ತಾಂಬಾ:(ಸೆ.23) ಒಂದೆಡೆ ಮಳೆ ಅಬ್ಬರಕ್ಕೆ ಗ್ರಾಮಗಳ ಜನರು ಅಂಜಿ ಕಣ್ಣೀರು ಹಾಕುತ್ತ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿದ್ದರೆ, ಮತ್ತೊಂದೆಡೆ ವರುಣ ಮುನಿಸಿನಿಂದ ಜನ, ಜಾನುವಾರು ಹೈರಾಣಾಗಿ ಮೇವಿಲ್ಲದೆ ಜಾನು​ವಾ​ರು​ಗಳು ಮರಗುತ್ತಿವೆ.


ಹೌದು, ಈ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿರೋದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ. ಮಳೆಗಾಲ ಪ್ರಾರಂಭವಾಗಿ ಮೂರು ತಿಂಗಳಾದರೂ ಸಮರ್ಪಕ ಮಳೆಯಾಗದೆ ಬಿತ್ತನೆಗೂ ಅವಕಾಶ ಇಲ್ಲ. ಜೀವನ ಕಷ್ಟವಾಗಿದೆ, ಮಳೆ ನಂಬಿ ಬಿತ್ತಿದ ಜಮೀನಿನಲ್ಲಿನ ಬೆಳೆ ನೆಲ ಬಿಟ್ಟು ಮೇಲೇಳದಂತಾಗಿದೆ. ಬರಗಾಲ ಪೀಡಿತ ಪ್ರದೇಶವೆಂಬ ಹಣೆ ಪಟ್ಟಿಯನ್ನು ಮತ್ತೊಮ್ಮೆ ಬಿಗಿ​ದ​ಪ್ಪಿ​ಕೊ​ಳ್ಳು​ತ್ತಿದೆ.

ತಾಂಬಾ ಗ್ರಾಮದಲ್ಲಿ ಮಕ್ಕೆಜೋಳ, ತೊಗರಿ ಬಿತ್ತನೆ ಆಗಿದ್ದು ಮಳೆ ಇಲ್ಲದೆ ಬೆಳೆ ಬಾಡಿ ನೆಲಕ್ಕೆ ಒರಗಿವೆ. ನೀರಾವರಿ ಮಾಡಬೇಕು ಎಂದರೆ ಕೃಷ್ಣಾ, ಭೀಮಾ ನದಿ ದೂರದಲ್ಲಿವೆ. ಇಂಡಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ತಾಂಬಾ ಗ್ರಾಮ​ದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಕಾಲುವೆ ನಿರ್ಮಿಸು​ವಾಗ 53 ದಿನಗಳ ವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾ​ಗಿತ್ತು. ಈಗ ನೀರಿಗಾಗಿ ಹೋರಾಟ ನಡೆದಿದೆ. ಪಕ್ಷಾತೀ​ತ​ವಾಗಿ ಶಾಸಕ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ಸಿಂದಗಿ ಶಾಸಕ ಎಂ.ಸಿ. ಮನಗೂಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ವಿಧಾನ ಪರಿಷತ್‌ ಸದಸ್ಯ ಅರುಣ ಶಾಹಾಪುರ ಅವರು ಆಗಮಿಸಿ ಹೋರಾಟ ಕೊನೆ​ಗೊ​ಳಿ​ಸಿ​ದ್ದರು. ತಾಂಬಾ ಹಳ್ಳಕ್ಕೆ ಕೇವಲ 10 ದಿನಗಳಲ್ಲಿ ನೀರು ಹರಿಸಲಾಗುವುದು ಎಂಬ ಭರ​ವಸೆಯಿಂದ ಹೋರಾಟ ಕೈಬಿಡಲಾಗಿತ್ತು. ಆದರೆ ಇಲ್ಲಿಯವರೆಗೆ ನೀರು ಬಂದಿಲ್ಲ ಎಂದರು. ಈಗ ಮಳೆಯೇ ರೈತರ ಗತಿಯಾಗಿದೆ.

ಬಿತ್ತಿದ ಬೀಜ ಕಮರಿವೆ:

ಮಳೆ ನಂಬಿ ರೈತರು ಈಗಾಗಲೇ ಹೆಸರು ತೊಗರಿ, ಮಕ್ಕೆಜೋಳ ಬಿತ್ತಿದ್ದಾರೆ. 20 ವರ್ಷದಿಂದ ಜೋಪಾನ ಮಾಡಿದ ನಿಂಬೆಗಿಡ, ದಾಳಿಂಬೆ, ದ್ರಾಕ್ಷಿ, ಬಾರೆಗಿಡಗಳು ಒಣಗಿವೆ. ಕೆಲ ರೈತರು ಟ್ಯಾಂಕರ್‌ ನೀರು ಬಳಸಿ ಗಿಡಗಳನ್ನು ಉಳಿಸಿ ಕೊಂಡಿದ್ದಾರೆ. ಈಗ ಹಣವೂ ಹೋಯಿತು ಬೆಳೆಯೂ ಹೋಯಿತು, ಎನ್ನುವ ಸ್ಥಿತಿ ಬಂದಿದೆ.

ಕೆಲ ಪ್ರದೇಶದಲ್ಲಿ ಚಿಗುರೊಡೆದ ಬೆಳೆ ಮಳೆಯಿಲ್ಲದೆ ಒಣಗುವಂತಾಗಿದೆ. ಇದು ಬಿತ್ತನೆ ಮಾಡಿದ ರೈತರ ಗೋಳಾದರೆ ಇನ್ನು ಬಹುಭಾಗ ಬಿತ್ತನೆ ಮಾಡದೆ ತಾವು ಖರೀದಿ​ಸಿದ ಬೀಜ, ರಸಗೊಬ್ಬರ ಮನೆಯ ಮೂಲೆಯಲ್ಲಿ ಬಿದ್ದಿ​ವೆ.

ಮೋಡ​ಗಳತ್ತ ರೈತರ ಮುಖ


ಈ ಭಾಗ ಸುಮಾರು 32,996 ಹೆಕ್ಟೇರ್‌ ಕೃಷಿ ಕ್ಷೇತ್ರ ಹೊಂದಿದ್ದು ಅದರಲ್ಲಿ ಸುಮಾರು 30,798 ಹೆಕ್ಟೇರ್‌ ಪ್ರದೇಶ ಕೃಷಿಗೆ ಯೋಗ್ಯವಾಗಿದೆ. ಸುಮಾರು 16,542.50 ಹೆಕ್ಟೇರ್‌ ಮುಂಗಾರು ಮಳೆಯಾಧಾರಿತವಾದರೆ ಸುಮಾರು 14255.52 ಹೆಕ್ಟೇರ್‌ ಹಿಂಗಾರಿ ಕ್ಷೇತ್ರ ಹಾಗೂ 1652.80 ಹೆಕ್ಟೇರ್‌ ಬೇಸಿಗೆ ಕ್ಷೇತ್ರ​ವಾ​ಗಿದೆ. ಇನ್ನು ಮಳೆಗೆ ಸಂಬಂಧಿಸಿದಂತೆ ತಾಂಬಾ ಭಾಗದಲ್ಲಿ 50 ಮಿಮೀ ಮಳೆಯಾಗಿದೆ. ಇನ್ನು ಅನೇಕ ಗ್ರಾಮದಲ್ಲಿ ಒಂದು ಹನಿ ಮಳೆಯಾಗದೆ ಮೋಡಗಳು ಚದುರಿ ಹೋಗುತ್ತಿವೆ.

ಈ ಬಗ್ಗೆ ಮಾತನಾಡಿದ ತಾಂಬಾದ ಪ್ರಗತಿಪರ ರೈತ ಭೀರಪ್ಪ ವಗ್ಗಿ ಅವರು, ಈ ವರ್ಷವೂ ಸಕಾಲಕ್ಕೆ ಮಳೆಯಾಗದಿದ್ದರೆ ಈ ಭಾಗದ ರೈತರು ವಿಷ ಕುಡಿದು ಸಾಯುವು​ದ​ರಲ್ಲಿ ಅನುಮಾ​ನ​ವಿಲ್ಲ. ಈಗಾಗಲೇ ಗ್ರಾಮದಲ್ಲಿ ನಿಂಬೆ ಬೆಳೆಗಾರರು ನೀರು ಖರೀದಿಸಿ ಗಿಡಗಳನ್ನು ಉಳಿಸುವ ಕಾರ್ಯ ಮಾಡುತ್ತಿ​ದ್ದಾರೆ. ಈಗ ನಾವು ಸೋತು ಹೋಗಿದ್ದೇವೆ. ಇಂಡಿ ಗುತ್ತಿ ಬಸವಣ್ಣ ಯೋಜನೆಯ ಕಾಲು​ವೆ​ಯಿಂದ ನೀರು ಹರಿಸಿದರೆ ಈ ಭಾಗದ ರೈತ ಸಮುದಾಯಕ್ಕೆ ಸಹಾ​ಯ​ವಾ​ಗ​ಬ​ಹುದು ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಲವೂ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ತಾಲೂಕಿನಲ್ಲಿ ಕುಡಿಯಲು ನೀರಿನ ತೊಂದರೆಯಿದೆ. ತಾಂಬಾ ಗ್ರಾಮದ ರೈತರು ನೀರಿಗಾಗಿ ಹೋರಾಟ ಹಮ್ಮಿಕೊಂಡಿದ್ದಾರೆ. ಅವರ ಧ್ವನಿ​ಯಾಗಿ ಕೆಲಸ ಮಾಡುತ್ತಿದ್ದೇವೆ. ಕಾಲುವೆಗೆ ಶೀಘ್ರ ನೀರು ಹರಿಸುವ ಕಾರ್ಯ ಮಾಡಲಾಗುವುದು ಎಂದು ಇಂಡಿ ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರು ತಿಳಿಸಿದರು.