ಗೊರೂರು ಅಣೆಕಟ್ಟೆ ಮುಳುಗಡೆ : ಮುಗಿಯದ ಸ್ಥಳ ವಿವಾದ ಕಗ್ಗಂಟು

ಮುಳುಗಡೆಯಾದ ಅಣೆಕಟ್ಟು ಪ್ರದೇಶದಲ್ಲಿ ಇನ್ನೂ ಕೂಡ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. 

farmers Suffers in Gorur Dam Submerged area

ಕೆ.ಆರ್‌.ಪೇಟೆ [ಜ.20]:  ಗೊರೂರಿನ ಹೇಮಾವತಿ ಜಲಾಶಯದ ನಿರ್ಮಾಣದ ವೇಳೆ ಮುಳುಗಡೆಯಾಗಿದ್ದ ತಾಲೂಕಿನ ಬೆಳ್ಳಿಬೆಟ್ಟದ ಕಾವಲಿನ ಸರ್ವೆ ನಂಬರ್‌ 1ರ ಅರಣ್ಯ ಇಲಾಖೆ ಮತ್ತು ರೈತರ ಜಮೀನಿನ ವಿವಾದಿತ ಜಾಗಕ್ಕೆ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂದೀಪ್‌ ಧವೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿದರು.

ಸರ್ಕಾರ ಸುಮಾರು 2585 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಡೀಮ್ಡ್ ಅರಣ್ಯವೆಂದು ನೀಡಲಾಗಿದೆ. ಜತೆಗೆ 30 ವರ್ಷಗಳ ಹಿಂದೆಯೇ 500 ಎಕರೆ ಭೂಮಿಯನ್ನು ಗೊರೂರಿನ ಅಣೆಕಟ್ಟೆನಿರ್ಮಾಣದ ವೇಳೆ ಜಮೀನು ಮುಳಗಡೆಯಾಗಿದ್ದ ಸಂತ್ರಸ್ತ ರೈತರಿಗೆ ಈ ಸರ್ವೆ ನಂಬರ್‌ನಲ್ಲಿ 500 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ, ಕಂದಾಯ ಇಲಾಖೆ ಇವರಿಬ್ಬರಿಗೂ ತಮ್ಮ ಗಡಿಯನ್ನು ಗುರುತಿಸಿಕೊಡದ ಕಾರಣ ಅರಣ್ಯ ಇಲಾಖೆ ರೈತರು ಸ್ವಾಧೀನಕ್ಕೆ ಬಂದಾಗ ಇದು ಕೊಡುತ್ತಿರಲಿಲ್ಲ. ಅರಣ್ಯಾಧಿಕಾರಿ ಮತ್ತು ರೈತರ ನಡುವೆ ಹಲವು ಬಾರಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಟಾಪಟಿ ನಡೆದಿವೆ. ದೂರುಗಳು ದಾಖಲಾಗಿವೆ ಎಂದು ಸಂತ್ರಸ್ಥ ರೈತರು ಹೆಚ್ಚುವರಿ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಟ್ಟರು.

ಹಲವು ತಿಂಗಳ ಹಿಂದೆ ರೈತರು ಜಮೀನನ್ನು ಸ್ವಾಧೀನಕ್ಕೆ ನೀಡುವಂತೆ ವಿವಾದಿತ ಪ್ರದೇಶದಲ್ಲಿ ಅನಿರ್ಧಿಷ್ಟಾವಧಿ ಕಾಲ ಧರಣಿ ನಡೆಸುತ್ತಿದ್ದರು. ಆಗ ತಾಲೂಕು ಆಡಳಿತವು ಸರ್ವೇ ಕಾರ್ಯವನ್ನು ನಡೆಸಿ ಭೂಮಿಯನ್ನು ಗುರುತಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸಿತ್ತು. ಪ್ರತಿಭಟನೆ ಹಿಂಪಡೆದುಕೊಂಡು ವರ್ಷಗಳು ಕಳೆಯುತ್ತಿದ್ದರೂ ಭೂಮಿಯನ್ನು ಗುರುತಿಸಿ ಕೊಡದ ತಾಲೂಕು ಮತ್ತು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರೈತರು ದಾವೆ ಹಾಕಿರುವುದಾಗಿ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆಚ್ಚುವರಿ ಕಾರ್ಯದರ್ಶಿ ಸಂದೀಪ್‌ ಧವೆ ಮಾತನಾಡಿ, ಡೀಮ್ಡ್ ಅರಣ್ಯ ಎಂದು ಸರ್ಕಾರ ಜಿಲ್ಲಾಡಳಿತ ಕಮಿಟಿ ಮೂಲಕ 2585 ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅರಣ್ಯ ಭೂಮಿಯನ್ನು ಬಿಡಲಾಗುವುದಿಲ್ಲ. ಈ ಸ.ನಂ ಆರು ಸಾವಿರ ಎಕರೆ ಜಮೀನಿದೆ. ಅರಣ್ಯ ಭೂಮಿಯ ಗಡಿ ಗುರುತಿಸಿ ನಂತರ ರೈತರಿಗೆ ಜಮೀನು ನೀಡುವಂತೆ ಡಿಸಿಗೆ ಸೂಚಿಸಿದರು.

ಈ ಮಧ್ಯೆ ಮಾತನಾಡಿದ ರೈತರು, ಕಂದಾಯ ಅಧಿಕಾರಿಗಳು 900 ಎಕರೆ ಅರಣ್ಯ ಇಲಾಖೆಗೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅವರಿಗೆ ತಿಳಿಸಿದಾಗ, ತಹಸೀಲ್ದಾರ್‌ ಶಿವಮೂರ್ತಿ ಅರಣ್ಯಕ್ಕೆ ನೀಡಿರುವ ಜಾಗ 2585 ಎಕರೆ ಅದರ ಮೂಲ ಎಂಆರ್‌ ವಹಿ ತೆಗೆದು ತೋರಿಸಿದರು. ಬಳಿಕ ಡಿಸಿ ಮಾತನಾಡಿ, ದಾಖಲೆ ಅಪಡೇಟ್‌ ಆಗಿಲ್ಲ. ಮೂಲ ಎಂಆರ್‌ ಸತ್ಯತೆಯಿಂದ ಕೂಡಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, ಅರಣ್ಯ ಇಲಾಖೆಗೆ ಮತ್ತು ಸಂತ್ರಸ್ತ ರೈತರ ಸಮಸ್ಯೆ ಬಗೆಹರಿಯಬೇಕಾದರೆ ಅರಣ್ಯ ಪ್ರದೇಶ ಮತ್ತು ಸಂತ್ರಸ್ತ ರೈತರ ಜಾಗವನ್ನು ಸರ್ವೆ ಮಾಡಿಸಬೇಕು. ನಂತರ ಸಮಸ್ಯೆ ಬಗೆಹರಿಯುತ್ತದೆ ಎಂದು ಸಲಹೆ ನೀಡಿದರು. ನಂತರ ರೈತರನ್ನು ಪ್ರಶ್ನಿಸಿ, ನಿಮಗೇಕೆ ರಸ್ತೆ ಬದಿಯಲ್ಲಿ ಜಮೀನು ನೀಡಿದರು ಎಂದರು. ಇದಕ್ಕೆ ಮೇಲಭಾಗದಲ್ಲಿ ನಾಲೆ ಹೋಗಿದೆ. ನೀರಾವರಿ ಸೌಲಭ್ಯ ಸಿಗಲೆಂದು ಹೇಳಿದರು.

ರೈತರ ಪರವಾಗಿ ಹಾಸನ ರವಿ ಮಾಹಿತಿ ನೀಡಿದರು. ತಹಶೀಲ್ದಾರ್‌ ಎಂ.ಶಿವಮೂರ್ತಿ ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶ ಹಾಗೂ ಮುಳುಗಡೆ ಸಂತ್ರಸ್ತರ ಕಂದಾಯ ದಾಖಲೆಯ ಮಾಹಿತಿಯನ್ನು ನೀಡಿದರು.

ಈ ವೇಳೆ ಉಪವಿಭಾಗಾಧಿಕಾರಿ ವಿ.ಆರ್‌.ಶೈಲಜಾ, ತಹಶೀಲ್ದಾರ್‌ ಶಿವಮೂರ್ತಿ, ಮುಖ್ಯ ಇಂಜಿನಿಯರ್‌ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌, ಸರ್ಕಲ್ ಇಸ್ಸ್‌ಪೆಕ್ಟರ್‌ ಕೆ.ಎನ್‌.ಸುಧಾಕರ್‌, ಸರ್ವೇ ಅಧಿಕಾರಿಗಳು ಮತ್ತು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios