ರಾಣಿಬೆನ್ನೂರು[ಮಾ.02]: ಬೇರೆಡೆಯಿಂದ ಬೆಳ್ಳುಳ್ಳಿ ತಂದು ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವರ್ತಕರು ಮುಂದಾಗಿದ್ದರಿಂದ ಬೆಳ್ಳುಳ್ಳಿ ದರ ತೀವ್ರ ಕುಸಿತಗೊಂಡಿದೆ ಎಂದು ಆಕ್ರೋಶಗೊಂಡ ರೈತರು ಖರೀದಿದಾರರು ತಂದಿದ್ದ ಬೆಳ್ಳುಳ್ಳಿ ಚೀಲಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರುವಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಕಳೆದ ವಾರ ಕ್ವಿಂಟಲ್‌ ಬೆಳ್ಳುಳ್ಳಿಗೆ 12 ಸಾವಿರ ಇದ್ದ ದರ ಭಾನುವಾರ ಕೇವಲ 5 ಸಾವಿರ ರು.ಗೆ ಕುಸಿದಿತ್ತು. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು. ವರ್ತಕರ ವಿರುದ್ಧ ಘೋಷಣೆ ಕೂಗಿದ ರೈತರು, ಸ್ಥಳೀಯ ಬೆಳ್ಳುಳ್ಳಿ ಮಾತ್ರ ಖರೀದಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಸಂದರ್ಭದಲ್ಲೇ ತಾಲೂಕಿನ ನಂದಿಹಳ್ಳಿ ರೈತ ಮಹಿಳೆ ನಾಗಮ್ಮ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲವು ವರ್ತಕರು ಗದಗ ಮತ್ತು ಬೆಳಗಾವಿ, ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಖರೀದಿಸಿ ಅಧಿಕ ಪ್ರಮಾಣದ ಬೆಳ್ಳುಳ್ಳಿಯನ್ನು ರಾಣಿಬೆನ್ನೂರಿನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬೆಳ್ಳುಳ್ಳಿ ತಂದ ರೈತರನ್ನು ಕೇಳುವವರೇ ಇಲ್ಲವಾದರು. ಸಹನೆ ಕಳೆದುಕೊಂಡ ರೈತರು ರೈತ ಮುಖಂಡ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವರ್ತಕರು ಮುಂಚಿತವಾಗಿ ಖರೀದಿಸಿ ಸಂಗ್ರಹಿಸಿಟ್ಟಿದ್ದ ಬೆಳ್ಳುಳ್ಳಿಯನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಹಾಗೂ ಹಳೆ ಪಿ.ಬಿ. ರಸ್ತೆ ಹಲಗೇರಿ ಕ್ರಾಸ್‌ ಬಳಿ ತಂದು ಚೆಲ್ಲಿದರು.

ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಖರೀದಾರರು ಬೇರೆ ಊರುಗಳಿಂದ ಬೆಳ್ಳುಳ್ಳಿ ತಂದು ಮಾರುತ್ತಿರುವುದರಿಂದ ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಬೆಳೆಗಳನ್ನು ಕೇಳುವವರೇ ಇಲ್ಲವಾಗಿದೆ ಎಂದರು. ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಹಿನ್ನೆಲೆಯಲ್ಲಿ ಎಪಿಎಂಸಿ ಅಧ್ಯಕ್ಷ ಶೇಖಣ್ಣ ಕಳಸದ, ಸದಸ್ಯರುಗಳು ಹಾಗೂ ಎಪಿಎಂಸಿ ಅಧಿಕಾರಿ ಪರಮೇಶ ನಾಯಕ ಜತೆ ಸ್ಥಳಕ್ಕೆ ಧಾವಿಸಿ ಸಮಸ್ಯೆ ಕುರಿತು ರೈತರು ಹಾಗೂ ವರ್ತಕರ ಬಳಿ ಸಮಾಲೋಚನೆ ನಡೆಸಿದರು. ರೈತರು ತಂದ ಮಾಲಿಗೆ ಸೂಕ್ತ ದರ ನೀಡುವ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.

ಎಪಿಎಂಸಿ ಸದಸ್ಯರಾದ ಬಸವರಾಜ ಹುಲ್ಲತ್ತಿ, ಜಟ್ಟೆಪ್ಪ ಕರೇಗೌಡ್ರ, ಬಸವರಾಜ ಸವಣೂರ, ಗ್ರಾಮೀಣ ಸಿಪಿಐ ಸುರೇಶ ಸಗರಿ, ಶಹರ ಪಿಎಸ್‌ಐ ಪ್ರಭು ಕೆಳಗಿನಮನಿ, ಮೃತ್ಯುಂಜಯ ಗುದಿಗೇರ ಸೇರಿದಂತೆ ಇತರರಿದ್ದರು.