ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜೂ.20): ಲಾಕ್‌ಡೌನ್‌ ಸಮಯದಲ್ಲಿ ನಷ್ಟ ಅನುಭವಿಸಿದ ತೋಟಗಾರಿಕಾ ಬೆಳೆ ಬೆಳೆದ ರೈತರಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರು ನಮೂದು ಮಾಡದಿರುವುದಕ್ಕೆ ತಾಲೂಕಿನ ಕೆಲ ರೈತರು ಆತಂಕದಲ್ಲಿ ಸಿಲುಕಿದ್ದಾರೆ.

2019-20ನೇ ಸಾಲಿನ ಹಿಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಾದ ಈರಳ್ಳಿ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಟೊಮ್ಯಾಟೊ, ಕುಂಬಳ, ಸವತೆಕಾಯಿ, ಬಾಳೆ, ಕಲ್ಲಂಗಡಿ, ಬೆಳೆ ಬೆಳೆದ ರೈತರಿಗೆ ಪರಿಹಾರ ಸಿಗದೆ ಅನ್ಯಾಯವಾಗಿದೆ. ಬೆಳೆ ಸಮೀಕ್ಷೆ ಮಾಡುವವರ ತಪ್ಪಿನಿಂದ ಈ ಬೆಳೆ ಬೆಳೆದ ನಿಜವಾದ ರೈತರಿಗೆ ಸರ್ಕಾರದ ಪರಿಹಾರ ಸಿಗದೆ ಪ್ರತಿ ದಿನ ತೋಟಗಾರಿಕೆ ಇಲಾಖೆಗೆ ಅಲೆದಾಡುವ ಸ್ಥಿತಿ ಬಂದಿದೆ.

ಸಿಗದ ಪರಿಹಾರ:

ತಾಲೂಕಿನ ರೈತರು ಹಿಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆ ಬೆಳೆದು ಮಾರಾಟ ಮಾಡಬೇಕೆನ್ನುವ ಸಮಯಕ್ಕೆ ಕೋವಿಡ್‌​​- 19 ಕಾಣಿಸಿಕೊಂಡಿದೆ. ಸರ್ಕಾರ 2 ತಿಂಗಳ ಲಾಕ್‌ಡೌನ ಮಾಡಿದ್ದರಿಂದ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ತೀವ್ರ ಸಮಸ್ಯೆಯಾಗಿತ್ತು. ಮಾರುಕಟ್ಟೆವ್ಯವಸ್ಥೆ ಇಲ್ಲದೇ ಬೆಳೆದ ಬೆಳೆ ಹೊಲದಲ್ಲಿಯೇ ಹಾಳಾಗಿತ್ತು. ಸರ್ಕಾರ ಪ್ರತಿ ಹೆಕ್ಟೇರ್‌ಗೆ 15 ಸಾವಿರ ಪರಿಹಾರದ ಘೋಷಣೆ ಮಾಡಿತ್ತು. ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಇದು ಖುಷಿ ತಂದಿತ್ತು. ಕೃಷಿ ಇಲಾಖೆಯವರು ಗ್ರಾಮ ಮಟ್ಟದಲ್ಲಿ ಅದೇ ಗ್ರಾಮದ ಯುವಕರಿಂದ ಪ್ರತಿ ಎಕರೆಗೆ . 10 ಹಣ ನೀಡಿ ಸಮೀಕ್ಷೆ ಮಾಡಸಿ ಬೆಳೆ ಆ್ಯಪ್‌ನಲ್ಲಿ ರೈತರು ಬೆಳೆದ ಬೆಳೆಯನ್ನು ನಮೂದು ಮಾಡಿಸಿದ್ದರು. ಆಯಾ ಗ್ರಾಮದ ಯುವಕರು, ರೈತರು ಬಿತ್ತನೆ ಮಾಡಿದ ಜಮೀನುಗಳಲ್ಲಿ ಸರಿಯಾಗಿ ಬೆಳೆ ಸಮೀಕ್ಷೆ ಮಾಡದೇ ಬೇರೆ ಬೇರೆ ಬೆಳೆ ನಮೂದು ಮಾಡಿದ್ದರಿಂದ ನೈಜ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ಪರಿಹಾರ ಸಿಗದೆ ತೊಂದರೆಗೆ ಸಿಲುಕಿದ್ದಾರೆ.

ದೇಶ, ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ನಿಂದಿಸಿದ ಗದಗದ ಕ್ರಿಮಿ

ಸಂತ್ರಸ್ತ ರೈತರಿಗಿಲ್ಲ ಪರಿಹಾರ:

ಬೆಳೆ ಆ್ಯಪ್‌ನಲ್ಲಿ ಸರಿಯಾಗಿ ಬೆಳೆ ಸಮೀಕ್ಷೆ ಮಾಡದ್ದರಿಂದ ತೋಟಗಾರಿಕೆ ಬಿಟ್ಟು ಬೇರೆ ಬೆಳೆ ಬೆಳೆದ ರೈತರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ನಿಜವಾಗಿ ತರಕಾರಿ ಬೆಳೆದ ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.

ತಾಲೂಕಿನ 600 ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ್ದು ಯಾದಿಯನ್ನು ಕಳುಹಿಸಿದೆ. ಆದರೆ ಈ ಯಾದಿಯಲ್ಲಿ ನಿಜವಾದ ತೋಟಗಾರಿಕಾ ಬೆಳೆಗಾರರು ಇಲ್ಲ. ಯುವಕರು ಸಮೀಕ್ಷೆಯನ್ನು ಸಹ ಸರಿಯಾಗಿ ಮಾಡಿಲ್ಲ. ಬೆಳೆಯನ್ನು ಸಹ ಸರಿಯಾಗಿ ಅಪಲೋಡ್‌ ಮಾಡಿಲ್ಲ. ಇದರಿಂದ ಸರ್ಕಾರ ಕಳುಹಿಸಿದ ಯಾದಿ ಸರಿಯಾಗಿಲ್ಲ ಎಂದು ಗೊತ್ತಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಇಲಾಖೆಗೆ ಹೊಸದಾಗಿ 391 ರೈತರು ತಾವು ತಮ್ಮ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆದಿದ್ದೇವೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನು ಸರ್ಕಾರಕ್ಕೆ ಪರಿಹಾರ ನೀಡಬೇಕೆಂದು ಕಳಿಸಿದ್ದೇವೆ ಎಂದು ತಾಲೂಕು ತೋಟಗಾರಿಕೆ ಇಲಾಖೆ ನಿರ್ದೇಶಕ ಸಂಜೀವ ಚವ್ಹಾಣ ಹೇಳಿದ್ದಾರೆ.