ಶಿವಕುಮಾರ ಕುಷ್ಟಗಿ

ಗದಗ(ಜು. 18):  ಕೊರೋನಾ ಅಬ್ಬರಕ್ಕೆ ಸಾರ್ವಜನಿಕರ ಜೀವನ ಮಾತ್ರವಲ್ಲ ಜಿಲ್ಲೆಯ ಕೃಷಿ ಚಟುವಟಿಕೆಯೂ ತತ್ತರಿಸಿ ಹೋಗಿದೆ. ನಿತ್ಯವೂ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳಿಂದ ಪರೋಕ್ಷವಾಗಿ ಕೃಷಿ ಕ್ಷೇತ್ರದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ.

ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಪ್ರಮಾಣ (ಜುಲೈ, ತಿಂಗಳಲ್ಲಿ ಮಾತ್ರ) ಉತ್ತಮವಾಗಿಯೇ ಸುರಿದಿದೆ. ಆದರೆ, ಕೊರೋನಾ ಕಂಟಕದಿಂದಾಗಿ ಕೃಷಿ ಕೂಲಿ ಕಾರ್ಮಿಕರ ಗಂಭೀರ ಸಮಸ್ಯೆಯಿಂದಾಗಿ ಸಾಮಾನ್ಯ ಕೃಷಿ ವಲಯವೂ ತತ್ತರಿಸಿದೆ. ಸರ್ಕಾರ ಕೃಷಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಉದ್ಯೋಗ ಖಾತ್ರಿ ಕೂಲಿಯನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹವೇ. ಆದರೆ, ಅದೇ ಕೂಲಿಯನ್ನು ರೈತರು ನೀಡುತ್ತೇವೆ ಎಂದರೂ ಕಾರ್ಮಿಕರ ಮಾತ್ರ ರೈತರ ಕೆಲಸ ಕಾರ್ಯಗಳಿಗೆ ಬರುತ್ತಿಲ್ಲ.

ಚಾಲಕನ ಬದುಕಿಸಲು ಉಸಿರು ಕೊಟ್ಟ 10 ಮಂದಿಗೆ ಕೊರೋನಾ!

ತತ್ತರಿಸುತ್ತಿದ್ದಾರೆ ರೈತರು:

ಕೊರೋನಾ ಸಂಕಷ್ಟದ ನೆಪದಲ್ಲಿ ಬೀಜ, ಗೊಬ್ಬರ ದರದಲ್ಲಿ ಹೆಚ್ಚಳವಾಗಿದೆ. ಆದರೆ, ಇನ್ನುಳಿದ ಆಹಾರ ಪದಾರ್ಥಗಳ ಬೆಲೆಯಲ್ಲಿ ಮಾತ್ರ ಯಾವುದೇ ಹೆಚ್ಚಳವಾಗಿಲ್ಲ. ಹಾಗಾಗಿ ರೈತರು ಹೆಚ್ಚಿನ ಹಣ ನೀಡಿ ಪ್ರಸ್ತುತ ಈರುಳ್ಳಿ, ಮೆಣಸಿನಕಾಯಿ, ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ, ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಕಾಣಿಸಿಕೊಳ್ಳುತ್ತಿರುವ ತುಂತುರು ಮಳೆಯಿಂದಾಗಿ ಹೊಲದಲ್ಲಿ ಕಸಗಳು ವ್ಯಾಪಕ ಪ್ರಮಾಣದಲ್ಲಿ ಬೆಳೆದಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕೂಲಿ ನೀಡಿದರೂ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಅತಿಯಾದ ತೇವಾಂಶದಿಂದಾಗಿ ಅವೆಲ್ಲ ಹೊಲದಲ್ಲಿಯೇ ಕೊಳೆಯುತ್ತಿವೆ. ಅವುಗಳನ್ನು ಕಿತ್ತು ತಂದು ಮಾರಾಟ ಮಾಡಲು ಕೂಡ ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ರೈತರಿಗೆ ದಿಕ್ಕೇ ತೋಚದಂತಾಗಿದೆ.

ಶೀತ ಗಾಳಿ, ಕೊರೋನಾ ಭಯ:

ಜಿಟಿ, ಜಿಟಿ ಮಳೆ, ಅದರೊಂದಿಗೆ ಬೀಸುವ ಶೀತಗಾಳಿಯಿಂದಾಗಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜನರು ಮೊದಲೇ ಕೊರೋನಾ ಭಯದಿಂದಾಗಿ ಮನೆಯಿಂದ ಆಚೆ ಬರಲು ಭಯ ಬೀಳುತ್ತಿದ್ದ ಸಂದರ್ಭದಲ್ಲಿ ಅತಿಯಾದ ಶೀತಗಾಳಿಯಲ್ಲಿ ಕೆಲಸ ಮಾಡಿದರೆ ಸಹಜವಾಗಿಯೇ ನೆಗಡಿ, ಕೆಮ್ಮ ಬರುವುದು ಸಾಮಾನ್ಯ. ಆದರೆ ಇದಕ್ಕೂ ಕೂಡಾ ಚಿಕಿತ್ಸೆ ಸಿಗುತ್ತಿಲ್ಲ, ನೆಗಡಿ, ಕೆಮ್ಮು ಕೊರೋನಾ ಲಕ್ಷಣಗಳು ಎಂದು ಹೇಳುತ್ತಿದ್ದು, ಇದು ಕೂಡಾ ಗ್ರಾಮೀಣ ಜನರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿ ಕೃಷಿ ಕ್ಷೇತ್ರವೂ ಪರೋಕ್ಷವಾಗಿ ಕೊರೋನಾ ಹೊಡೆತಕ್ಕೆ ನಲುಗುತ್ತಿದೆ.

ಮಳೆ ವಿವರ:

ಗದಗ ಜಿಲ್ಲೆಯಲ್ಲಿ ವಾರ್ಷಿಕ ಮಳೆಯ ಪ್ರಮಾಣ 656 ಮಿ.ಮೀ. ಆಗಬೇಕು, ಇದುವರಿಗೆ 225 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 228 ಮಿ.ಮೀ. ಮಳೆಯಾಗಿದ್ದು, ಶೇ. 01 ಹೆಚ್ಚುವರಿ ಮಳೆಯಾಗಿದೆ. ಜೂನ್‌ ತಿಂಗಳಲ್ಲಿ ಶೇ. 32 ರಷ್ಟು ಮಳೆ ಕೊರತೆಯಾಗಿತ್ತು. ಅದು ಜುಲೈನಲ್ಲಿ ಹೆಚ್ಚುವರಿ ಮಳೆ ಮೂಲಕ ಸರಿಯಾಗಿದೆ. ಜು. 15ರ ವರೆಗೆ 31 ಮಿ.ಮೀ. ಮಳೆ ವಾಡಿಕೆಗೆ 51 ಮಿ.ಮೀ. ಅಂದರೆ ಶೇ. 63 ರಷ್ಟು ಹೆಚ್ಚು ಮಳೆಯಾಗಿದ್ದು, ಹೆಚ್ಚಿನ ಮಳೆಯಿಂದಾಗಿ ಹೆಸರು ಬೆಳೆಗಳಿಗೆ ತೀವ್ರ ಹಾನಿಯಾಗುತ್ತಿದೆ.

ತಾಲೂಕುವಾರು ಮಳೆಯ ಪರಿಸ್ಥಿತಿ:

ಗದಗ: ವಾರ್ಷಿಕ ಸರಾಸರಿ ಮಳೆ ಪ್ರಮಾಣ: 671 ಮಿ.ಮೀ. ಜುಲೈ 15ರ ವರೆಗೆ 247 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 258 ಮಿ.ಮೀ. ಅಂದರೆ ಶೇ. 4ರಷ್ಟು ಹೆಚ್ಚುವರಿ ಮಳೆಯಾಗಿದೆ. 
ಮುಂಡರಗಿ: ವಾರ್ಷಿಕ ಮಳೆಯ ಪ್ರಮಾಣ 581 ಮಿ.ಮೀ. ಜುಲೈ 15ರ ವರೆಗೆ 198 ಮಿ.ಮೀ. ವಾಡಿಕೆ ಮಳೆ, ಆದರೆ 172 ಮಿ.ಮೀ. ಮಳೆ ಬಂದು, ಶೇ. 13ರಷ್ಟು ಕಡಿಮೆ ಮಳೆಯಾಗಿದೆ. 
ನರಗುಂದ: ವಾರ್ಷಿಕ ಸರಾಸರಿ ಮಳೆ ಪ್ರಮಾಣ 632 ಮಿ.ಮೀ., ಜು. 15ರ ವರೆಗೆ 205 ಮಿ.ಮೀ. ವಾಡಿಕೆ ಮಳೆಯಾಗಿದೆ. ಆದರೆ, 225 ಮಿ.ಮೀ. ಅಂದರೆ ಶೇ. 10ರಷ್ಟು ಮಳೆ ಹೆಚ್ಚಾಗಿದೆ. 
ರೋಣ: ವಾರ್ಷಿಕ ಸರಾಸರಿ ಮಳೆ ಪ್ರಮಾಣ 666 ಮಿ.ಮೀ. ಜು. 15ರ ವರೆಗೆ 236 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 256 ಅಂದರೆ ಶೇ. 9ರಷ್ಟುಹೆಚ್ಚಿಗೆ ಮಳೆಯಾಗಿದೆ. 
ಶಿರಹಟ್ಟಿ: ವಾರ್ಷಿಕ ಸರಾಸರಿ ಮಳೆ ಪ್ರಮಾಣ 701 ಮಿ.ಮೀ., ಜುಲೈ 15ರ ವರೆಗೆ 254 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 205 ಮಿ.ಮೀ. ಆಗಿದೆ. ಅಂದರೆ ಶೇ. 19ರಷ್ಟು ಕಡಿಮೆ ಮಳೆಯಾಗಿದೆ.