Asianet Suvarna News Asianet Suvarna News

ಅತಿಕ್ರಮ ಪ್ರವೇಶ, ಶಾಸಕಿಯನ್ನು ಜೈಲಿಗಟ್ಟುವಂತೆ ರೈತರ ಒತ್ತಾಯ

ವಾಣಿವಿಲಾಸ ಸಾಗರ ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಚಳ್ಳಕೆರೆಗೆ ಪೂರೈಕೆಯಾಗುವ ನೀರನ್ನು ಬಂದ್‌ ಮಾಡಿರುವ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್‌ ಸೇರಿ ಬೆಂಬಲಿಗರನ್ನು ಬಂಧಿಸುವಂತೆ ರೈತ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

 

Farmers demand arrest of mla poornima srinivas
Author
Bangalore, First Published Apr 30, 2020, 11:14 AM IST

ಚಿತ್ರದುರ್ಗ(ಏ.30): ವಾಣಿವಿಲಾಸ ಸಾಗರ ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಚಳ್ಳಕೆರೆಗೆ ಪೂರೈಕೆಯಾಗುವ ನೀರನ್ನು ಬಂದ್‌ ಮಾಡಿರುವ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್‌ ಸೇರಿ ಬೆಂಬಲಿಗರನ್ನು ಬಂಧಿಸುವಂತೆ ರೈತ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಆವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಕೊರೋನಾ ಸೊಂಕು ತಡೆಯುವ ಹಿನ್ನೆಲೆಯಲ್ಲಿ ದೇಶದಾಂದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದು, ಜಲಾಶಯ ಸೇರಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಂಥಹ ಸಂದರ್ಭದಲ್ಲಿ ನೂರಾರು ಜನ ಗುಂಪು ಕಟ್ಟಿಕೊಂಡು ಬಂದು ವಾಣಿವಿಲಾಸ ಸಾಗರ ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡುವ ಮೂಲಕ ಹಿರಿಯೂರು ಶಾಸಕಿ ಪೂರ್ಣಿಮಾ ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ತಿಳಿಸಿದರು.

ಚಳ್ಳಕೆರೆ ತಾಲೂಕಿನ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರು ಹರಿಸಲು ಸರ್ಕಾರದ ಸೂಚನೆಯನ್ವಯ ತಾವು ಆದೇಶ ಮಾಡಿದ್ದೀರಿ. ಕಳೆದ ಏಪ್ರಿಲ್‌ 23ರಂದು ಜಲಸಂಪನ್ಮೂಲ ಸಚಿವ ರಮೇಶ್‌ಜಾರಿಕಿಹೊಳಿ ಅವರು ವಾಣಿವಿಲಾಸ ಸಾಗರ ಜಲಾಶಯಕ್ಕೆ ಆಗಮಿಸಿ ನೀರು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ಹೋಗಿದ್ದರು. 5 ದಿನ ಕಾಲುವೆ ಮತ್ತು ನದಿಯಲ್ಲಿ ನೀರು ಹರಿದ ನಂತರ ಏಪ್ರಿಲ್‌ 28ರ ಸೋಮವಾರ ಸಂಜೆ ಹಿರಿಯೂರು ಶಾಸಕಿ ಪೂರ್ಣಿಮಾ, ಒಂದಿಷ್ಟುಮಂದಿ ಗುಂಪು ಕಟ್ಟಿಕೊಂಡು ಬಂದು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡಿ ನೀರು ನಿಲ್ಲಿಸಿ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ನದಿಗೆ ನೀರು ಬಿಡುವ ಕುರಿತಂತೆ ಅಗತ್ಯತೆ ಆಧರಿಸಿ ಜಲಸಂಪನ್ಮೂಲ ಇಲಾಖೆ ತೀರ್ಮಾನ ಕೈಗೊಳ್ಳುತ್ತದೆ. ರೈತರ ಹಿತ ಕಾಪಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ವಾಸ್ತವಾಂಶ ಹೀಗಿರುವಾಗ ಶಾಸಕಿ ನೀರು ಬಂದ್‌ ಮಾಡುವ ಅಗತ್ಯ ಇರುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಶಾಸಕರೂ ಅದರಿಂದ ಹೊರತಾಗಿಲ್ಲ. ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡಿದ ಅವರು ಹಾಗೂ ಅವರ ಪತಿ ಸೇರಿ ಬೆಂಬಲಿಗರನ್ನು ತಕ್ಷಣವೇ ಬಂಧಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ ಬಾಬು, ಧನಂಜಯ, ಜಿಲ್ಲಾ ಮುಖಂಡ ಹೊರಕೇರಪ್ಪ ಈ ವೇಳೆ ಉಪಸ್ಥಿತರಿದ್ದರು.

Follow Us:
Download App:
  • android
  • ios