ಈರುಳ್ಳಿಗೆ ಬಂಪರ್ ಬೆಲೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ರೈತರು
12500 ರು. ಗಡಿ ದಾಟಿದ ಈರುಳ್ಳಿ | ರೈತರಲ್ಲಿ ಸಂತಸ| ಗ್ರಾಹಕನ ಕಣ್ಣಲ್ಲಿ ನೀರು| ಎಪಿಎಂಸಿ ಆವರಣದಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ ರೈತರು|10 ಕ್ವಿಂಟಲ್‌ಗೂ ಅಧಿಕ ಈರುಳ್ಳಿ 10500 ರುಪಾಯಿಗೆ ಮಾರಾಟ|5 ಕ್ವಿಂಟಲ್ ಉತ್ತಮ ಗುಣಮಟ್ಟದ ಸ್ಥಳೀಯ ಈರುಳ್ಳಿಯೇ 12500 ರುಪಾಯಿಗೆ ಮಾರಾಟ|
ಗದಗ[ಡಿ.04]: ದಿನೇ ದಿನೇ ಏರಿಕೆಯಾಗುತ್ತಿರುವ ಈರುಳ್ಳಿ ದರ ಮಂಗಳವಾರ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಗರಿಷ್ಠ 12500 ಪ್ರತಿ ಕ್ವಿಂಟಾಲ್‌ಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ರೈತರಲ್ಲಿ ಹೊಸ ಉತ್ಸಾಹಕ್ಕೆ ದರದಲ್ಲಿನ ಏರಿಕೆ ಕಾರಣವಾದರೆ, ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ.
ಮಂಗಳವಾರ ಗದಗ ಮಾರುಕಟ್ಟೆಯಲ್ಲಿ ಯರೇಬೇಲೇರಿಯ ರೈತ ಶೇಖಪ್ಪ ಚೋರಗಸ್ತಿ ಎನ್ನುವವರ 10 ಕ್ವಿಂಟಲ್‌ಗೂ ಅಧಿಕ ಈರುಳ್ಳಿ 10500 ರುಪಾಯಿಗೆ ಮಾರಾಟವಾಗಿದ್ದರೆ, ಪುಟ್ಟರಾಜ ಅಂಗಡಿಯಲ್ಲಿ ರೈತನೋರ್ವನ (ಹೆಸರು ಹೇಳಲು ಇಚ್ಛಿಸಲಿಲ್ಲ) 5 ಕ್ವಿಂಟಲ್ ಉತ್ತಮ ಗುಣಮಟ್ಟದ ಸ್ಥಳೀಯ ಈರುಳ್ಳಿಯೇ 12500 ರುಪಾಯಿಗೆ ಮಾರಾಟವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ಖುಷಿಗೊಂಡ ರೈತರು ಎಪಿಎಂಸಿ ಆವರಣದಲ್ಲಿಯೇ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಲ್ಲದೇ ನಮ್ಮ ಜೀವ ಮಾನದಲ್ಲಿಯೇ ಇಂತಹ ದರವನ್ನು ಮರಳಿ ಕಾಣುವುದಿಲ್ಲ ಎಂದಿದ್ದಾರೆ. ಈರುಳ್ಳಿ ಮಾರಾಟವಾಗಿರುವ ಅಂಗಡಿಯ ಮುಂದೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸತತ ಮಳೆಯಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಈರುಳ್ಳಿ ಕೊಳೆತು ಹೋಗಿದ್ದು, ಅಳಿದುಳಿದ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆಯಾದರೂ ಮಾರಾಟಕ್ಕೆ ಈರುಳ್ಳಿಯೇ ಉಳಿದಿಲ್ಲ. ಹಾಗಾಗಿ ದಿನೇ ದಿನೇ ಎಪಿಎಂಸಿಗೆ ಆವಕವಾಗುವ ಈರುಳ್ಳಿ ಪ್ರಮಾಣ ಗಣನೀಯವಾಗಿ ಕುಸಿತವಾಗುತ್ತಿದ್ದು ಮಂಗಳವಾರ 125 ಕ್ವಿಂಟಲ್ ನಷ್ಟು ಮಾತ್ರ ಬಂದಿದೆ.