ಮಂಡ್ಯ/ ಶ್ರೀರಂಗಪಟ್ಟಣ :  ಕೃಷ್ಣರಾಜ ಸಾಗರ ಅಣೆಕಟ್ಟೆ(ಕೆಆರ್‌ಎಸ್‌) ಸುರಕ್ಷತೆ ಗಮನದಲ್ಲಿಟ್ಟುಕೊಂಡು ಆಣೆಕಟ್ಟೆಸುತ್ತ ಗಣಿಗಾರಿಕೆ ಪರೀಕ್ಷಾರ್ಥ ಸ್ಫೋಟ (ಟ್ರಯಲ್‌ ಬ್ಲಾಸ್ಟ್‌) ನಡೆಸಲು ಆಗಮಿಸಿದ್ದ ಪುಣೆಯ ಸಿಡಬ್ಲ್ಯೂಪಿಆರ್‌ಸಿ ತಂಡದ ನಾಲ್ವರು ವಿಜ್ಞಾನಿಗಳನ್ನು ಪ್ರಗತಿಪರರು ಹಾಗೂ ರೈತ ಹೋರಾಟಗಾರರು ಗೋ ಬ್ಯಾಕ್‌ ಚಳವಳಿ ನಡೆಸಿ ವಾಪಸ್‌ ಕಳುಹಿಸಿದ ಘಟನೆ ಸೋಮವಾರ ಜರುಗಿತು.

ಕೆಆರ್‌ಎಸ್‌ ಸುತ್ತ ಮುತ್ತ ನಡೆಯುವ ಗಣಿಗಾರಿಕೆಯ ಸ್ಫೋಟದಿಂದ ಆಣೆಕಟ್ಟೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕೇಂದ್ರ ಸಂಸ್ಥೆ ವರದಿ ಆಧರಿಸಿ ಸ್ಫೋಟದ ಮಾಪನ ಹಾಗೂ ಆಣೆಕಟ್ಟೆಯ ಭದ್ರತೆ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಪುಣೆಯ ಸಂಸ್ಥೆಯೊಂದಕ್ಕೆ ಕೇಳಲಾಗಿತ್ತು.

ಪ್ರತಿಭಟನೆ: ಪರೀಕ್ಷಾರ್ಥ ಸ್ಫೋಟ ಖಂಡಿಸಿ ಕೆಆರ್‌ಎಸ್‌ ಉಳಿವು ಜನಾಂದೋಲನ ಸಮಿತಿ ಮತ್ತು ಪ್ರಗತಿಪರರು ಅತಿಥಿ ಗೃಹದ ಎದುರು ಧರಣಿ ಆರಂಭಿಸಿದರು. ಮತ್ತೊಂದೆಡೆ ಗಣಿ ಪರೀಕ್ಷಾ ಕಾರ್ಯಕ್ರಮ ನಡೆಯಬೇಕು ಎಂದು ಬೇಬಿಬೆಟ್ಟದ ಕ್ರಷರ್‌ ಮಾಲಿಕರು ಹಾಗೂ ಕಾರ್ಮಿಕರ ಗುಂಪು ಕೆಆರ್‌ಎಸ್‌ ಎಂಜನಿಯರ್‌ ಕಚೇರಿಯ ಎದುರು ಪ್ರತಿಭಟಿಸಿದರು.

ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ವಿಜ್ಞಾನಿಗಳು ಹಾಗೂ ಪೊಲೀಸರು ಪ್ರಗತಿಪರರು, ರೈತ ಮುಖಂಡರ ಜೊತೆ ನಡೆಸಿದ ಮಾತುಕತೆ ವಿಫಲವಾದ ಬಳಿಕ ಹೋರಾಟಗಾರರು ಪುಣೆಯ ವಿಜ್ಞಾನಿಗಳಿಗೆ ಗೋ ಬ್ಯಾಕ್‌ ಚಳುವಳಿ ಸಂದೇಶ ರವಾನೆ ಮಾಡಿದರು. ಪ್ರತಿಭಟನೆಗೆ ಮಣಿದು ಪುಣೆಯಿಂದ ಆಗಮಿಸಿದ್ದ ವಿಜ್ಞಾನಿಗಳು ಸಭೆಯ ನಂತರ ಅಲ್ಲಿಂದ ನಿರ್ಗಮಿಸಿತು.