ವಿಜಯಪುರ: ಕಬ್ಬಿನ ಬಿಲ್ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ..!
ವಿಜಯಪುರ ಜಿಲ್ಲೆಯಲ್ಲೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ ರೈತರು ಹೋರಾಟಗಾರರು
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಅ.22): ಕಬ್ಬಿನ ಬಿಲ್ ದರ ಹೆಚ್ಚಿಸುವಂತೆ ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ಹೆಚ್ಚಿನ ದರಕ್ಕೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ವಿಜಯಪುರ ಜಿಲ್ಲೆಯಲ್ಲೂ ರೈತರು ಹೋರಾಟಕ್ಕೆ ಇಳಿದಿದ್ದು, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕೊಲ್ಹಾರದ ಯು.ಕೆ.ಪಿ ಬಳಿ ರೈತರ ದಿಢೀರ್ ಪ್ರತಿಭಟನೆ
ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಗೆ 3500 ರೂಪಾಯಿ ನೀಡುವಂತೆ ಆಗ್ರಹಿಸಿ ಬಾಗಲಕೋಟ ಹಾಗೂ ವಿಜಯಪುರ ಅವಳಿ ಜಿಲ್ಲೆಯ ರೈತರು ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ರಾಷ್ಟ್ರೀಯ ಹೆದ್ದಾರಿ 218ನ್ನು ಕ್ಷಣ ಕಾಲ ಕಬ್ಬಿನ ಟ್ರ್ಯಾಕ್ಟರ್ ಸೇರಿದಂತೆ ಅನೇಕ ವಾಹನಗಳನ್ನು ತಡೆದು ಬಂದ ಮಾಡಿ ಪ್ರತಿಭಟಿಸಿದರು.
ಕಾಂತಾರ ಬಗ್ಗೆ ವಿವಾದಾತ್ಮಕ ಹೇಳಿಕೆ: ನಟ ಚೇತನ್ 'ನಾಲಾಯಕ್': ಯತ್ನಾಳ್
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ
ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವಳಿ ಜಿಲ್ಲೆಯ ರೈತರು ಭಾಗವಹಿಸಿದ್ದರು. ಸರ್ಕಾರ ಹಾಗೂ ಕಾರ್ಖಾನೆಗಳ ಮಾಲೀಕರ ವಿರುದ್ಧ ಘೋಷಣೆಯನ್ನು ಕೂಗಿದರು.
ಪ್ರತಿ ಟನ್ ಗೆ 3500 ಕೊಡಿ ರೈತರ ಆಗ್ರಹ
ಈ ಸಂದರ್ಭದಲ್ಲಿ ಈರುಳ್ಳಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಇಂದು ನಾವು ರೈತರು ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳನ್ನು ತಡೆದು ಹಾಗೂ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡುವುದರ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.
ಅವಳಿ ಜಿಲ್ಲೆಯಲ್ಲಿ ಬರುವ ಕಬ್ಬಿಣ ಕಾರ್ಖಾನೆಗಳ ಮಾಲೀಕರು ನವಂಬರ್ 27ರಂದು ಕೊಲ್ಹಾರ ಪ್ರವಾಸಿ ಮಂದಿರದಲ್ಲಿ ನಡೆಯುವ ರೈತರ ಸಭೆಗೆ ಆಗಮಿಸಿ ಕಬ್ಬಿಗೆ ಪ್ರತಿ ಟನ್ ಗೆ ತಾವು ತಮ್ಮ ಕಾರ್ಖಾನೆ ವತಿಯಿಂದ ನೀಡುವ ಕಬ್ಬಿನ ದರ ಪ್ರಕಟಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಹಾಗೂ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ವಿವಿಧ ತಾಲೂಕಿನ ರೈತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.