ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.15): ಕೊಪ್ಪಳ ಬಳಿ ಬಂದಿರುವ ಬಹುತೇಕ ಕಾರ್ಖಾನೆಗಳ ತ್ಯಾಜ್ಯ ಮತ್ತು ಕರಿಬೂದಿಯಿಂದ ಹಿರೇಬಗನಾಳ ಗ್ರಾಮದ ಸುತ್ತಮುತ್ತಲ ರೈತರು ನಲುಗಿದ್ದಾರೆ. ಇನ್ನು ಜಾನುವಾರುಗಳು ಗೊಡ್ಡಾಗುತ್ತಿರುವುದು ಒಂದು ಕಡೆಯಾದರೆ, ಅವುಗಳಿಗೆ ಗರ್ಭಪಾತವೂ ಆಗುತ್ತಿವೆ. ಹೊಲದಲ್ಲಿ ಸುತ್ತಾಡಿದರೆ ಸಾಕು ಮೈಮೇಲಿನ ಬಟ್ಟೆಯಲ್ಲ ಕಪ್ಪಾಗುತ್ತವೆ. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟವರು ಕಣ್ತೆರೆಯುತ್ತಿಲ್ಲ.

ಇಲ್ಲಿಯ ಹಲವು ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ ಅಷ್ಟಿಷ್ಟುಹಾನಿಯನ್ನು ಮಾಡಿಲ್ಲ. ಸುತ್ತಮುತ್ತಲ ರೈತರ ಬದುಕು ನಲುಗಿಹೋಗಿದ್ದು, ಬೆಳೆದಿದ್ದು ಮಾರಲಾಗುತ್ತಿಲ್ಲ ಮತ್ತು ಮೇವನ್ನು ಜಾನುವಾರುಗಳು ಮೇಯುತ್ತಿಲ್ಲ. ಕಾರ್ಖಾನೆ ತ್ಯಾಜ್ಯದ ಕರಾಳ ಮುಖ ಬಯಲು ಮಾಡುತ್ತದೆ.

ಪುಡಿಗಾಸು ಪರಿಹಾರ:

ಕಾರ್ಖಾನೆಯವರು ಸುತ್ತಮುತ್ತಲ ರೈತರಿಗೆ ಪುಡಿಗಾಸು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ಕೇವಲ ಒಂದು ಕಾರ್ಖಾನೆಯು ಬರೋಬ್ಬರಿ 115 ರೈತರಿಗೆ ಪರಿಹಾರ ನೀಡಿದೆ. ಈ ಮೂಲಕವೇ ಕಾರ್ಖಾನೆ ಹೊರಸೂಸುವ ತ್ಯಾಜ್ಯದಿಂದ ಬೆಳೆಹಾನಿಯಾಗುತ್ತದೆ, ಪರಿಸರ ಹಾನಿಯಾಗುತ್ತದೆ ಎಂಬುದನ್ನು ಅದು ಒಪ್ಪಿಕೊಂಡಂತಾಗುತ್ತದೆ.

ಹಿರೇಬಗನಾಳ ಗ್ರಾಮದ ಸುತ್ತಮುತ್ತಲು ಸುಮಾರು 10- 12 ಕಿಮೀ ವ್ಯಾಪ್ತಿಯಲ್ಲಿ ಇದರ ಪರಿಣಾಮ ಕಾಣಬಹುದು. ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡಿದರೆ ತಲೆಸುತ್ತು, ವಾಂತಿ ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಇದರಿಂದ ನಮಗೆ ಮುಕ್ತಿ ಕೊಡಿ ಎನ್ನುವ ರೈತರು ಕೂಗಿಗೆ ನ್ಯಾಯ ಸಿಗುತ್ತಿಲ್ಲ.

'ಪ್ರಧಾನಿ ಮೋದಿಯಿಂದ ನವಲಿ ಸಮಾನಾಂತರ ಜಲಾಶಯಕ್ಕೆ ಶಂಕು'

ರೈತರ ಹೋರಾಟ:

ಹರೇಕೃಷ್ಣ ಕಾರ್ಖಾನೆಗೆ ಹೊಂದಿಕೊಂಡಿರುವ ರೈತರು ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಹನುಮಂತಪ್ಪ ಕಡ್ಲಿ ನ್ಯಾಯಾಲಯ, ಲೋಕಾಯುಕ್ತ ಎಂದು ಪ್ರತಿವರ್ಷವೂ ಹೋರಾಟ ಮಾಡುತ್ತಿದ್ದಾರೆ. ಈ ಕಾರ್ಖಾನೆಗೆ ಹೊಂದಿಕೊಂಡೇ ಇವರು ಸೇರಿದಂತೆ ಸಂಬಂಧಿಕರ 16 ಎಕರೆ ಭೂಮಿ ಇದೆ. ಪೇರಲ, ಮೆಕ್ಕೆಜೋಳ ಇತರ ಬೆಳೆ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಪರಿಹಾರವನ್ನು ನೀಡುವಂತೆ ಹೋರಾಟ ಮಾಡುತ್ತಿದ್ದಾರೆ.

ಇದುವರೆಗೂ 20 ಲಕ್ಷಕ್ಕೂ ಅಧಿಕ ಪರಿಹಾರವನ್ನು ನೀಡಲಾಗಿದೆ. ಲೋಕಾಯುಕ್ತ ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡು ಒಂದಿಷ್ಟುಪರಿಹಾರ ನೀಡಿದ್ದಾರೆ. ಆದರೆ, ನಮಗೆ ಶಾಶ್ವತ ಪರಿಹಾರ ಬೇಕು ಎನ್ನುವುದು ರೈತರ ಆಗ್ರಹ. ಲೋಕಾಯುಕ್ತ ವಿಚಾರಣೆಯ ವೇಳೆಯಲ್ಲಿಯೂ ಶಾಶ್ವತ ಪರಿಹಾರ ನೀಡುವಂತೆ ಸೂಚಿಸಲಾಗಿದೆ.

ರೈತರಿಗೆ ಪರ್ಯಾಯ ಭೂಮಿ ಕೊಡಿಸಿ, ಇಲ್ಲವೇ ತ್ಯಾಜ್ಯದಿಂದ ಹಾಳಾಗುತ್ತಿರುವ ಭೂಮಿಯನ್ನು ಗುರುತಿಸಿ ಸ್ವಾಧೀನ ಮಾಡಿಕೊಳ್ಳಿ ಎನ್ನುವ ಸಲಹೆಯನ್ನು ನೀಡಲಾಗಿದೆ. ಆದರೆ, ಕಾರ್ಖಾನೆಯವರು ಮಾತ್ರ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ರೈತ ಹನುಮಂತಪ್ಪ ಕಡ್ಲಿ.

ಸರ್ಕಾರಕ್ಕೆ ವರದಿ:

ಕಾರ್ಖಾನೆ ತ್ಯಾಜ್ಯದಿಂದ ಆಗುತ್ತಿರುವ ಹಾನಿಯ ಕುರಿತು ಈ ಹಿಂದೆ ವಿಜ್ಞಾನಿಗಳ ತಂಡ ಆಗಮಿಸಿ ವರದಿಯನ್ನು ನೀಡಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಕುರಿತು ವರದಿಯನ್ನು ಸಲ್ಲಿಸಿದೆ. ಆದರೂ ಕಾರ್ಖಾನೆಯವರು ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಿತ ಕಾಯಬೇಕು. ಕಾರ್ಖಾನೆ ತ್ಯಾಜ್ಯದಿಂದ ಆಗುತ್ತಿರುವ ಹಾನಿಯ ಕುರಿತು ಪರಾಮರ್ಶೆ ನಡೆಸಿ ರೈತರನ್ನು ಕಾರ್ಖಾನೆಯ ಉಸಿರುಗಟ್ಟುವ ವಾತಾವರಣದಿಂದ ಪಾರು ಮಾಡಬೇಕಿದೆ.

ಜಾನುವಾರುಗಳು ಸಾಯುತ್ತಿವೆ. ಅನೇಕ ಜಾನುವಾರುಗಳು ಗರ್ಭಪಾತವಾಗುತ್ತಿವೆ. ಹೀಗಾಗಿ ನಮಗೆ ನ್ಯಾಯ ಒದಗಿಸಿ ಎನ್ನುವುದು ರೈತರ ಅಳಲು. ರೈತರೊಬ್ಬರ ಡೇರಿಯಲ್ಲಿದ್ದ ಆಕಳುಗಳೆಲ್ಲವೂ ಮೃತಪಟ್ಟಿವೆ. ಕಾರ್ಖಾನೆಯವರ ವಿರುದ್ಧ ಹೋರಾಟ ಮಾಡುವ ಶಕ್ತಿ ರೈತರಿಗೆ ಇಲ್ಲವಾದ್ದರಿಂದ ಸರ್ಕಾರ ಮಧ್ಯೆಪ್ರವೇಶಿಸಲಿ ಎಂದು ರೈತರು ಆಗ್ರಹಿಸಿದ್ದಾರೆ.

ನಮಗೆ ಜೀವನವೇ ಸಾಕಾಗಿದೆ. ಕಾರ್ಖಾನೆ ತ್ಯಾಜ್ಯದಿಂದ ಬೆಳೆದ ಬೆಳೆ ಮಾರಾಟವಾಗುತ್ತಿಲ್ಲ. ಮೇವನ್ನು ಜಾನುವಾರುಗಳು ಮೇಯುತ್ತಿಲ್ಲ. ಹೊಲದಲ್ಲಿ ಕೆಲಸ ಮಾಡುವವರು ಆನಾರೋಗ್ಯದಿಂದ ಬಳಲುತ್ತಿವೆ ಎಂದು ರೈತ ಹನುಮಂತ ಕಡ್ಲಿ ತಿಳಿಸಿದ್ದಾರೆ. 

ಕಾರ್ಖಾನೆಗೆ ಹೊಂದಿಕೊಂಡು ಇರುವ ರೈತರ ಜಮೀನಿಗೆ ಪರಿಹಾರ ನೀಡಲಾಗುತ್ತದೆ. ಇನ್ನು ತ್ಯಾಜ್ಯದ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈಗಷ್ಟೇ ಬಂದು 2 ತಿಂಗಳಾಗಿದೆ. ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಯೂ ಸಭೆ ಮಾಡಲಾಗಿದೆ ಎಂದು ಕೊಪ್ಪಳದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಕೆ. ರಾಜು ಪರಿಸರ ಹೇಳಿದ್ದಾರೆ.