ಮುಂಗಾರು ಬೆಳೆನಷ್ಟ, ಕೈ ಹಿಡಿಯುವುದೇ ಹಿಂಗಾರು..!

ಮುಂಗಾರಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಂದ ಹಿಂಗಾರು ಹಂಗಾಮಿಗೆ ಸಿದ್ಧತೆ, 1,94,387 ಹೆ. ಪ್ರದೇಶದ ಬಿತ್ತನೆ ಗುರಿ, ಕಡಲೆ-ಜೋಳ, ನೆಲಗಡೆಲೆ ಸೇರಿ ಒಟ್ಟು 4511 ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನು, 1642 ವಿತರಣೆ

Farmers Expect Good Post Monsoon due to Crop Loss for Monsoon Rain in Karnataka grg

ರಾಮಕೃಷ್ಣ ದಾಸರಿ

ರಾಯಚೂರು(ಅ.08):  ನಿರೀಕ್ಷೆಗೂ ಮೀರಿ ಸುರಿದ ಮುಂಗಾರು ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನಷ್ಟಕ್ಕೀಡಾಗಿರುವ ಸಮಯದಲ್ಲಿಯೇ ಹಿಂಗಾರು ಪ್ರವೇಶಗೊಂಡಿದ್ದು, ಅನ್ನದಾತರು ಸೇರಿದಂತೆ ಜನಸಾಮಾನ್ಯರ ಮೈ ಮೆತ್ತಗೆ ಮಾಡಿದ ಮುಂಗಾರು ಲಾಭಕ್ಕಿಂತ ನಷ್ಟದ ಪಾಲನ್ನೆ ಹೆಚ್ಚಾಗಿ ಉಣಬಡಿಸಿದ್ದು, ಇದೀಗ ಹಿಂಗಾರು ಹಂಗಾಮಾದರು ರೈತರ ಕೈ ಹಿಡಿಯುವುದೇ ಎನ್ನುವ ಹೊಸ ಭರವಸೆ ಮೂಡಿದೆ.

ಕಳೆದ ಐದು ತಿಂಗಳಿನಿಂದ ನಿರಂತರ ಮಳೆ, ಪದೇ ಪದೆ ಅತಿವೃಷ್ಟಿಯ ಸನ್ನಿವೇಶ, ವಾಡಿಕೆಗಿಂತ ಹೆಚ್ಚಾಗಿ ಕರುಣೆ ತೋರಿದ ವರುಣ ದೇವನ ಕೃಪೆಯಿಂದಾಗಿ ಮುಂಗಾರು ಬೆಳೆಗಳಾದ ಭತ್ತ, ಹತ್ತಿ, ತೊಗರಿ, ಮೆಣಸಿನ ಕಾಯಿ, ತೋಟಗಾರಿಕೆ, ಕಾಯಿಪಲ್ಲೆ ಬೆಳೆಗಳನ್ನು ಬೆಳೆದು ಕೈ ಸುಟ್ಟಿಕೊಂಡಿರುವ ರೈತರು ಇದೀಗ ಹಿಂಗಾರು ಕೈ ಹಿಡಿಯುತ್ತದೆ ಎನ್ನುವ ಆಸೆಯೊಂದಿಗೆ ಸಿದ್ಧತೆಯಲ್ಲಿ ತೊಡಗಿದ್ದು, ಅದರಂತೆ ಕೃಷಿ ಇಲಾಖೆಯು ಸಹ ಹಿಂಗಾರಿಗೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ, ಕೃಷಿ ಪರಿಕರಗಳ ವ್ಯವಸ್ಥೆಯನ್ನು ಮಾಡಿಕೊಂಡಿದೆ.

Karnataka Rains| ನಾಲ್ಕು ಪಟ್ಟು ಅಧಿಕ ಮಳೆ ಸುರಿಸಿದ ಹಿಂಗಾರು

ಅಬ್ಬರಿಸಿದ ಮುಂಗಾರು ಮಳೆ:

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯ ಪರಿಣಾಮ ಕೈಗೆ ಸಿಗಬೇಕಾದ ಬೆಳೆಗಳು ನೀರುಪಾಲಾಗಿವೆ. ಕಳೆದ ಜು.1 ರಿಂದ ಅ.6ವರೆಗೆ ಜಿಲ್ಲೆಯಾದ್ಯಂತ ವಾಡಿಗೆ ರೀತಿ 547 ಮಿ.ಮೀ.ನಲ್ಲಿ 698 ಮಿ.ಮೀ. ಮಳೆಯಾಗಿದ್ದು ಶೇ.27ರಷ್ಟುಹೆಚ್ಚುವರಿಯಾಗಿ ಮಳೆ ಸುರಿದಿದೆ. ಮಳೆ ಹಾನಿಯಿಂದಾಗಿ ಸುಮಾರು .73.75 ಕೋಟಿ ನಷ್ಟಸಂಭವಿಸಿದ್ದು, ಪರಿಹಾರಕ್ಕಾಗಿ .9.27 ಕೋಟಿ ಅನುದಾನಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಎರಡು ಹಂತಗಳಲ್ಲಿ 1,214 ಫಲಾನುಭವಿಗಳಿಗೆ .1.23 ಕೋಟಿ ಇನ್‌ಪುಟ್‌ ಸಬ್ಸಿಡಿ ಜೊತೆಗೆ ಮೂರನೇ ಹಂತದ 205 ರೈತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯೊಂದಿಗೆ ಹೆಚ್ಚುವರಿ ಪರಿಹಾರ ಧನವನ್ನು ಸೇರಿಸಿ ಒಟ್ಟು .25.40 ಲಕ್ಷಗಳ ಇನಪುಟ್‌ ಸಬ್ಸಿಡಿ ಜಮಾಗೊಂಡಿದೆ.

ಸೆಪ್ಟಂಬರ್‌ ಕೊನೆ ಹಾಗೂ ಅಕ್ಟೋಬರ್‌ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ಬೆಳೆಹಾನಿಯ ಕುರಿತ ಸಮೀಕ್ಷೆಯು ಪ್ರಗತಿಯಲ್ಲಿದೆ.

ಹಿಂಗಾರು ಬಿತ್ತನೆ ಗುರಿ, ರಸಗೊಬ್ಬರ:

ಮುಂಗಾರಿನಲ್ಲಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಅದೇ ನೋವಿನಲ್ಲಿ ಹಿಂಗಾರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಿಂಗಾರು ಜೋಳ, ಮುಸುಕಿನ ಜೋಳ, ಗೋಧಿ, ಸಮಗ್ರ ಏಕದಳ, ದ್ವಿದಳ, ಎಣ್ಣೆ ಕಾಳು ಸೇರಿದಂತೆ ಖುಷ್ಕಿ-ನೀರಾವರಿ ಪ್ರದೇಶವನ್ನೊಳಗೊಂಡು 1 ಲಕ್ಷ 94 ಸಾವಿರ 387 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯನ್ನು ಹೊಂದಲಾಗಿದ್ದು, ಸಾಧನೆಯ ಖಾತೆಯು ಇನ್ನು ಶುರುವಾಗಿಲ್ಲ. ಹಿಂಗಾರಿನಲ್ಲಿ ರೈತರಿಗೆ ವಿತರಿಸುವುದಕ್ಕಾಗಿ ಕಡಲೆ, ಜೋಳ, ನೆಲಗಡೆಲೆ ಸೇರಿ 4511 ಕ್ವಿಂಟಾಲ್‌ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದ್ದು, ಅದರಲ್ಲಿ 1642 ಕ್ವಿಂಟಾಲ್‌ ಬಿತ್ತನೆಬೀಜಗಳನ್ನು ವಿತರಿಸಲಾಗಿದೆ. ಇನ್ನು ಹಿಂಗಾರಿನಲ್ಲಿ ಅಗತ್ಯವಾದ ರಸಗೊಬ್ಬರಗಳಾದ ಯುರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ ಸೇರಿ ಒಟ್ಟಾರೆ 1,96,401 ಮೆಟ್ರಿಕ್‌ ಟನ್‌ ದಾಸ್ತಾನಿನಲ್ಲಿ 212 ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಸರಬರಾಜು ಮಾಡಲಾಗಿದೆ.

ಉಡುಪಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ‌ ಮುಂಗಾರು‌ ಮಳೆ..!

ಮುಂಗಾರು ತಿನಿಸಿದ ಕಹಿಯನ್ನು ಸಹಿಸಿಕೊಂಡು ಹಿಂಗಾರು ಸಿದ್ಧತೆಯಲ್ಲಿ ತೊಡಗಿರುವ ರೈತರು ಸತತ ಮಳೆಯಿಂದಾಗಿ ತೊಯ್ದು ಮುದ್ದೆಯಾಗಿರುವ ಭೂಮಿಯನ್ನು ಒಣಗಲು ಬಿಟ್ಟು ಹದಗೊಳಿಸಿ ಬಿತ್ತನೆ ಸಿದ್ಧತೆಗೆ ಮುಂದಾಗಿದ್ದು ಇದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನಷ್ಟಕ್ಕೀಡಾಗಿವೆ. ಹಿಂಗಾರು ಪೂರ್ವದಲ್ಲಿ ಎಲ್ಲೆಡೆ ಮಳೆಯಾಗಿದ್ದು, ಬಿತ್ತನೆಗಾಗಿ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸತತ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿ, ಪ್ರಾಣ, ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು ಅಂತ ರೈತ ಮುಖಂಡ ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios