* ಭೀಕರ ಬಿಸಿಲಿಗೆ ತತ್ತರಿಸಿ ಹೊಲ-ಗದ್ದೆಗಳ ಕಡೆ ಮುಖ ಮಾಡಿದ ವನ್ಯಜೀವಿಗಳು* ಆಹಾರ, ನೀರು ಅರಸಿ ಹೊಲ-ಗದ್ದೆಗಳ ಕಡೆಗೆ ವನ್ಯಜೀವಿಗಳ ಸಮೂಹ* ವನ್ಯಜೀವಿಗಳ ದಾಳಿಯಿಂದ ಹಣ್ಣು- ತರಕಾರಿ ಬೆಳೆದ ರೈತ ಕಂಗಾಲು
ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್
ಬೀದರ್(ಮೇ.04): ಗಡಿ ಜಿಲ್ಲೆ ಬೀದರ್(Bidar) ಅಂದ್ರೆ ಮೊದಲಿಗೆ ನೆನಪಾಗೋದು ಬರ, ಬರ ಅಂದ್ರೆ ರೈತರ ಕಷ್ಟ ಕೇಳೋದೇ ಬೇಡ. ಸತತ ಬರದಿಂದ ರೈತರು ತತ್ತರಿಸಿ ಹೋಗಿದ್ದರೇ ಮತ್ತೊಂದೆಡೆ ಕಳೆದ ವರ್ಷದ ಅತಿವೃಷ್ಟಿಯ ಹೊಡೆತ ತಿಂದು ಕಂಗಾಲಾಗಿ ಹೋಗಿದ್ದಾರೆ. ವರುಣನ ಆರ್ಭಟದಿಂದ ಈ ಬಾರಿ ಜಿಲ್ಲೆಯಲ್ಲಿ ಅಂತರಜಲ ಮಟ್ಟ ಕುಸಿದಿಲ್ಲ. ಭೂಮಿಯಲ್ಲೂ ಭರಪೂರಾಗಿ ನೀರು ಸಿಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಾವಿ- ಬೋರ್‌ವೆಲ್‌ಗಳ ವ್ಯವಸ್ಥೆ ಇರುವ ರೈತರು ಬಿರು ಬಿಸಿಲಿನಲ್ಲೂ ತಮ್ಮ ಹೊಲ-ಗದ್ದೆಗಳಲ್ಲಿ ಹಣ್ಣು- ತರಕಾರಿ ಬೆಳೆಗಳನ್ನ ಬೆಳೆಸಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಮತ್ತೊಂದು ಕಂಠಕ ಎದುರಾಗಿದೆ.

ಹೌದು, ಭೀಕರ ಬಿಸಿಲಿಗೆ(Summer) ತತ್ತರಿಸಿ ಹೋಗುತ್ತಿರುವ ವನ್ಯಜೀವಿಗಳು(Wild Animals) ಆಹಾರ, ನೀರು ಅರಸಿ ರೈತರ(Farmers) ಹೊಲ(Land) ಗದ್ದೆಗಳ ಕಡೆ ಮುಖ ಮಾಡಿವೆ. ಹೀಗೆ ಹೊಲಗಳಿಗೆ ಬರುವ ಜಿಂಕೆ, ಕೃಷ್ಣ ಮೃಗ, ಕಾಡು ಹಂದಿ, ನವಿಲು, ಮೊಲ, ನರಿ ಸೇರಿದಂತೆ ಇತ್ಯಾದಿ ವನ್ಯಪ್ರಾಣಿಗಳು ರೈತರು ಕಷ್ಟಪಟ್ಟು ಬೆಳೆಸಿದ್ದ ಬೆಳೆ ಹಾಳು ಮಾಡುತ್ತಿವೆ.
ಬೀದರ್‌ನಲ್ಲಿ ಅನ್ನಭಾಗ್ಯಕ್ಕೆ ಕನ್ನ, ಮಹಾರಾಷ್ಟ್ರ, ಗುಜರಾತ್‌ಗೆ ಸಪ್ಲೈ, ಅಧಿಕಾರಿಗಳು ಗಪ್‌ಚುಪ್
ಹೊಲದಲ್ಲಿ ಬೆಳೆದ ಕುಂಬಳ ಕಾಯಿ, ಕಲ್ಲಂಗಡಿ, ಕಬ್ಬು, ತರಕಾರಿ ಸೇರಿದಂತೆ ಹಲವು ಬೆಳೆಗಳು(Crop) ಬೆಳೆಸಿದ್ದ ಹೊಲಗಳಿಗೆ ನುಗ್ಗುವ ವನ್ಯಜೀವಿಗಳು ಹಣ್ಣು- ಕಾಯಿಗಳನ್ನ ಅರ್ಧಂಬರ್ಧ ತಿಂದು, ಬೆಳೆ ಹಾನಿ ಮಾಡುವ ಮೂಲಕ ರೈತರಿಗೆ ತಲೆ ನೋವಾಗಿ ಪರಣಿಮಿಸಿವೆ. ಬೀದರ್ ಜಿಲ್ಲೆಯ ಔರಾದ್ನ ಕಮಲನಗರ, ಸಂತಪೂರ, ಜನವಾಡ ಸೇರಿದಂತೆ ಭಾಲ್ಕಿ ತಾಲೂಕಿನ ಮೆಹಕರ್, ಸಾಯಗಾಂವ್, ಬಾಳೂರ ಸೇರಿದಂತೆ ಹಲವೆಡೆ ಲಕ್ಷಾಂತರ ರೂ. ಖರ್ಚು ಮಾಡಿ ಬಿರು ಬಿಸಿಲು ಲೆಕ್ಕಿಸದೇ ಕಷ್ಟುಪಟ್ಟು ಬೆಳೆದ ಬೆಳೆ ವನ್ಯಜೀವಿಗಳ ದಾಳಿಗೆ ಹಾನಿಯಾಗುತ್ತಿವೆ.
ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ವಿಫಲ
ಬೀದರ್ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಅರಣ್ಯ(Forest) ಪ್ರದೇಶ ಹೊಂದಿರುವ ಜಿಲ್ಲೆಯಾಗಿದೆ. ಇದರಲ್ಲಿ ಹೆಚ್ಚಾಗಿ ಬಯಲು ಪ್ರದೇಶ ಕಂಡು ಬರುತ್ತದೆ. ಸಾಮಾನ್ಯವಾಗಿ ಬಯಲು ಪ್ರದೇಶದಲ್ಲಿ ವಾಸ ಮಾಡುವ ವನ್ಯಜೀವಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಕಂಡು ಬರುತ್ತವೆ. ಹೊಲ-ಗದ್ದೆ, ಬಯಲು ಪ್ರದೇಶ, ಗೋಮಾಳ ಜಾಗ ಹೀಗೆ ಎಲ್ಲಿ ಹೋದರೂ ಸಾಮಾನ್ಯವಾಗಿ ಜಿಂಕೆ, ಕೃಷ್ಣಮೃಗ, ನವಿಲು, ಮೊಲಗಳು ಕಂಡು ಬರುತ್ತವೆ. ಇಂತಹ ಅಮೂಲ್ಯವಾದ ಪ್ರಾಣಿಗಳನ್ನ ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ(Department of Forest) ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಭೀಕರ ಬೇಸಿಗೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವನ್ಯಜೀವಿಗಳ ಪ್ರದೇಶಗಳಲ್ಲಿ ಆಹಾರ ನೀರಿನ ವ್ಯವಸ್ಥೆ ಕಲ್ಪಿಸದೇ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹೊಸದೇನಲ್ಲ ಹಲವು ವರ್ಷಗಳಿಂದ ರೈತರು ಮತ್ತು ವನ್ಯಜೀವಿಗಳ ಮಧ್ಯ ಸಂಘರ್ಷ ನಡೆಯುತ್ತಲೇ ಇದೆ. ಸಾಕಷ್ಟು ಬಾರಿ ರೈತರು ಇದರ ಬಗ್ಗೆ ಮನವಿ ಕೊಟ್ಟಿದ್ದಾರೆ. ಇನ್ನು ಕೆಲ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ತಂತಿಯ ಬೇಲಿ ಹಾಕಿ ಇಡುತ್ತಾರೆ ಇದರಿಂದ ಹಲವು ವನ್ಯಜೀವಿಗಳಿಗೆ ಸಾವು ನೋವುಗಳು ಸಂಭವಿಸಿವೆ. ಆದರೆ ಏನೇ ಆದರೂ ಇಲ್ಲಿವರೆಗೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಅರಣ್ಯ ಇಲಾಖೆ ಅಧಿಕಾರಿಗಳ ದುರ್ವತನೆಯಿಂದ ರೈತರು ಬೇಸತ್ತು ಹೋಗಿದ್ದಾರೆ.

ಇಡೀ ಗ್ರಾಮದ ಜನ ಮೂಗು ಮುಚ್ಕೊಂಡೇ ಊರು ತಿರುಗ್ತಾರೆ!
ವನ್ಯಜೀವಿಗಳಿಗೆ ಹಾನಿ ಉಂಟು ಮಾಡಿದ್ರೆ ಬೀಳುತ್ತೆ ಕೇಸ್
ಒಂದು ಕಡೆ ಆಹಾರ ಅರಸಿ ಬರುವ ವನ್ಯಜೀವಿಗಳ ಕಾಟ ತಾಳಲಾರದೇ ರೈತ ಕಂಗಾಲಾಗಿ ಹೋಗಿದ್ದರೇ ಮತ್ತೊಂದು ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇದರ ಮಧ್ಯ ವನ್ಯಜೀವಿಗಳಾದ ಕೃಷ್ಣಮೃಗ, ಜಿಂಕೆ, ನವಿಲ ಇಂತಹ ಅಮೂಲ್ಯವಾದ ಪ್ರಾಣಿಗಳಿಗೆ ಹಾನಿ ಉಂಟು ಮಾಡಿದ್ದರೇ ಇದೇ ಅಧಿಕಾರಿಗಳು ರೈತರ ಮೇಲೆ ಪ್ರಕರಣ ದಾಖಲಿಸಿ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಾರೆ. ಇದರಿಂದ ದಯವಿಟ್ಟು ನಮಗೆ ಈ ಸಂಷ್ಟದಿಂದ ದೂರು ಮಾಡಬೇಕೆಂದು ಜಿಲ್ಲೆಯ ಹಲವು ರೈತರ ಕಳಕಳಿಯ ಮನವಿಯಾಗಿದೆ.
ಒಟ್ಟಿನಲ್ಲಿ ಸರ್ಕಾರಿ ಸಂಬಳ ಪಡೆದು, ಲಂಚಕ್ಕೆ ಬಾಯತೆರೆದು ನುಂಗಿ ನೀರು ಕುಡಿದು ಐಷಾರಾಮಿ ಜೀವನ ನಡೆಸುತ್ತಿರುವ ಅಧಿಕಾರಿಗಳು ಈಗಲಾದರೂ ರೈತರು, ವನ್ಯಜೀವಿಗಳ ಸಂಘರ್ಷಕ್ಕೆ ಅಂತ್ಯ ಹಾಡುತ್ತಾರಾ ಕಾದು ನೋಡಬೇಕಾಗಿದೆ.
