗೆ ಎಕರೆಗೆ 15 ಕ್ವಿಂಟಲ್ ಸಜ್ಜೆ ಬೆಳೆದು ಯಾವುದೇ ನಷ್ಠ ಅನುಭವಿಸದೇ ಇತರ ರೈತರಿಗೆ ಮಾದರಿಯಾಗಿದ್ದಾರೆ. 1 ಕ್ವಿಂಟಲ್ ಸಜ್ಜೆಗೆ ಮಾರುಕಟ್ಟೆಯಲ್ಲಿ ಅಂದಾಜು ₹2 ಸಾವಿರ ದರ ಇದೆ. ಎಕರೆಗೆ 15 ಕ್ವಿಂಟಲ್ ಸಜ್ಜೆ ಬೆಳೆದರೆ ₹30 ಸಾವಿರ ಸಿಗುತ್ತದೆ.

ಕೖಷಿ ಇಲಾಖೆ ನಿರುತ್ತರ:

ಕೖಷಿ ಇಲಾಖೆಯು ಬರಗಾಲಕ್ಕೆ ಯಾವ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುವ ಅರಿವು ಮೂಡಿಸುವಲ್ಲಿ ವಿಫಲವಾಗಿದೆ ಎಂಬುದು ರೈತರ ಆರೋಪ. ಕೂಡ್ಲಿಗಿ ತಾಲೂಕು ನಿರಂತರ ಬರಗಾಲಕ್ಕೆ ತುತ್ತಾಗುವ ಪ್ರದೇಶವಾಗಿದ್ದು, ಈ ಭಾಗಕ್ಕೆ ಇಲ್ಲಿಯ ಸರಾಸರಿ ಮಳೆಗೆ ಅನುಗುಣವಾಗಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ಕೖಷಿ ವಿಚಾರಸಂಕಿರಣ ಮಾಡುವ ಮೂಲಕ ಸಾಮಾನ್ಯ ರೈತರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಕಡಿಮೆ ಮಳೆಗೆ ಹೆಚ್ಚು ಇಳುವರಿ ಬೆಳೆದು ರೈತ ಸಾಲದ ಬಾಧೆಯಿಂದ ದೂರವಿರುವಂತೆ ಮಾಡುವ ಯೋಜನೆಗಳನ್ನು ರೂಪಿಸಬೇಕು ಎಂಬುದು ಅನ್ನದಾತರ ಆಗ್ರಹ.

ವಿಜಯನಗರ: ಕೂಡ್ಲಿಗಿ ಬಳಿ ಖಾಸಗಿ ಬಸ್‌ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಾಯ, ತಪ್ಪಿದ ಭಾರೀ ದುರಂತ

ಮೆಕ್ಕೆಜೋಳ ಬೆಳೆಯಲು ಹೆಚ್ಚು ಮಳೆ ಬೇಕು. ಕಾಳು ಕಟ್ಟುವ ಹಂತದಲ್ಲಿಯೇ ನೀರು ಬೇಕೆ ಬೇಕು. ಆ ಸಮಯದಲ್ಲಿ ಮಳೆ ಬರದಿದ್ದರೆ ಮೆಕ್ಕೆಜೋಳ ಕಾಳು ಕಟ್ಟಲ್ಲ. ಹೀಗಾಗಿ ನಾವು ಟರ್ಕಿ ದೇಶದ ಸಜ್ಜೆಯನ್ನು ಆಯ್ಕೆ ಮಾಡಿಕೊಂಡೆವು. ಇಳುವರಿ ಜಾಸ್ತಿ ಸಿಗುತ್ತೆ, ರೈತರಿಗೆ ಲಾಭ ಆಗುತ್ತೆ ಎಂದು ಕೂಡ್ಲಿಗಿ ತಾಲೂಕು ಸಿದ್ದಾಪುರ ರೈತ ಶೇಖರಪ್ಪ ತಿಳಿಸಿದ್ದಾರೆ. 

ನಾವು ಬೆಳೆದ ಟರ್ಕಿ ಸಜ್ಜೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದೇ ರೈತರಿಗೆ ಬಿತ್ತನೆ ಬೀಜದ ರೂಪದಲ್ಲಿ ಮಾರುತ್ತೇವೆ. ಇದರಿಂದ ನಮಗೂ ಲಾಭ. ನಮ್ಮ ರೈತರು ಕಡಿಮೆ ಮಳೆಯಲ್ಲಿ ನಷ್ಟವಿಲ್ಲದೇ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸಿದ್ದಾಪುರ ಗ್ರಾಮದ ಯುವ ರೈತ ಪ್ರದೀಪ್ ಹೇಳಿದ್ದಾರೆ. 

Follow Us:
Download App:
  • android
  • ios