ಕಾವೇರಿ ನೀರಿಗಾಗಿ ಸರದಿ ಉಪವಾಸ ಆರಂಭ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ೮೨ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಮುಂದುವರೆಸುವ ನಿರ್ಧಾರ ಕೈಗೊಂಡಿರುವ ಸಮಿತಿ ಸದಸ್ಯರು ಶನಿವಾರದಿಂದ ಸರದಿ ಉಪವಾಸ ಆರಂಭಿಸಿದ್ದಾರೆ.

  Farmers fasting for Cauvery water   snr

ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ೮೨ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಮುಂದುವರೆಸುವ ನಿರ್ಧಾರ ಕೈಗೊಂಡಿರುವ ಸಮಿತಿ ಸದಸ್ಯರು ಶನಿವಾರದಿಂದ ಸರದಿ ಉಪವಾಸ ಆರಂಭಿಸಿದ್ದಾರೆ.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಾವೇರಿ ವಿಚಾರದಲ್ಲಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರಗಳಿಂದ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ರಾಜ್ಯಸರ್ಕಾರ ಕೂಡ ನೀರು ರಕ್ಷಣೆಯ ದೃಢ ನಿರ್ಧಾರ ಮಾಡದಿರುವುದು ಹೋರಾಟ ಮುಂದುವರಿಸಲು ಧರಣಿ ನಿರತರು ನಿರ್ಧರಿಸಿದ್ದಾರೆ.

ರೈತ ಸಂಘದ ಮುಖಂಡ ಗುನ್ನ ನಾಯಕನಹಳ್ಳಿ ಮುದ್ದೇಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ದೊಡ್ಡ ಗರುಡನಹಳ್ಳಿ ಕೃಷ್ಣೇಗೌಡ, ಕಿರಂಗೂರು ಪಾಪು, ಪಣಕನಹಳ್ಳಿ ಪಿ.ಜಿ ನಾಗೇಂದ್ರ, ಸಿದ್ದಯ್ಯನಕೊಪ್ಪಲು ಎಸ್,ಕೆ ರಾಮಕೃಷ್ಣ ಮೊದಲ ದಿನ ಉಪವಾಸ ನಡೆಸಿ ಕಾವೇರಿ ವಿಚಾರದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಆದರೂ ಪ್ರಾಧಿಕಾರ ಮತ್ತು ನೀರು ನಿಯಂತ್ರಣ ಸಮಿತಿ ವಸ್ತುಸ್ಥಿತಿಯನ್ನೇ ಅವಲೋಕನ ಮಾಡುತ್ತಿಲ್ಲ. ೧೫ ದಿನ, ಒಂದು ತಿಂಗಳವರೆಗೆ ನೀರು ಹರಿಸಿ ಎಂದು ಅವೈಜ್ಞಾನಿಕ ಆದೇಶ ಮಾಡುತ್ತಲೇ ಇವೆ. ರಾಜ್ಯಕ್ಕೆ ಭೇಟಿ ನೀಡಿ ನೀರು ಸಂಗ್ರಹದ ಬಗ್ಗೆ ಮಾಹಿತಿಯನ್ನೇ ಪಡೆಯದೆ ಏಕಪಕ್ಷೀಯವಾಗಿ ತಮಿಳುನಾಡಿನ ಹಿತ ಕಾಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ. ಬರಗಾಲದಿಂದ ಕರ್ನಾಟಕಕ್ಕೆ ಜಲಸಂಕಷ್ಟ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ಸೇರಿದೆ. ಈ ವರ್ಷ ಯಾವ ಅಣೆಕಟ್ಟೆಗಳೂ ತುಂಬಲೇ ಇಲ್ಲ. ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗದೆ ತತ್ತರಿಸಿಹೋಗಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಇಂತಹ ಕಠೋರ ಪರಿಸ್ಥಿತಿಯಲ್ಲೂ ನೀರು ಬಿಡುವಂತೆ ಆದೇಶಿಸುತ್ತಿರುವುದು ಅಮಾನವೀಯ ಎಂದು ದೂಷಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಘೋರ ಅನ್ಯಾಯವಾಗುತ್ತಿದ್ದರೂ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ, ಮುಖ್ಯಮಂತ್ರಿ, ನೀರಾವರಿ ಸಚಿವರು ತುಟಿ ಬಿಚ್ಚುತ್ತಿಲ್ಲ. ಮೌನಕ್ಕೆ ಶರಣಾಗಿ ಹೊಣೆಗಾರಿಕೆಯಿಂದ ವಿಮುಖರಾಗಿದ್ದಾರೆ. ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರ ಕಾವೇರಿ ನೀರು ಸಂರಕ್ಷಿದೆ ನಿರಂತರವಾಗಿ ಹರಿಸುತ್ತಿದೆ. ಮತ್ತೊಂದೆಡೆ ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿರುವುದು ಕಾಣುತ್ತಿಲ್ಲ. ಸರ್ಕಾರದ ಬೇಜವಾಬ್ದಾರಿತನದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಚಳವಳಿಯನ್ನು ಕೈ ಬಿಡಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಜೊತೆ ಮಾತುಕತೆ ನಡೆಸಿ ಕರ್ನಾಟಕದ ಹಿತ ಕಾಪಾಡಲು ಒತ್ತಾಯಿಸಲಿ, ಹೋರಾಟ ರೂಪಿಸುವುದು ಸುಲಭದ ಮಾತಲ್ಲ, ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದರೂ ನೆರೆರಾಜ್ಯಕ್ಕೆ ನೀರು ಸ್ಥಗಿತ ಮಾಡುವುದಾಗಿ ದೃಢ ನಿಲುವು ಘೋಷಿಸಲಿಲ್ಲ, ಕಾನೂನಾತ್ಮಕವಾಗಿ ರಾಜ್ಯದ ಹಿತ ಕಾಪಾಡುವುದಾಗಿ ಹೇಳಿ ಹೋದರೂ ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ, ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ಕಾವೇರಿ ವಿಚಾರವಾಗಿ ಸಮಗ್ರವಾಗಿ ಚರ್ಚೆ ದಿಟ್ಟ ನಿಲುವಿಗೆ ಒತ್ತಾಯ ಮಾಡಿದ್ದೆವು. ಅದಕ್ಕೂ ಸಹ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಕನ್ನಡ ಸೇನೆ ಮಂಜುನಾಥ್, ನಾರಾಯಣ್. ಬದರಿ ನಾರಾಯಣ್, ಸಿ.ಟಿ ಮಂಜುನಾಥ್, ಎಂ.ಎಲ್.ತುಳಸೀಧರ್ ನೇತೃತ್ವ ವಹಿಸಿದ್ದರು.

Latest Videos
Follow Us:
Download App:
  • android
  • ios