Asianet Suvarna News Asianet Suvarna News

Chikkamagaluru: ಕಂದಾಯ ಸಚಿವ ಅಶೋಕ್‌ರ ಗ್ರಾಮ ವಾಸ್ತವ್ಯಕ್ಕೆ ರೈತ ಸಂಘ ಲೇವಡಿ

ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಜನರು ಚುನಾವಣೆ ಬಹಿಷ್ಕಾರದಂತಹಾ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಕಂದಾಯ ಸಚಿವ ಅಶೋಕ್ ಮಾತ್ರ ಎಲ್ಲಾ ಇದ್ದ ರಸ್ತೆ ಬದಿಯ ಊರಲ್ಲಿ ಗ್ರಾಮ ವಾಸ್ತವ್ಯ ಮಾಡಿ ಹೋಗಿದ್ದಾರೆ. 

Farmers Association Slams On Minister R Ashok Grama Vastavya At Chikkamagaluru gvd
Author
First Published Feb 6, 2023, 11:59 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.06): ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಜನರು ಚುನಾವಣೆ ಬಹಿಷ್ಕಾರದಂತಹಾ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಕಂದಾಯ ಸಚಿವ ಅಶೋಕ್ ಮಾತ್ರ ಎಲ್ಲಾ ಇದ್ದ ರಸ್ತೆ ಬದಿಯ ಊರಲ್ಲಿ ಗ್ರಾಮ ವಾಸ್ತವ್ಯ ಮಾಡಿ ಹೋಗಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರಬೇಕಾದ್ರೆ ಮಲೆನಾಡ ಕುಗ್ರಾಮದಲ್ಲಿ ಮಾಡ್ಬೇಕಿತ್ತು ಅಂತ ಜನ ಸಚಿವ ಅಶೋಕ್ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡ್ತಿದ್ದಾರೆ.

ಗ್ರಾಮವಾಸ್ತವ್ಯಕ್ಕೆ ಜನರ ಅಪಸ್ವರ: ಮೊನ್ನೆ ಕಂದಾಯ ಸಚಿವ ಆರ್.ಅಶೋಕ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ, ಇದೀಗ, ರೈತ ಸಮುದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡ್ತಿದ್ದಾರೆ. ಹುಲಿಕೆರೆ ಬಯಲುಸೀಮೆ ಭಾಗ ನಿಜ. ಅಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈಗಿಲ್ಲ. ಕಳೆದ ಎರಡು ವರ್ಷಗಳಿಂದ ಸಮೃದ್ಧ ಮಳೆ-ಬೆಳೆಯಾಗಿ ಜನ ಚೆನ್ನಾಗಿದ್ದಾರೆ. ಆದರೆ, ಆರ್.ಅಶೋಕ್ ಬಂದು ಹೋಗೋದಕ್ಕೆ ಅನುಕೂಲವಾಗಲೆಂದು ಇಲ್ಲಿ ವಾಸ್ತವ್ಯ ಮಾಡಿದ್ದಾರೆಂದು ರೈತ ಸಂಘ ಆರೋಪಿಸಿದೆ. 

ಶೃಂಗೇರಿಯಲ್ಲಿ ಮುಂದುವರಿದ ಹಾಲಿ-ಮಾಜಿ ಎಂಎಲ್​ಎ ಬೆಂಬಲಿಗರ ಹೊಡೆದಾಟ: ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರಿಂದ​ ಹಲ್ಲೆ

ಅಲ್ಲಿರುವವರು ರೈತರೇ, ಕಷ್ಟದಲ್ಲಿದ್ದಾರೆ ನಿಜ. ಆದರೆ, ಕಳೆದ ಐದು ವರ್ಷದಿಂದ ಭಾರೀ ಮಳೆಗೆ ಮಲೆನಾಡಿಗರ ಬದುಕು ಬೀದಿಗೆ ಬಿದ್ದಿದೆ. ರಸ್ತೆ-ನೀರು-ಕರೆಂಟ್-ರೋಡು ಯಾವುದೂ ಇಲ್ಲದ ಗ್ರಾಮಗಳು ನೂರಾರಿವೆ. ಅಲ್ಲಿ ಸಚಿವರು ವಾಸ್ತವ್ಯ ಮಾಡಿದ್ದರೆ ಅವರ ವಾಸ್ತವ್ಯಕ್ಕೆ ಅರ್ಥ ಬರುತ್ತಿತ್ತು. ಜನರ ಸಮಸ್ಯೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮುಟ್ಟುತ್ತಿತ್ತು. ಒಂದಷ್ಟು ಸೌಲಭ್ಯಗಳಿಂದ ಜನರ ಬದುಕು ಹಸನಾಗುತ್ತಿತ್ತು. ಆದರೆ, ಸಚಿವರು ರಸ್ತೆ ಬದಿಯ ಊರಲ್ಲಿ ವಾಸ್ತವ್ಯ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಚಿವರ 16ನೇ ಗ್ರಾಮ ವಾಸ್ತವ್ಯ ಲೆಕ್ಕದ ಜೊತೆ ಬಂದು ಹೋದರೂ ಎಂಬ ದಾಖಲೆಗಾಗಿ ವಾಸ್ತವ್ಯ ಮಾಡಿದಂತಿದೆ ಎಂದು ಸಚಿವರ ವಾಸ್ತವ್ಯದ ಬಗ್ಗೆ ರೈತ ಮುಖಂಡ ಗುರುಶಾಂತಪ್ಪ ವ್ಯಂಗ್ಯವಾಡಿದ್ದಾರೆ. 

ಮಲೆನಾಡಿಗರ ಸಮಸ್ಯೆ ಕೇಳೋರು ಯಾರು, ರೈತ ಸಂಘ ಪ್ರಶ್ನೆ: ಕಳೆದ ಐದು ವರ್ಷದಿಂದ ಮೂಡಿಗೆರೆ-ಶೃಂಗೇರಿ ಹಾಗೂ ಕಳಸ ತಾಲೂಕಿನ ಯತೇಚ್ಛವಾಗಿ ಮಳೆ ಸುರಿದಿದೆ. ಮೂಡಿಗೆರೆ-ಕಳಸದಲ್ಲಂತೂ ರಣಮಳೆ. 2019ರ ಆಗಸ್ಟ್ ಮಳೆಗೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಮಲೆಮನೆ, ಮದುಗುಂಡಿ, ಬಿದಿರುತಳ, ಆಲೇಖಾನ್ ಹೊರಟ್ಟಿ ಗ್ರಾಮಗಳಲ್ಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿತ್ತು. ಮಲೆಮನೆ ಗ್ರಾಮದಲ್ಲಿ ಆರು ಮನೆ ನೆಲಸಮವಾಗಿದ್ದವು. ಈ ರೀತಿಯ ಹಲವು ಗ್ರಾಮಗಳಿವೆ. ಅಲ್ಲಿಂದ ಸರ್ಕಾರದ ಪುನರ್ವತಿಗೆ ಬಂದ ಜನ ರಸ್ತೆ-ನೀರು-ಚರಂಡಿ-ರೋಡು-ವಿದ್ಯುತ್ ಏನೂ ಇಲ್ಲ ಅಂತ ಚುನಾವಣೆ ಬಹಿಷ್ಕಾರಕ್ಕೂ ಚಿಂತಿಸಿದ್ದಾರೆ. 

ಕಾಫಿ-ಮೆಣಸು-ಅಡಿಕೆ-ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳು ಮಣ್ಣು ಪಾಲಾಗಿ ಜನ ಅಕ್ಷರಶಃ ಕಂಗಾಲಾಗಿದ್ದಾರೆ. ಎಕರೆಗಟ್ಟಲೇ ಹೊಲ-ಗದ್ದೆ-ತೋಟಗಳು ಕೊಚ್ಚಿ ಹೋಗಿವೆ. ಮನೆ ಕಳೆದುಕೊಂಡ ಎಷ್ಟೋ ಜನಕ್ಕೆ ಮನೆಯೇ ಸಿಕ್ಕಿಲ್ಲ. ಅಂತಹಾ ಜಾಗದಲ್ಲಿ ಸಚಿವರು ಗ್ರಾಮ ವಾಸ್ತವ್ಯ ಮಾಡಿದ್ದರೆ ಇಂದು ಆ ಗ್ರಾಮದ ನೋವು ಸಚಿವರು-ಸರ್ಕಾರ-ಅಧಿಕಾರಿಗಳಿಗೆ ಮುಟ್ಟುತ್ತಿತ್ತು. ಆದರೆ, ಸಚಿವರು ರಸ್ತೆ ಬದಿಯ ಗ್ರಾಮದಲ್ಲಿ ಮಲಗಿ ಹೋದರೆ ಮಲೆನಾಡಿಗರ ಸಮಸ್ಯೆ ಕೇಳೋರು ಯಾರೆಂದು ರೈತ ಸಂಘ ಪ್ರಶ್ನಿಸಿದೆ. ಒಟ್ಟಾರೆ, ಸಚಿವರ ಗ್ರಾಮ ವಾಸ್ತವ್ಯವೇ ತಪ್ಪು ಎಂದು ರೈತರು ಹೇಳುತ್ತಿಲ್ಲ. 

ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ: ಸಿದ್ದರಾಮಯ್ಯ

ಎಲ್ಲರೂ ರೈತರೇ ಎಲ್ಲರಿಗೂ ಅನುಕೂಲವಾಗಬೇಕು. ಆದರೆ, ಎಲ್ಲಾ ಇದ್ದ ಊರಲ್ಲಿ ವಾಸ್ತವ್ಯ ಮಾಡೋದಕ್ಕಿಂತ ಎಲ್ಲಾ ಇದ್ದು ಏನು ಇಲ್ಲದಂತಾದ ಊರಲ್ಲಿ ವಾಸ್ತವ್ಯ ಮಾಡಿದರೆ ಅಲ್ಲಿನ ಜನರಿಗೂ ಅನುಕೂಲವಾಗುತ್ತಿತ್ತು ಅಂತಾರೆ ರೈತರು. ಸಚಿವರು-ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಪ್ರೀತಿ-ಅಭಿಮಾನ-ಗೌರವ ಇದ್ದರೆ ಹುಲಿಕೆರೆ ಗ್ರಾಮದಲ್ಲಿ ಮಾಡಿದಂತೆ ಮಲೆನಾಡು ಭಾಗದ ಕುಗ್ರಾಮದಲ್ಲೂ ಒಂದು ಗ್ರಾಮ ವಾಸ್ತವ್ಯ ಮಾಡಿದರೆ ಆ ಭಾಗದ ರೈತರ ಬದುಕು ಹಸನಾಗಲಿದೆ ಎಂದು ರೈತರು ಮಲೆನಾಡಲ್ಲೂ ಗ್ರಾಮ ವಾಸ್ತವ್ಯ ಮಾಡುವಂತೆ ಆಗ್ರಹಿಸಿದ್ದಾರೆ.

Follow Us:
Download App:
  • android
  • ios