ರೈತನ ಬೆವರು ಜಗತ್ತಿನ ಅತ್ಯಂತ ಶ್ರೇಷ್ಠ ನೀರು

ನಾಡಿಗೆ ಅನ್ನ ನೀಡುವ ರೈತನ ಬದುಕು ತುಂಬಾ ಪವಿತ್ರವಾದದ್ದು, ಆದರೆ ಇಂತಹ ರೈತನ ಬದುಕು ಸಂಕಷ್ಟದಲ್ಲಿದೆ. ಯಾವುದೇ ನೀರಿಗಿಂತ ರೈತನ ಬೆವರಿನ ನೀರು ಅತ್ಯಂತ ಶ್ರೇಷ್ಠ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

Farmers sweat is the greatest water in the world snr

 ತುಮಕೂರು :  ನಾಡಿಗೆ ಅನ್ನ ನೀಡುವ ರೈತನ ಬದುಕು ತುಂಬಾ ಪವಿತ್ರವಾದದ್ದು, ಆದರೆ ಇಂತಹ ರೈತನ ಬದುಕು ಸಂಕಷ್ಟದಲ್ಲಿದೆ. ಯಾವುದೇ ನೀರಿಗಿಂತ ರೈತನ ಬೆವರಿನ ನೀರು ಅತ್ಯಂತ ಶ್ರೇಷ್ಠ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ ಹಾಗೂ ಸುಭಾಷ್ ಪಾಳೆಕರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಆಶ್ರಯದಲ್ಲಿ ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ರೈತರಿಗೆ 101 ನಾಟಿ ಗೋವುಗಳ ವಿತರಣೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಗೋ ಪೂಜೆ ನೆರವೇರಿಸಿ ಮಾತನಾಡಿದರು.

ರೈತ ದೇಶದ ಬೆನ್ನೆಲುಬು, ಕೃಷಿ ಕಾಯಕದ ರೈತನಿಲ್ಲದೆ ನಮಗೆ ಬದುಕೇ ಇಲ್ಲ. ಆದರೆ ರೈತನ ಬದುಕು ಕಷ್ಟಕರವಾದದ್ದು. ಕೃಷಿ ಮಾಡುವ ರೈತ ಹಾಗೂ ದೇಶ ಕಾಯುವ ಯೋಧನ ಕಾರ್ಯ ಅತ್ಯಂತ ಕಠಿಣವಾದದ್ದು, ಈ ಇಬ್ಬರಿಗೂ ನಾವು ಗೌರವ ನೀಡಿ ಅವರ ಕಾರ್ಯ ಸ್ಮರಿಸಬೇಕು ಎಂದರು.

ಇಂದು ಕೃಷಿ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾಗುತ್ತಿದೆ. ವಿಶೇಷವಾಗಿ ಗೋವುಗಳ ಸಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸುವ ಕೃಷಿ ಕಮ್ಮಿಯಾಗಿದೆ. ನಾಟಿ ಗೋವುಗಳ ಸಾಕಾಣಿಕೆ ಕಡಿಮೆಯಾಗಿ ಸಾವಯವ ಗೊಬ್ಬರ ಸಿಗದೆ ರೈತರು ರಸಾಯನಿಕ ಗೊಬ್ಬರವನ್ನು ಭೂಮಿಗೆ ಹಾಕಿ ಮಣ್ಣಿನ ಆರೋಗ್ಯ ಹಾಳುಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಆರೋಗ್ಯಕರ ಆಹಾರ ಪದಾರ್ಥ ಬೆಳೆಯಲಾಗುವುದಿಲ್ಲ, ಅಂತಹ ಅಹಾರ ಸೇವನೆಯಿಂದ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದ ರೈತರು ನಾಟಿ ಗೋವುಗಳ ಸಾಕಣಿಕೆ ಮಾಡಿ, ಅವುಗಳ ಗೊಬ್ಬರ ಬಳಸಿ ವ್ಯವಸಾಯ ಮಾಡುವ ಪದ್ಧತಿ ಮತ್ತೆ ಅಳವಡಿಸಿಕೊಳ್ಳಬೇಕು, ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಸಿದ್ಧಲಿಂಗ ಸ್ವಾಮೀಜಿ ಸಲಹೆ ಮಾಡಿದರು.

ಶೂನ್ಯ ಬಂಡವಾಳದ ನೈಸರ್ಗಿಕ ಪದ್ಧತಿ

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಈಗಿನ ಹಳ್ಳಿ ವ್ಯವಸ್ಥೆ ಹಾಗೂ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಳ್ಳಿಗಳಲ್ಲಿ ಮೊದಲಿದ್ದ ಪರಸ್ಪರ ಸೌಹಾರ್ದತೆ ಈಗಿಲ್ಲ. ಕೃಷಿ ಲಾಭದಾಯಕ ಅಲ್ಲವೆಂದು ಕೃಷಿಯನ್ನು ನಿರ್ಲಕ್ಷಿಸುವ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ರೈತರಲ್ಲಿ ಅತ್ಮವಿಶ್ವಾಸ ತುಂಬಿ, ಕೃಷಿ ಲಾಭವಾಗುವಂತೆ ಮಾಡಲು ಶೂನ್ಯ ಬಂಡವಾಳದ ನೈಸರ್ಗಿಕ ಪದ್ಧತಿ ಬಳಸಲು ತಿಳಿಸಿದರು.

ಈಗ ಸಾವಯವ ಕೃಷಿ ಬಗ್ಗೆ ಹೆಚ್ಚು ಜಾಗೃತಿ ಮೂಡುತ್ತಿದೆ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಹಿಂದಿನ ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಬಿಜೆಪಿ ಓಬಿಸಿ ಮೋರ್ಚಾ ಮುಖಂಡ ಎಸ್.ಪಿ.ಚಿದಾನಂದ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪವಿತ್ರ ಸ್ಥಾನ ನೀಡಿದ್ದೇವೆ. ಗೋವುಗಳ ಸಾಕಾಣಿಕೆ ಒಂದು ಪವಿತ್ರ ಕಾರ್ಯ, ಗೋವು ರೈತನ ಸಂಪತ್ತು. ನಾಟಿ ಗೋವುಗಳ ಸಂತತಿ ಕಡಿಮೆಯಗುತ್ತಿದೆ. ಅಂತಹ ಸಂತತಿ ಉಳಿಸಿ ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ರೈತ ಕುಟುಂಬಗಳಿಗೆ ಉಚಿತವಾಗಿ 101ಗೋವುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಹಾಲನ್ನು ಕಾರ್ಖಾನೆಗಳಿಂದ ಉತ್ಪಾದನೆ ಮಾಡಲು ಸಾಧ್ಯವಿಲ್ಲ, ಹಸುಗಳ ಪಾಲನೆಯಿಂದಲೇ ಹಾಲು ಉತ್ಪಾದನೆ ಮಾಡಬೇಕು. ಹಸುವಿನ ಸಗಣಿ, ಗಂಜಲದಿಂದ ಸಿದ್ಧಪಡಿಸುವ ಜೀವಾಮೃತ ಕೃಷಿ ಬೆಳೆಗೆ ಅಮೃತವೇ ಆಗಿದೆ. ಇದರಿಂದ ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ಬೆಳೆಯಬಹುದು, ಅಲ್ಲದೆ ಇಂತಹ ಪದ್ಧತಿಯಿಂದ ಉತ್ತಮ ಇಳುವರಿ ಬಂದು ರೈತರೂ ಹೆಚ್ಚಿನ ಆದಾಯ ಪಡೆಯಬಹುದು ಎಂದು ಹೇಳಿದರು.

ಇಂದು ವಿದ್ಯಾರ್ಥಿಗಳು, ಯುವ ಜನರು ಆನ್‌ಲೈನ್ ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಆನ್‌ಲೈನ್ ಜೂಜನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಯುವಜನರನ್ನು ಅಪಾಯದಿಂದ ಕಾಪಾಡಬೇಕು ಎಂದು ಚಿದಾನಂದ್ ಒತ್ತಾಯಿಸಿದರು.

ತಾಲೂಕು ಮಟ್ಟದಲ್ಲೂ ಅರಿವು

ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ದೇಶೀಯ ಗೋವುಗಳನ್ನು ರಕ್ಷಿಸಲು ಹಾಗೂ ಸಾವಯವ ಕೃಷಿ ಪದ್ಧತಿ ಅನುಸರಿಸಲು ರೈತ ಮೋರ್ಚಾದಿಂದ ರಾಜ್ಯಾದ್ಯಂತ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿಯೂ ಅರಿವು ಕಾರ್ಯಕ್ರಮ ಹಾಗೂ ಗೋವುಗಳ ವಿತರಣೆ ಮಾಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿ ಪ್ರಸನ್ನಮೂರ್ತಿ ಅವರು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ರೈತ ಮೋರ್ಚಾ ಮಹಿಳಾ ಘಟಕದ ವಿದ್ಯಾ, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಮೋರ್ಚಾದ ಮುಖಂಡರಾದ ಎಂ.ಬಿ.ನಂದೀಶ್, ವಿಜಯಕುಮಾರ್, ಸಿದ್ಧರಾಮಣ್ಣ ಮತ್ತಿತರರು ಭಾಗವಹಿಸಿದ್ದರು. ಈ ವೇಳೆ ಸಿದ್ಧಲಿಂಗ ಸ್ವಾಮೀಜಿಗಳು ರೈತರಿಗೆ 101೧ ನಾಟಿ ಗೋವುಗಳನ್ನು ವಿತರಣೆ ಮಾಡಿದರು.

Latest Videos
Follow Us:
Download App:
  • android
  • ios