Asianet Suvarna News Asianet Suvarna News

Yadgir: ಪರಿಹಾರ ಕೊಟ್ಟು ಪುಣ್ಯಾ ಕಟ್ಟಿಕೊಳ್ರಿ, ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ರೈತರ ಅಳಲು

ಸತತ ಮಳೆಯಿಂದಾಗಿ ಹೊಲದಲ್ಲೆಲ್ಲ ನೀರು ನಿಂತು, ಕೆರೆಯಂಗಳ ಆದಂತಾಗಿದೆ. ಬೆಳೆ ಎಲ್ಲ ಹಾಳಾಗಿದೆ ಎಂದು ಅಧಿಕಾರಿಗಳೆದುರು ಗೋಳು ತೋಡಿಕೊಂಡ ಗೋಗಿ (ಕೆ) ಗ್ರಾಮದ ರೈತ ಸಿದ್ರಾಮಪ್ಪ

Farmers Faces Problems Due to Heavy Rain in Yadgir grg
Author
First Published Sep 10, 2022, 9:10 PM IST

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಸೆ.10): ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯಂಗಳದಂತಾಗಿರುವ ಹೊಲಗಳಲ್ಲಿನ ಬೆಳೆಗಳು ಹಾಳಾಗಿ ಹೋದವು. ಪರಿಹಾರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ, ಶುಕ್ರವಾರ ಹಾನಿ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸರ್ಕಾರದ ನೆರೆ ಅಧ್ಯಯನ ತಂಡಕ್ಕೆ ಶಹಾಪುರ ರೈತರು ತೋಡಿಕೊಂಡ ಅಳಲು ಪರಿ​ಯಿದು.

13 ಎಕರೆ ಹೊಲದಾಗ ಹತ್ತಿ ಬಿತ್ತಿದ್ದೆವು. ಭೂಮಿತಾಯಿ ನಂಬಿ ಬೇರೆಯವರ ತಾವ ಕೈಗಡ ಸಾಲ ಮಾಡಿ ಬೀಜ ಗೊಬ್ಬರ ಎಣ್ಣಿ (ಕ್ರಿಮಿನಾಶಕ ಔಷಧಿ) ಹಾಕಿದ್ದಿವಿ. ಸತತ ಮಳೆಯಿಂದಾಗಿ ಹೊಲದಲ್ಲೆಲ್ಲ ನೀರು ನಿಂತು, ಕೆರೆಯಂಗಳ ಆದಂತಾಗಿದೆ. ಬೆಳೆ ಎಲ್ಲ ಹಾಳಾಗಿದೆ ಎಂದು ಅಧಿಕಾರಿಗಳೆದುರು ಗೋಳು ತೋಡಿಕೊಂಡ ಗೋಗಿ (ಕೆ) ಗ್ರಾಮದ ರೈತ ಸಿದ್ರಾಮಪ್ಪ, ಎಕರೆಗೆ 10 ರಿಂದ 12 ಸಾವಿರ ರು.ಗಳ ಖರ್ಚು ಮಾಡಿದ್ದೀವಿ. ಎಲ್ಲವನ್ನೂ ಕಳೆದುಕೊಂಡ ನಮ್ಮ ಗೋಳು ಆಲಿಸಲು ದೂರದಿಂದ ಬಂದಿರುವ ನೀವು ಪರಿಹಾರ ಕೊಡಿಸಿದರ ಪುಣ್ಯ ಬರ್ತದ ಎಂದು ಕೈಮುಗಿದು ನೋವು ತೋಡಿಕೊಂಡರು.

YADAGIRI : ಶವಾಗಾರವಿಲ್ಲದ ಬಗ್ಗೆ BIG 3 ವರದಿಯಲ್ಲಿ ಪ್ರಶ್ನಿಸಿದ್ದಕ್ಕೆ ಶಾಸಕರ ಚೇಲಾಗಳಿಂದ ಧಮ್ಕಿ!

ಶುಕ್ರವಾರ ತಾಲೂಕಿನ ಗೋಗಿ (ಕೆ) ಗ್ರಾಮಕ್ಕೆ ಬೆಳೆಹಾನಿ ವೀಕ್ಷಣೆಗೆ ಆಗಮಿಸಿದ್ದ ಕೇಂದ್ರ ಸರ್ಕಾರದ ಆಂತರಿಕ ಸಚಿವಾಲಯದ ಮೂರು ಸದಸ್ಯರ ತಂಡದ ಮುಂದೆ ಗೋಳು ತೋಡಿಕೊಂಡ ಪ್ರಸಂಗ ಅಲ್ಲಿದ್ದವರ ಮನಕಲುಕಿತು. ಅಲ್ಲಿಂದ ತಂಡ ಭೀಮರಾಯನ ಗುಡಿಯ ಪ್ರವಾಸಿ ಮಂದಿರಕ್ಕೆ ಆಗಮಿಸಿತು.

ತಂಡದ ಜೊತೆಯಲ್ಲಿದ್ದ ಜಿಲ್ಲಾ​ಧಿಕಾರಿ ಆರ್‌. ಸ್ನೇಹಲ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ. ಒಂದು ವಾರದೊಳಗಾಗಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಕಂದಾಯ, ಕೃಷಿ, ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸರ್ವೆ ನಡೆಸುತ್ತಿವೆ. ಮತ್ತು ಮನೆಹಾನಿಗೆ ತಾತ್ಕಾಲಿಕವಾಗಿ ತಕ್ಷಣ 10 ಸಾವಿರ ರು.ಗಳ ನೀಡಲಾಗುತ್ತಿದೆ. ನಂತರದಲ್ಲಿ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ವತಿಯಿಂದ ಪರಿಹಾರ ನೀಡಲಾಗುವುದು. ಅಲ್ಲದೆ ಆಶ್ರಯ ಯೋಜನೆಯಿಂದ ಮನೆ ಕಟ್ಟಿಕೊಳ್ಳಲು ಅಗತ್ಯ ನೆರವು ನೀಡಲಾಗುವುದು ಎಂದರು.

ಮನೆ ಹಾನಿ ಪ್ರಕರಣಗಳಲ್ಲಿ ಎ, ಬಿ, ಸಿ, ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಮನೆಗಳ ಹಾನಿಗೆ ತಕ್ಕಂತೆ ಪರಿಹಾರ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ತಾಲೂಕಿನಲ್ಲಿ ಯಾವುದೇ ಜೀವ, ಮತ್ತು ಪ್ರಾಣಿಗಳು ಸಾವನ್ನಪ್ಪಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಹತ್ತಿಗೆ ಒಳ್ಳೆ ರೇಟು ಇದ್ದುದರಿಂದ ಸರಾಸರಿ 80 ರಿಂದ 1 ಲಕ್ಷದವರೆಗೆ ಆದಾಯ ಬರುತ್ತಿತ್ತು. ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಮುಂಬರುವ ಆದಾಯ ಮಣ್ಣು ಪಾಲಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ.

ಬೆಳೆ ಮತ್ತು ಮನೆ ಹಾನಿ ವಿವರ :

ಇತ್ತೀಚೆಗೆ ಸುರಿದ ರಣ ಮಳೆಯಿಂದಾಗಿ ಶಹಾಪುರ ತಾಲೂಕಿನಲ್ಲಿ 3868.20 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ವಡಗೇರಾ ತಾಲೂಕಿನಲ್ಲಿಯೂ ಸಹ 8117 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, ತೊಗರಿ, ಮೆಣಸಿನಕಾಯಿ, ಬೆಳೆಗಳು ಸೇರಿದಂತೆ ಬೇರೆ ಬೇರೆ ಬೆಳೆಗಳು ಹಾಳಾಗಿವೆ. ಇನ್ನು ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೋ, ಬದನೆಕಾಯಿ ಹೀರೇಕಾಯಿ ಸೇರಿದಂತೆ, 90 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿವೆ. ಶಹಾಪುರ ತಾಲೂಕಿನಲ್ಲಿ 115ಕ್ಕೂ ಹೆಚ್ಚು ಮನೆಗಳು ಮತ್ತು ವಡಿಗೇರ ತಾಲೂಕಿನಲ್ಲಿ 140ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಸರ್ವೆ ಕಾರ್ಯ ಮುಗಿದ ನಂತರ ಈ ಅಂಕಿ ಅಂಶಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಸ್ತೆ ಮತ್ತು ವಿದ್ಯುತ್‌ಗಳಿಗೆ ಕಂಬ ಹಾನಿ :

ತಾಲೂಕಿನ ಅಣಬಿ ಬೇವಿನಹಳ್ಳಿ, ಹೋತ್ಪೇಟ್‌, ನಂದಿಹಳ್ಳಿ, ಕನ್ನೆ ಕೋಳೂರು, ಟೋಕಾಪುರ್‌ ಗುಂಡುಗುರ್ತಿ ಸೇರಿದಂತೆ ಹಲವು ಗ್ರಾಮಗಳ ನೂರಾರು ಗ್ರಾಮೀಣ ರಸ್ತೆಗಳು ಮಳೆಗೆ ಸಂಪೂರ್ಣವಾಗಿ ಹಾಳಾಗಿವೆ. ಮತ್ತು ತಾಲೂಕಿನಲ್ಲಿ 150ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಿದ್ದಿವೆ ಎಂದು ಅ​ಧಿಕಾರಿಗಳು ತಿಳಿಸಿದ್ದಾರೆ.

Yadgir: ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

ಹೋತಪೇಟ್‌ ಗ್ರಾಮದಲ್ಲಿ ಕೇಂದ್ರ ತಂಡ ಮನೆ ಹಾನಿ ವೀಕ್ಷಿಸಿತು. ಇಲ್ಲಿ ಸುರಿದ ಭಾರಿ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಗ್ರಾಮದ ರತ್ನ ಕಾಶೀಲಿಂಗ ಪಟ್ಟೇದಾರ್‌, ಭೀಮಪ್ಪ ಸಿದ್ದಪ್ಪ, ಹಾಗೂ ಖಂಡಪ್ಪಗೌಡ ಮಲ್ಲನಗೌಡರ ಮನೆಗಳಿಗೆ ಕೇಂದ್ರ ತಂಡ ಭೇಟಿ ನೀಡಿ ವೀಕ್ಷಣೆ ನಡೆಸಿತು.

ಬೆಳೆ ಮತ್ತು ಮನೆ ಹಾನಿ ಸರ್ವೆ ಕಾರ್ಯ ನಿಷ್ಪಕ್ಷಪಾತವಾಗಿ ನಡೆಸಬೇಕು. ಈಗಿನ ಬೆಲೆ ಏರಿಕೆಗೆ ಅನುಗುಣವಾಗಿ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಅಂತ ಶಹಾಪುರದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪ ಆನೆಗುಂದಿ ತಿಳಿಸಿದ್ದಾರೆ.  
 

Follow Us:
Download App:
  • android
  • ios