ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮಾ.12): ಬೆಂಬಲ ಬೆಲೆ ಇಲ್ಲದೆ ಸದಾ ಗೊಣಗುತ್ತಿದ್ದ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಇದೇ ಮೊದಲ ಬಾರಿಗೆ ಭರ್ಜರಿ ಲಾಭದ ರುಚಿ ನೋಡಿದ್ದಾರೆ. ದಿಢೀರ್‌ ಏರಿಕೆ ಕಂಡ ಮೆಣಸಿನಕಾಯಿಗೆ ಚಿನ್ನದ ಬೆಲೆ ಬರುತ್ತಿದ್ದಂತೆಯೇ ರೈತರು ಜೇಬುಗಳು ಭರ್ತಿಯಾಗಿದ್ದು, ಸಾಲದ ಸಂಕಷ್ಟಗಳಿಂದ ಮುಕ್ತವಾಗುವ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷವೂ ಬೆಲೆಯಿಲ್ಲದೆ ಒದ್ದಾಡುವ ಸ್ಥಿತಿ ಇತ್ತು. ಬೆಳೆಯಿದ್ದರೆ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆಯಿಲ್ಲದೆ ಕಂಗಾಲಾಗುತ್ತಿದ್ದೆವು. ಈ ಬಾರಿ ಒಂದಷ್ಟುಇಳುವರಿಯಲ್ಲಿ ಕುಸಿತ ಕಂಡರೂ, ಅನಿರೀಕ್ಷಿತವಾಗಿ ಸಿಕ್ಕ ಧಾರಣೆಯಿಂದ ಕೈ ತುಂಬ ಹಣದ ಹರಿದು ಬಂದಿದೆ. ಬೆಲೆಗಳ ಹೊಯ್ದಾಟದಲ್ಲಿ ಬೆಲೆ ಇಲ್ಲದೆ ಮತ್ತೆ ಸಮಸ್ಯೆಯಾಗಬಹುದು ಎಂಬ ಅಳುಕಿನಲ್ಲಿಯೇ ಮೆಣಸಿನಕಾಯಿ ಬೆಳೆಯತ್ತ ಮನಸ್ಸು ಮಾಡಿದ್ದೆವು. ಆದರೆ, ಈ ಬಾರಿ ದೇವರೇ ನಮ್ಮ ಕೈ ಹಿಡಿದ ಎಂದು ಸಂತಸ ವ್ಯಕ್ತಪಡಿಸುವ ಬೆಳೆಗಾರರು, ಕೃಷಿಕರು ಮಾರುಕಟ್ಟೆಯಲ್ಲಿ ಸಿಕ್ಕ ಧಾರಣೆಯಿಂದ ‘ಲಕ್ಷ್ಮಿಪುತ್ರ’ರಾದ ಖುಷಿ ಹೊರ ಹಾಕುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆ ಎಷ್ಟು?:

ರೈತರು ಕನಸು ಮನಸ್ಸಿನಲ್ಲೂ ನಿರೀಕ್ಷೆ ಮಾಡದಷ್ಟುಈ ಬಾರಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. ಕಳೆದ ವರ್ಷ ಕ್ವಿಂಟಲ್‌ಗೆ 6 ರಿಂದ 9 ಸಾವಿರಗಳಿಗೆ ಮಾರಾಟವಾಗಿದ್ದ ಜವಾರಿ ಬ್ಯಾಡಗಿ ತಳಿ ಈ ಬಾರಿ 31 ಸಾವಿರವರೆಗೆ ಮಾರಾಟ ಕಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಂಟೂರು ತಳಿ ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ  5 ರಿಂದ 6 ಸಾವಿರ ಮಾರಾಟವಾಗಿತ್ತು. ಈ ಬಾರಿ 12 ರಿಂದ 14 ಸಾವಿರಕ್ಕೆ ಖರೀದಿಯಾಗಿದೆ. ಬಳಕೆಯಾಗದ ಬಿಳಿಗಾಯಿಗೂ ಬೇಡಿಕೆ ಬಂದಿದೆ. ಕಳೆದ ವರ್ಷ ಕ್ವಿಂಟಲ್‌ಗೆ 1500 ಗಳಷ್ಟಿದ್ದ ಬಿಳಿಗಾಯಿಗೆ ಈ ಬಾರಿ 5 ರಿಂದ 8 ಸಾವಿರ ಬೇಡಿಕೆ ಬಂದಿದೆ. ಇದರಿಂದ ಮೆಣಸಿನಕಾಯಿ ಬೆಳೆಯನ್ನು ಆಶ್ರಯಿಸಿದ್ದ ಜಿಲ್ಲೆಯ ಸಾವಿರಾರು ರೈತರು ಲಾಭದ ನೆಮ್ಮದಿ ಕಂಡುಕೊಂಡಿದ್ದಾರೆ.

ಎಕರೆಗೆ 80 ಸಾವಿರ ಖರ್ಚು:

ಜಿಲ್ಲೆಯ ಪೈಕಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು ಹಾಗೂ ಕಂಪ್ಲಿ ತಾಲೂಕಿನಲ್ಲಿ ಮೆಣಸಿನಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಸುಮಾರು 50 ಸಾವಿರ ಎಕರೆಯಷ್ಟು  ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿರಬಹುದು ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಜಿಲ್ಲೆಯಲ್ಲಿ ಬ್ಯಾಡಗಿ ಹಾಗೂ ಗುಂಟೂರು ತಳಿಯನ್ನು ಬೆಳೆಯಲಾಗುತ್ತಿದ್ದು, ಪ್ರತಿ ಎಕರೆಗೆ ಅಂದಾಜು 80 ಸಾವಿರ ಖರ್ಚಾಗುತ್ತದೆ. ಈ ಬಾರಿ ಎಕರೆಗೆ 12 ರಿಂದ 17 ಕ್ವಿಂಟಲ್‌ನಷ್ಟು ಬೆಳೆ ತೆಗೆದಿದ್ದಾರೆ.

ಕಳೆದ ಬಾರಿ ಸಹ ಇಷ್ಟೇ ಪ್ರಮಾಣದಲ್ಲಿ ಬೆಳೆ ಬಂದಿತ್ತು. ಆದರೆ, ಧಾರಣೆಯಿಲ್ಲದೆ ರೈತರು ಕಂಗಾಲಾಗಿದ್ದರು. ಆದರೆ, ಈ ಬಾರಿ ಉತ್ತಮ ಧಾರಣೆ ಸಿಕ್ಕಿದ್ದರಿಂದ ರೈತರು ಬೆಲೆ ಸಮಸ್ಯೆಯಿಂದ ಪಾರಾಗಿದ್ದಾರೆ.
ಈ ಹಿಂದೆ ಎಂದೂ ಇಂತಹ ಧಾರಣೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿದೆ. ಪ್ರತಿ ಬಾರಿ ಇದೇ ರೀತಿ ಧಾರಣೆ ಸಿಕ್ಕರೆ ರೈತರು ಯಾವುದೇ ಸಮಸ್ಯೆಯಿಲ್ಲದೆ ಕೃಷಿ ಮಾಡುತ್ತಾರೆ ಎಂದು ಬಳ್ಳಾರಿ ತಾಲೂಕಿನ ಮೆಣಸಿನಕಾಯಿ ಬೆಳೆಗಾರ ಕೋಳೂರು ಭೀಮಣ್ಣ ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ಮೆಣಸಿನಕಾಯಿ ಬೆಳೆಯುತ್ತಿದ್ದೇವೆ. ಆದರೆ, ಇಷ್ಟೊಂದು ಧಾರಣೆ ಎಂದೂ ಬಂದಿರಲಿಲ್ಲ. ಕಳೆದ ವರ್ಷ ಧಾರಣೆ ಇರಲಿಲ್ಲ. ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ಹೆಚ್ಚಿನ ಹಣ ಸಿಕ್ಕಿದೆ. ಕ್ವಿಂಟಲ್‌ಗೆ 30 ಸಾವಿರಗಳಂತೆ ಮಾರಾಟ ಮಾಡಿ ಬಂದಿರುವೆ ಎಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಾಪುರ ಗ್ರಾಮದ ಬಸವನಗೌಡ ತಿಳಿಸಿದ್ದಾರೆ.