ವಿಜಯಪುರ: ಹೆಚ್ಚಾದ ಮಳೆ, ಕೈ ಕೊಟ್ಟಿತಾ ಬೆಳೆ?
53 ಮಿಮೀ ಮಳೆ ಹೆಚ್ಚಳ, ಈಗ ಬಂದಿರುವ ಬೆಳೆ ಕೈಗೆ ಸಿಗುತ್ತಾ ಎಂಬ ಅನುಮಾನ ರೈತರದ್ದು
ಶಂಕರ ಹಾವಿನಾಳ
ಚಡಚಣ(ಅ.21): ಮಳೆಯ ಆರ್ಭಟ ಹೆಚ್ಚಳವಾಗಿದೆ. ಇದರಿಂದಾಗಿ ರೈತರು ತೀವ್ರ ಪರಿತಪಿಸುವಂತಾಗಿದೆ. ವರ್ಷದ ಕೊನೆಯಲ್ಲಿ ಬೆವರು ಸುರಿಸಿದ ಬೆಳೆ ಕೈ ಹಿಡಿಯಬಹುದು ಎಂಬ ನಿರೀಕ್ಷೆ ರೈತರದ್ದಾಗಿರುತ್ತದೆ. ಆದರೆ, ಅತಿಯಾದ ಮಳೆಯಿಂದಾಗಿ ರೈತರು ಕೂಡ ಹೆಚ್ಚು ಬಾಧೆಗೆ ಒಳಗಾಗಿದ್ದಾರೆ. ಮಳೆ ಪ್ರಮಾಣಕ್ಕಿಂತ 53 ಮಿಮೀಗೂ ಹೆಚ್ಚಾಗಿದೆ. ಇದರಿಂದಾಗಿ ರೈತ ಬೆಳೆದ ಹತ್ತಿ, ತೊಗರಿ ಬೆಳೆಯು ನೀರಿನಲ್ಲಿ ನಿಂತಿದೆ. ಹೀಗಾಗಿ ಬಂದ ಲಾಭ ಇದರಲ್ಲಿ ಹೋಗಿದೆ ಎಂಬ ಭಯ ರೈತರನ್ನು ಬಾಧಿಸುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆಯೋ ಅಥವಾ ಬೆಳೆ ಹಾಳಾಗಿ ಹೋಗುತ್ತದೆಯೋ ಎಂಬ ನೋವು ಕೂಡ ರೈತರದ್ದಾಗಿದೆ.
ತಾಲೂಕಿನಲ್ಲಿ ತೊಗರಿ ಬೆಳೆ 4386 ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿಯಲ್ಲಿ 4040 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಹತ್ತಿ ಬೆಳೆ 1043 ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿಯಲ್ಲಿ 575 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಚಡಚಣ ಹಾಗೂ ಹಲಸಂಗಿ ಹೋಬಳಿಯಲ್ಲಿ ಕಳೆದ ವರ್ಷ 387 ಮಿಮೀ ಮಳೆಯಾಗಿತ್ತು. ಈ ವರ್ಷ 592 ಮಿಮೀ ಮಳೆಯಾಗಿ 53 ಮಿಮೀ ಮಳೆ ಹೆಚ್ಚಳವಾಗಿದೆ. ಹೀಗಾಗಿ ತೊಗರಿ ಹಾಗೂ ಹತ್ತಿ ಬೆಳೆಗಳಿಗೆ ತೇವಾಂಶ ಹೆಚ್ಚಳವಾಗಿದ್ದರಿಂದಾಗಿ ಬುಡ ಕೊಳೆತು ಬೆಳೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಬೆಳೆ ಹಾನಿಯಾಗಬಾರದು ಎಂದ ರೈತರು ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ನೀರಿಗೆ ಹರಿವು ತೋಡಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದಾಗ ಬೆಳೆ ಕಾಪಾಡಲು ಸಾಧ್ಯ ಎಂಬುದು ಚಡಚಣ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಧಾನಪ್ಪ ಕತ್ನಳ್ಳಿ ಅಭಿಪ್ರಾಯ.
ಗುಮ್ಮಟನಗರಿಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ, ವಿಜಯಪುರ ಪೊಲೀಸರನ್ನ ಹೊಗಳಿದ ಡಿಸಿ!
ಗ್ರಾಮೀಣ ಬ್ಯಾಂಕ್‌ನಲ್ಲಿ .2 ಲಕ್ಷ 75 ಸಾವಿರ ಹಾಗೂ ಕೃಷಿ ಪತ್ತಿ ಸಹಕಾರಿ ಬ್ಯಾಂಕಿನಲ್ಲಿ 55 ಸಾವಿರ ಸಾಲ ಮಾಡಿ ಒಂದು ಎಕರೆ ದ್ರಾಕ್ಷಿ, ಎರಡು ಎಕರೆ ತೊಗರಿ ಹಾಕಿರುವೆ. ಎರಡರಲ್ಲಿ ಒಂದು ಬೆಳೆಯಾದರೂ ಬಂದರೂ ನಮಗೆ ಅನುಕೂಲವಾಗುತ್ತದೆ ಎಂದುಕೊಂಡರೆ ಎರಡು ಬೆಳೆಗಳು ಕೈ ಕೊಟ್ಟಿವೆ. ಇದರಿಂದ ನಮ್ಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೇವತಾಂವ ರೈತ ಅಶೋಕ ಮಲಕಪ್ಪ ಶಿನಖೇಡ ಅಳಲು ತೋಡಿಕೊಂಡರು.
ಕಬ್ಬಿನ ಗದ್ದೆಗೂ ನುಗ್ಗಿದ ನೀರು:
ಕೃಷಿ ಅಧಿಕಾರಿಗಳ ಮಾಹಿತಿಯಂತೆ ತಾಲೂಕಿನಲ್ಲಿ 8467 ಹೆಕ್ಟೇರ್ ಪ್ರದೇಶ ಬೆಳೆಯಬೇಕಾದ ಕಬ್ಬು ಈ ಬಾರಿ 7400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದಾರೆ. ಕರ್ನಾಟಕ-ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಭೀಮಾ ನದಿ ಎರಡು ದಡ ತುಂಬಿ ಹರಿಯುತ್ತಿದೆ. ನದಿ ತೀರದ ಹೊಲಗಳಲ್ಲಿ ಬೆಳೆ ಕಬ್ಬು ನೀರಲ್ಲಿ ನಿಂತಿರುವುದರಿಂದ ನದಿ ತೀರದ ರೈತರಲ್ಲಿ ಆತಂಕ ಮನೆ ಮಾಡಿದೆ.
ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ನಾಡು ಎಂದು ಖ್ಯಾತಿಗೊಳಗಾದ ಚಡಚಣ ತಾಲೂಕು ಈಗ ಮಳೆಯಿಂದ ದ್ರಾಕ್ಷಿ ಬೆಳೆದ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಈ ಮಳೆಯಿಂದ ಕಟಾವು ಮಾಡಿದ ದ್ರಾಕ್ಷಿಗೆ ಔಷಧ ಹೆಚ್ಚಾಗಿ ಬಳಸಬೇಕಾಗುತ್ತದೆ. ಇದರಿಂದ ರೈತರ ಜೇಬಿಗೆ ಕತ್ತರಿ ಬೀಳುತ್ತದೆ. ದ್ರಾಕ್ಷಿ ಗದ್ದೆಯಲ್ಲಿ ನಿಂತ ನೀರಿನಿಂದ ತೇವಾಂಶ ಹೆಚ್ಚಳವಾಗುತ್ತದೆ. ಇದರಿಂದ ದಾವಣಿ, ಚುಕ್ಕಿ ರೋಗಗಳು ಬರುವ ಸಾಧ್ಯತೆ ಇದೆ ಎಂದು ರೈತ ರವಿಗೌಡ ಬಿರಾದಾರ ಹೇಳುತ್ತಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬಹುತೇಕ ರೈತ ಬೆಳೆದ ಹತ್ತಿ ಹಾಗೂ ತೊಗರಿ ಬೆಳೆಗಳು ಕೈಕೊಟ್ಟಂತಾಗಿದೆ. ಕೂಡಲೇ ಸರ್ಕಾರ ಈ ಎರಡು ಬೆಳೆಗಳನ್ನು ಸರ್ವೆ ಮಾಡಿಸಿ ಬೆಳೆ ಹಾನಿ ಕುರಿತು ಸಂಗ್ರಹಿಸಿ ಸೂಕ್ತ ಪರಿಹಾರ ಘೋಷಣೆಯಾಗಬೇಕು ಅಂತ ಲೋಣಿ ಗ್ರಾಮದ ರೈತ ಜಟ್ಟೆಪ್ಪ ಜಿತ್ತಿ ತಿಳಿಸಿದ್ದಾರೆ.