ಬೆಲೆ ಇಳಿಕೆ ಸಾಧ್ಯ​ತೆ​ಯಿಂದ ಮಾರು​ಕ​ಟ್ಟೆಗೆ ಅಡಕೆ ಆವಕ ಹೆಚ್ಚ​ಳ| ಆದಷ್ಟು ಬೇಗ ಅಡಕೆ ಮಾರಿಕೊಳ್ಳುವ ತರಾತುರಿಯಲ್ಲಿರುವ ರೈತರು| ರಾಜ್ಯದೆಲ್ಲೆಡೆ ಬೆಳೆ ಸಾಲ ವಾಪಸಾತಿಗೆ ಮಾರ್ಚ್‌ ತಿಂಗಳ ಅಂತ್ಯ ಗಡುವು| 

ಮಂಜುನಾಥ ಸಾಯೀಮನೆ

ಶಿರಸಿ(ಏ.17): ಕಳೆದ ವರ್ಷ ಕಹಿ ಉಂಡ ಅಡಕೆ ಬೆಳೆಗಾರರು ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗ ತಮ್ಮ ಫಸಲಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಇದರಿಂದಾಗಿ ಅಡಕೆ ವಹಿವಾಟು ನಡೆಸುವ ಸಂಘ ಸಂಸ್ಥೆಗಳಲ್ಲಿ ಪ್ಯಾಪಾರಿ ಪ್ರಾಂಗಣ ತುಂಬಿ, ಮಾರಾಟಕ್ಕೂ ಜಾಗ ಇಲ್ಲದಂತಾಗಿದೆ. ಇದರ ಬೆನ್ನಲ್ಲೇ ಚಾಲಿ ಅಡಕೆ ದರ ಸಹ ಹಿಂದಡಿ ಇಟ್ಟಿದೆ.

ಕಳೆದ ಒಂದು ವಾರದಿಂದ ಅಡಕೆ ಮಾರುಕಟ್ಟೆ ರೈತರ ಪ್ರಮುಖ ಚರ್ಚಾ ವಿಷಯವಾಗಿದೆ. ದರ ಇನ್ನೂ ಇಳಿಯುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿದಿದ್ದು, ಆದಷ್ಟು ಬೇಗ ಅಡಕೆ ಮಾರಿಕೊಳ್ಳುವ ತರಾತುರಿಯಲ್ಲಿ ರೈತರಿದ್ದಾರೆ. ನಗರದ ಪ್ರಮುಖ ಅಡಕೆ ಮಾರುಕಟ್ಟೆ ಟಿಎಸ್‌ಎಸ್‌ ಮತ್ತು ಟಿಎಂಎಸ್‌ ನಲ್ಲಿ ಸರಾಸರಿ ಪ್ರತಿ ದಿನದ ವಹಿವಾಟು 1100 ಚೀಲ ಅಡಕೆ ಇದ್ದರೆ, ಕಳೆದೊಂದು ವಾರದಿಂದ 2100 ಚೀಲ ಪ್ರತಿ ದಿನ ಬರುತ್ತಿದೆ. ಇದರಿಂದಾಗಿ ಒತ್ತಡ ಉಂಟಾಗುತ್ತಿದ್ದು, ಅಂದು ತಂದ ಅಡಕೆಯನ್ನು ಅಂದೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನ ಅಡಕೆಯನ್ನು ವ್ಯಾಪಾರಿ ಪ್ರಾಂಗಣದಲ್ಲಿಯೇ ದಾಸ್ತಾನು ಇಟ್ಟು ಜಾಗ ಸಿಕ್ಕಾಗ ಮಾರಾಟಕ್ಕೆ ತೆಗೆಯಬೇಕಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಡಕೆ ಬೆಳೆಯ ಪ್ರಮಾಣ ಶೇ. 15ರಷ್ಟು ಅಧಿಕವಾಗಿದೆ. ಮಳೆಗಾಲದ ದಿನಗಳಲ್ಲಿ ಕೊಳೆ ರೋಗ, ಮರ ಮುರಿದುಬಿದ್ದು ರೈತರು ಹಾನಿ ಅನುಭವಿಸಿದ್ದರೂ ಒಟ್ಟಾರೆಯಾಗಿ ನೋಡಿದರೆ ಅಡಕೆ ಬೆಳೆ ತುಸು ಜಾಸ್ತಿ ಇದೆ. ಅಲ್ಲದೇ, ಈ ವರ್ಷ ರೈತರು ರಾಶಿ ಅಡಕೆಯನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಿದ್ದು, ತಮ್ಮ ಬೆಳೆಯ ಶೇ. 85ರಷ್ಟನ್ನು ಚಾಲಿಯಾಗಿಸಿದ್ದಾರೆ. ಒಣಗಿ ಸಿದ್ಧವಾದ ಚಾಲಿ ಅಡಕೆಯನ್ನು ಮಾರುಕಟ್ಟೆಗೆ ತರುವ ಹಂಗಾಮೂ ಇದಾಗಿದೆ.

ಕಣ್ಣೀರು ತರಿಸದ ಈರುಳ್ಳಿ ನೋಡಿದ್ದೀರಾ? ಹೌದಾ, ಯಾವುದದು?

ಕಳೆದ ವರ್ಷ ಈ ದಿನಗಳಲ್ಲಿ ಚಾಲಿ ಅಡಕೆಗೆ ಪ್ರತಿ ಕ್ವಿಂಟಲ್‌ಗೆ 25ರಿಂದ 26 ಸಾವಿರ ದರವಿತ್ತು. ಲಾಕ್‌ಡೌನ್‌ ಆರಂಭವಾದ ಬಳಿಕ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡು ರೈತರು ಕಂಗಾಲಾಗಿದ್ದರು. ಲಾಕ್‌ಡೌನ್‌ ಬಳಿಕ ಹೊರ ರಾಜ್ಯಗಳಿಗೆ ಇಲ್ಲಿಯ ಅಡಕೆ ರವಾನೆ ಸಾಧ್ಯವಾಗದಿದ್ದರೂ, ಟಿಎಸ್‌ಎಸ್‌ ಮತ್ತು ಟಿಎಂಎಸ್‌ ನಂತಹ ಸಂಸ್ಥೆಗಳು ರೈತರ ಹಿತ ಕಾಯುವ ಸಲುವಾಗಿ ಸ್ವತಃ ಖರೀದಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಹೊರ ರಾಜ್ಯಗಳಿಂದ ಒಮ್ಮೆಲೇ ಬೇಡಿಕೆ ಬಂದು ಚಾಲಿ ಅಡಕೆ ದರವೂ ಏರಿಕೆಯಾಗಿ ಪ್ರತಿ ಕ್ವಿಂಟಲ್‌ಗೆ 40 ಸಾವಿರ ದಾಟಿತ್ತು.

ಈಗ ಮತ್ತೆ ಅಂತಹದೇ ಸ್ಥಿತಿ ಬರಲಾರಂಭಿಸಿದೆ. ಕೋವಿಡ್‌ ಏರುತ್ತಿರುವುದು ಹೊರ ರಾಜ್ಯಗಳಿಗೆ ಅಡಕೆ ಸಾಗಾಟ ಮಾಡಲು ಕಷ್ಟವಾಗುತ್ತಿದೆ. ಖರೀದಿಸಿದ ಅಡಕೆ ತಮ್ಮಲ್ಲಿಯೇ ಉಳಿದುಬಿಟ್ಟರೆ ಎಂಬ ಆತಂಕ ವ್ಯಾಪಾರಸ್ಥರಿಗೂ ಕಾಡಲಾರಂಭಿಸಿದೆ. ಇದೆಲ್ಲದರ ಪರಿಣಾಮ ಚಾಲಿ ಅಡಕೆ ದರ ನಿಧಾನವಾಗಿ ಕೆಳಮುಖವಾಗ​ತೊಡಗಿದೆ.

ಅಡಕೆ ಬೆಳೆಗಾರರ ಪಾಲಿಗೆ ಕೊರೊನಾ ಒಂದಿಷ್ಟು ಆತಂಕ ಮೂಡಿಸಿದರೆ ಇನ್ನೊಂದೆಡೆ ಸಂತಸವನ್ನೂ ನೀಡಿದೆ. ಅಡಕೆ ಅಕ್ರಮ ಆಮದು ಹಿಂದಿನಿಂದಲೂ ಇದ್ದು, ರೈತರಿಗೆ ಮತ್ತು ಸ್ಥಳೀಯ ವ್ಯಾಪಾರಸ್ಥರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಬಂದಿದೆ. ದರ ಸ್ವಲ್ಪ ಏರಿಕೆ ಆಗುತ್ತಿದ್ದಂತೆಯೇ ಅಕ್ರಮ ಆಮದೂ ಏರಿಕೆ ಆಗಿ, ದರ ಮತ್ತೆ ಕುಸಿತವಾಗುತ್ತಿತ್ತು. ಇದು ಬಂಡವಾಳ ಹೂಡಿದ ಸ್ಥಳೀಯ ವ್ಯಾಪಾರಸ್ಥರಿಗೂ ಮಾರಕವಾಗುತ್ತಿತ್ತು. ಆದರೆ, ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ವೇಳೆ ಎಲ್ಲ ಬಂದರುಗಳಲ್ಲಿ, ಅಡಕೆ ಆಗಮಿಸುವ ಕಳ್ಳ ಮಾರ್ಗಗಳಲ್ಲಿ ನಿಗಾ ವಹಿಸಲಾಗಿದೆ. ಹೀಗಾಗಿ, ಲಾಕ್‌ಡೌನ್‌ ಬಳಿಕ ಸ್ಥಳೀಯ ಅಡಕೆಗೆ ಉತ್ತಮ ದರ ಲಭಿಸಲಾರಂಭಿಸಿದೆ. ಅಕ್ರಮ ಆಮದು ಈಗ ಸಂಪೂರ್ಣ ನಿಂತಿದೆ. ಪಾನ್‌ ಮಸಾಲಾ ತಯಾರಕರು ಮಾರ್ಚ್‌ ಅಂತ್ಯದಲ್ಲಿ ಅಗತ್ಯ ಪ್ರಮಾಣದ ಅಡಕೆ ಖರೀದಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಾಲಿ ಅಡಕೆಗೆ ದರ ಕುಸಿತವಾದರೂ, ಕೋವಿಡ್‌ ಸ್ಥಿತಿ ಸುಧಾರಿಸಿದ ಬಳಿಕ ಒಮ್ಮೆಲೇ ಅಡಕೆಗೆ ಬೇಡಿಕೆ ಹೆಚ್ಚಲಿದ್ದು, ಜೂನ್‌ ತಿಂಗಳ ಅಂತ್ಯದಲ್ಲಿ ನಿರೀಕ್ಷೆಗೂ ಮೀರಿ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ರಾಜ್ಯದೆಲ್ಲೆಡೆ ಬೆಳೆ ಸಾಲ ವಾಪಸಾತಿಗೆ ಮಾರ್ಚ್‌ ತಿಂಗಳ ಅಂತ್ಯ ಗಡುವಾಗಿದೆ. ಆದರೆ, ಅಡಕೆ ಬೆಳೆಯನ್ನು ಮಾರ್ಚ್‌ ಅಂತ್ಯದೊಳಗೆ ಮಾರುಕಟ್ಟೆಗೆ ತರಲು ಸಾಧ್ಯವಿಲ್ಲ ಎಂಬ ಕಾರಣದಿಂದ ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯಕ್ಕೆ ಬೆಳೆಸಾಲ ವಾಪಸಾತಿಯ ಗಡುವು ನೀಡಲಾಗಿದೆ. ಆದರೆ, ಕೋವಿಡ್‌ ಪರಿಸ್ಥಿತಿ ಕೈ ಮೀರಿದರೆ ನಿಗದಿತ ಸಮಯದಲ್ಲಿ ಬೆಳೆ ಸಾಲ ವಾಪಸ್‌ ಮಾಡಲು ಸಾಧ್ಯವಾಗದೇ ಶೂನ್ಯ ಬಡ್ಡಿಯ ಸೌಲಭ್ಯ ಕೈ ತಪ್ಪಬಹುದು ಎಂಬ ಆತಂಕದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಮಾರುಕಟ್ಟೆಗೆ ತರುತ್ತಿದ್ದಾರೆ. ದರ ಕುಸಿತವಾಗುತ್ತಿದ್ದರೂ, ಬೆಳೆ ಮಾರುವ ಉತ್ಸಾಹ ತೋರುತ್ತಿದ್ದಾರೆ.

ಚಾಲಿ ಅಡಕೆಯ ಸರಾಸರಿ ದರ

ಮಾ.31 : . 39142-39599
ಏ. 2 : 35308-38098
ಏ 7: 34608-38099
ಏ 9: 34299-37299
ಏ12: 34099-37086
ಏ 14: 34099-36628
ಏ15: 33099-36067

ಬೆಳೆ ಸಾಲ ವಾಪಸಾತಿಗಾಗಿ ರೈತರು ಅಡಕೆಯನ್ನು ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ಕೋವಿಡ್‌ ಹೆಚ್ಚುತ್ತಿರುವ ಕಾರಣ ಅಡಕೆ ಹೊರ ರಾಜ್ಯಕ್ಕೆ ಸಾಗಾಟದ ತೊಂದರೆ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಶಿರಸಿ ಟಿಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದ್ದಾರೆ.