Asianet Suvarna News Asianet Suvarna News

Bengaluru: ಸಾಲ ಮನ್ನಾಕ್ಕಾಗಿ ರೈತರ ಬೃಹತ್‌ ಧರಣಿ

ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು. ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಯಂತೆ ಸಾಲಮನ್ನಾ ಮಾಡಬೇಕು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬಾರದು ಎಂದು ಆಗ್ರಹಿಸಿದ ಕೋಡಿಹಳ್ಳಿ ಚಂದ್ರಶೇಖರ್‌ 

Farmers Held Protest For Loan Waiver in Bengaluru grg
Author
First Published Sep 13, 2022, 10:35 AM IST

ಬೆಂಗಳೂರು(ಸೆ.13):  ಅನ್ನದಾತರ ಹಿತಕ್ಕೆ ಧಕ್ಕೆ ತರುವ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು, ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಾಲಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾವಿರಾರು ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು. ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಯಂತೆ ಸಾಲಮನ್ನಾ ಮಾಡಬೇಕು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬಾರದು ಎಂದು ಆಗ್ರಹಿಸಿದರು.

ಈಗಲೂ ನಾನು ರೈತ ಸಂಘ ರಾಜ್ಯಾಧ್ಯಕ್ಷ: ಕೋಡಿಹಳ್ಳಿ ಚಂದ್ರ​ಶೇ​ಖರ್‌

ಬಳಿಕ ಕಾರ್ಯಕರ್ತರು ಜಾಥಾ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ಆಗ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ನೂರಾರು ರೈತರನ್ನು ವಶಕ್ಕೆ ಪಡೆದ ಪೊಲೀಸರು ಆಡುಗೋಡಿ ಕೆಎಸ್‌ಆರ್‌ಪಿ ಮೈದಾನ ಮತ್ತು ಮೈಸೂರು ರಸ್ತೆಯ ಸಿಎಆರ್‌ ಮೈದಾನಕ್ಕೆ ಕರೆದೊಯ್ದರು.

ಮೈದಾನಗಳಲ್ಲೇ ರೈತರು ಪ್ರತಿಭಟನೆ ಮುಂದುವರೆಸಿದಾಗ ಸರ್ಕಾರ ಕೆಲ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿತು. ನಂತರ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಅವರನ್ನು ಭೇಟಿಯಾದ ರೈತರ ನಿಯೋಗ ಮನವಿ ಸಲ್ಲಿಸಿತು. ಪೂರಕವಾಗಿ ಸರ್ಕಾರ ಸ್ಪಂದಿಸಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು.
 

Follow Us:
Download App:
  • android
  • ios