Karnataka Rains: ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತರು
ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮಳೆ ಹೀಗೆ ಮುಂದುವರಿದರೆ ನೂರಾರು ಎಕರೆ ಬೆಳೆ ನಾಶವಾಗಲಿದೆ ಎನ್ನುವ ಆತಂಕ ರೈತರದ್ದಾಗಿದೆ.
ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಕಂಪ್ಲಿ(ಸೆ.14): ಕಳೆದ ಹಲವು ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ತಾಲೂಕಿನ ವಿವಿಧ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಹಳ್ಳದ ಬದಿಯಲ್ಲಿನ ಜಮೀನುಗಳಲ್ಲಿನ ಸಸಿಗಳು ಹಾಗೂ ಯಂತ್ರಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹದಿಂದಾಗಿ ತಾಲೂಕಿನ ಇಟಿಗಿ, ನೆಲ್ಲುಡಿ, ದೇವಲಾಪುರ, ಸೋಮಲಾಪುರ, ಜವುಕು, ಗೋನಾಳ್, ಎಮ್ಮಿಗನೂರು, ಕಣವಿ ತಿಮ್ಮಲಾಪುರ ಗ್ರಾಮಗಳ ರೈತರ ಪಟ್ಟಾಜಮೀನುಗಳು ಸುಮಾರು 280 ಹೆಕ್ಟೇರ್‌ಗಳಷ್ಟು ಜಲಾವೃತಗೊಂಡಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮಳೆ ಹೀಗೆ ಮುಂದುವರಿದರೆ ನೂರಾರು ಎಕರೆ ಬೆಳೆ ನಾಶವಾಗಲಿದೆ ಎನ್ನುವ ಆತಂಕ ರೈತರದ್ದಾಗಿದೆ.
ಸಂಪೂರ್ಣ ಬೆಳೆ ನಾಶ:
ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದಲ್ಲಿ ಸುಮಾರು 30 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆಯಲಾಗಿದ್ದು, ವರುಣನ ಆರ್ಭಟಕ್ಕೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಬಾಗಲಕೋಟೆಯಿಂದ ಬೀಜವನ್ನು ತಂದು ಬಿತ್ತನೆ ಮಾಡಲಾಗಿತ್ತು. ಬೀಜ, ರಸಗೊಬ್ಬರ, ರಾಸಾಯನಿಕ ಸಿಂಪಡಣೆ, ಕೃಷಿ ಕಾರ್ಮಿಕರ ವೆಚ್ಚ ಸೇರಿದಂತೆ ಒಟ್ಟಾರೆ ಎಕರೆಗೆ 15 ಸಾವಿರ ಹಣವನ್ನು ಖರ್ಚು ಮಾಡಲಾಗಿದ್ದು, 30 ಎಕರೆಗೆ 3.50 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿತ್ತು. ಇನ್ನೇನು ಒಂದು ತಿಂಗಳಲ್ಲಿ ಬೆಳೆ ಕೈಗೆ ಬರುತ್ತಿತ್ತು ಅನ್ನುವಷ್ಟರಲ್ಲಿ ಮಳೆ ಹೆಚ್ಚಾಗಿದ್ದು, ಗಿಡಗಳೆಲ್ಲ ಬಿಳಿ ಬಣ್ಣಕ್ಕೆ ತಿರುಗಿವೆ. ಇದರಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆæ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ರೈತ ಪಿ.ಶೇಖರ್.
Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ
ಕಳೆದ 15 ದಿನಗಳ ಹಿಂದಷ್ಟೇ ತಾಲೂಕಿನ ಶ್ರೀರಾಮರಂಗಾಪುರ ಸೇರಿದಂತೆ ಇತರೆಡೆ ನೂರಾರು ಎಕರೆ ಮೆಣಸಿನಕಾಯಿ ಬೆಳೆಯಲಾಗಿದ್ದು, ಮಳೆಯಿಂದಾಗಿ ಬೇರುಕೊಳೆಯುವ ರೋಗ ಕಾಣಿಸಿಕೊಳ್ಳುತ್ತಿದೆ. ಇನ್ನು ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಸುರಿಯುತ್ತಿದೆ. ಬಿಸಿಲು ಬಾರದೇ ಮಳೆ ಹೀಗೆ ಮುಂದುವರಿದರೆ ಬೇರು ಕೊಳೆತು ಮೆಣಸಿನಕಾಯಿ ಗಿಡಗಳು ಶಕ್ತಿ ಕಳೆದುಕೊಂಡು ನಷ್ಟವಾಗಲಿವೆ. ಕೆಲವೆಡೆ ಬಾಳೆ ತಂಪಾಗಿದ್ದು, ಬೆಳೆ ಕೆಂಪು ಬಣ್ಣಕ್ಕೆ ತಿರುಗಿ ಇಳುವರಿ ಕಳೆದುಕೊಂಡು ನಷ್ಟಕ್ಕೀಡಾಗಲಿದೆ ಎಂಬ ಆತಂಕ ಅನ್ನದಾತರದ್ದಾಗಿದೆ.
ಪ್ರವಾಹಕ್ಕೆ ಕಿತ್ತು ಹೋದ ಸೇತುವೆ
ತಾಲೂಕಿನ ಚಿಕ್ಕಜಾಯಿಗನೂರು ಹಾಗೂ ಬಳ್ಳಾಪುರ ಗ್ರಾಮಗಳ ಮಧ್ಯೆ ನಾರಿಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಹಳ್ಳದ ನೀರಿನ ರಭಸಕ್ಕೆ ಕಿತ್ತುಹೋಗಿದ್ದು, ಸೇತುವೆ ಮೇಲಿನ ಸಂಚಾರಕ್ಕೆ ಸಮಸ್ಯೆಯಾಗಿದೆ. ಚಿಕ್ಕಜಾಯಿಗನೂರು ಹಾಗೂ ಬಳ್ಳಾಪುರ ಗ್ರಾಮದ ರೈತರು ಹೊಲಗದ್ದೆಗಳಿಗೆ ಕೃಷಿ ಚಟುವಟಿಕೆಗೆ ತೆರಳಲು ಸಮಸ್ಯೆಯಾಗಿದೆ. ಕಿತ್ತುಹೋದ ಸೇತುವೆ ಮೇಲೆಯೆ ಸದ್ಯ ದ್ವಿಚಕ್ರವಾಹನಗಳಷ್ಟೇ ಸಂಚರಿಸುತ್ತಿವೆ. ಈ ಕುರಿತು ಸಂಬಂಧ ಪಟ್ಟಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೇತುವೆಯನ್ನು ಎತ್ತರಿಸಿ ಅಭಿವೃದ್ಧಿ ಪಡಿಸಿ ಚಿಕ್ಕಜಾಯಿಗನೂರು, ಬಳ್ಳಾಪುರ ಸೇರಿದಂತೆ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮುಖಂಡರಾದ ಬಿ.ಮಾರೆಪ್ಪ, ಆನಂದ್ ರೆಡ್ಡಿ, ವಿ.ಗೋವಿಂದರಾಜ್, ಟಿ.ವೀರೇಶ್, ಜೆ.ಕಾಟಂರಾಜು, ಉಪ್ಪಾರ ಫಕೀರಪ್ಪ, ಜಿ.ಪಂಪನಗೌಡ, ವಿ.ಹನುಮಂತಪ್ಪ, ನಾಗಲಿಂಗ ಒತ್ತಾಯಿಸಿದ್ದಾರೆ.
61 ಮನೆಗಳು ಭಾಗಶಃ ಕುಸಿತ:
ವಿಪರೀತ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಢೆ ಸೇರಿ ಒಟ್ಟಾರೆ 61 ಮನೆಗಳು ಭಾಗಶಃ ಕುಸಿದಿವೆ. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಆಶಾಕಾರ್ಯಕರ್ತೆ ಸ್ಥಳದಲ್ಲೇ ಮೃತಪಟ್ಟಿದ್ದು ಸರ್ಕಾರದಿಂದ ಕುಟುಂಬಸ್ಥರಿಗೆ .5 ಲಕ್ಷ ಪರಿಹಾರ ಸಹ ನೀಡಲಾಗಿದೆ. ಇನ್ನು ವಿವಿಧೆಡೆ ಮಳೆಗೆ ಕುಸಿದಿರುವ ಮನೆಗಳ ಬಳಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಳೆ ಹಾನಿ; ರೈತರಿಗೆ .1.38 ಕೋಟಿ ಪರಿಹಾರ - ಸಚಿವೆ ಶಶಿಕಲಾ ಜೊಲ್ಲೆ
ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು, ಕೂಲಿ ಕಾರ್ಮಿಕರ ಹಲವು ಮನೆಗಳು ಮಳೆಗೆ ಕುಸಿದು ಬಿದ್ದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದು ಮಳೆಗೆ ಹಾನಿಯಾದ ಎಲ್ಲ ಮನೆಗಳಿಗೂ ಸೂಕ್ತ ಪರಿಹಾರವನ್ನು ಒದಗಿಸಬೇಕು. ಇದರಿಂದಾಗಿ ಬಡ ಕುಟುಂಬಗಳಿಗೆ ಸ್ವಲ್ಪ ನೆರವಾಗಲಿದೆ ಅಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಹೇಳಿದ್ದಾರೆ.
ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟಾರೆ 61 ಮನೆಗಳು ಕುಸಿದಿವೆ. 280 ಹೆಕ್ಟೇರ್ ಜಮೀನು ಜಲಾವೃತಗೊಂಡಿದ್ದು, ಈ ಕುರಿತು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಮುಗಿದ ಬಳಿಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸುವ ಕಾರ್ಯಕೈಗೊಳ್ಳಲಾಗುವುದು ಅಂತ ತಹಸೀಲ್ದಾರ್ ಗೌಸಿಯಾ ಬೇಗಂ ತಿಳಿಸಿದ್ದಾರೆ.