Asianet Suvarna News Asianet Suvarna News

ದಿನನಿತ್ಯ ಕುಸಿಯುತ್ತಿರುವ ಕೊಬ್ಬರಿ ಬೆಲೆ : ಆತಂಕದಲ್ಲಿ ರೈತ

ದೇಶದಲ್ಲೇ ಕೊಬ್ಬರಿ ನಗರ ಎಂದೇ ಪ್ರಸಿದ್ಧವಾಗಿರುವ ತಿಪಟೂರಿನ ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆಯಲ್ಲಿ, ಕಳೆದ ವರ್ಷ ಕ್ವಿಂಟಲ್‌ಗೆ ರು.18 ಸಾವಿರದವರೆಗೆ ಇದ್ದ ಕೊಬ್ಬರಿಯ ಬೆಲೆ, ಕಳೆದ ಶನಿವಾರ ಕನಿಷ್ಠ ರು. 10200ಕ್ಕೆ ಕುಸಿಯುವ ಮೂಲಕ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ತೀವ್ರ ಕುಸಿತವಾಗಿರುವುದು ಇಲ್ಲಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

Farmers are worried about the Coconut price falling  snr
Author
First Published Jan 23, 2023, 6:21 AM IST

 ಬಿ. ರಂಗಸ್ವಾಮಿ

  ತಿಪಟೂರು:  ದೇಶದಲ್ಲೇ ಕೊಬ್ಬರಿ ನಗರ ಎಂದೇ ಪ್ರಸಿದ್ಧವಾಗಿರುವ ತಿಪಟೂರಿನ ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆಯಲ್ಲಿ, ಕಳೆದ ವರ್ಷ ಕ್ವಿಂಟಲ್‌ಗೆ ರು.18 ಸಾವಿರದವರೆಗೆ ಇದ್ದ ಕೊಬ್ಬರಿಯ ಬೆಲೆ, ಕಳೆದ ಶನಿವಾರ ಕನಿಷ್ಠ ರು. 10200ಕ್ಕೆ ಕುಸಿಯುವ ಮೂಲಕ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ತೀವ್ರ ಕುಸಿತವಾಗಿರುವುದು ಇಲ್ಲಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

2022ರ ಜನವರಿಯಿಂದ ಇಲ್ಲಿಯವರೆಗೂ ಹಲವು ಏಳು ಬೀಳುಗಳ ನಡುವೆಯೂ ಕ್ವಿಂಟಲ್‌ ಕೊಬ್ಬರಿ ಬೆಲೆ ರು.18ಸಾವಿರವರೆಗೂ ಇದ್ದು, ಬೆಳೆಗಾರರಲ್ಲಿ ಒಂದು ರೀತಿಯ ನೆಮ್ಮದಿ ತಂದಿತ್ತು. ಕಳೆದ 4-5ತಿಂಗಳುಗಳಿಂದ ಕೊಬ್ಬರಿ ಬೆಲೆ ಇಳಿಮುಖವಾಗುತ್ತಲೇ ಕ್ವಿಂಟಲ್‌ಗೆ ರು.13 ಸಾವಿರದ ಆಸುಪಾಸಿನಲ್ಲಿತ್ತು. ಆದರೆ ಇತ್ತೀಚಿನ ಒಂದೆರಡು ತಿಂಗಳುಗಳಿಂದ ಕೊಬ್ಬರಿ ಬೆಲೆ ಕುಸಿಯುತ್ತಲೇ ಜ.21ರ ಶನಿವಾರದ ಹರಾಜು ಮಾರುಕಟ್ಟೆಯಲ್ಲಿ ಕನಿಷ್ಠ ದರ 10200ಕ್ಕೆ ಕುಸಿತ ಕಂಡಿದ್ದು ಮುಂದಿನ ಬುಧವಾರದ ಹರಾಜಿನಲ್ಲಿ ಬೆಲೆ ಮತ್ತಷ್ಟುಕಡಿಮೆಯಾಗಲಿದೆ ಎಂಬ ಭಯದಲ್ಲಿ ವರ್ತಕರು ಹಾಗೂ ತೆಂಗು ಬೆಳೆಗಾರರು ತೀವ್ರ ಆತಂಕದಲ್ಲಿರುವುದು ಕಂಡು ಬರುತ್ತಿದೆ.

ಈಗಿನ ತೋಟಗಾರಿಕಾ ಕೃಷಿಯ ವೆಚ್ಚ ದುಬಾರಿಯಾಗಿದ್ದು, ಒಂದು ಕ್ವಿಂಟಲ್‌ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ ರು. 16 ಸಾವಿರ ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಲ್‌ ಕೊಬ್ಬರಿಗೆ ರು. 18ಸಾವಿರವಾದರೂ ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ಕಟ್ಟಿಕೊಳ್ಳಬಹುದಾಗಿದೆ. ಆದರೆ ಪ್ರಸ್ತುತ 10 ಸಾವಿರ ಆಸುಪಾಸಿನಲ್ಲಿ ಕೊಬ್ಬರಿ ಬೆಲೆ ಇದ್ದು ಬೆಳೆಗಾರರು ತೀವ್ರ ನಷ್ಟಅನುಭವಿಸುವಂತಾಗಿದೆ. ತೆಂಗು ಬೆಳೆಗಾರರಿಗೆ ತೋಟಗಾರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಮುಖವಾಗಿ ಬೆಳೆಯ ತಾಂತ್ರಿಕತೆ ಹಾಗೂ ಮಾರುಕಟ್ಟೆಯ ದಿಢೀರ್‌ ಕುಸಿತ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ಕಪ್ಪುತಲೆ ಹುಳುರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡಕೊರಕ ಇತ್ಯಾದಿ ರೋಗಗಳ ಜೊತೆ ಜೊತೆಗೆ ತೋಟಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲೂ ಸಹ ಬೆಲೆ ಕುಸಿತ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ.

18ಸಾವಿರಕ್ಕೆ ಬೆಂಬಲ ಬೆಲೆ ನಿಗದಿಯಾಗಲಿ:

ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಯನ್ನು ರು.11 ಸಾವಿರಕ್ಕೆ ಈ ಹಿಂದೆ ನಿಗದಿಪಡಿಸಿದ್ದು ಕಳೆದ 15 ದಿನಗಳ ಹಿಂದೆ ಇದನ್ನು ರು. 11,750 ಏರಿಸಿದ್ದರೂ ಇದು ಸರ್ಕಾರಿ ಆದೇಶವಾಗಿ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ. ಕೊಬ್ಬರಿಯ ವೈಜ್ಞಾನಿಕ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ರು. 18 ಸಾವಿರಕ್ಕಾದರೂ ಏರಿಸಬೇಕೆಂದು ಬೆಳೆಗಾರರ, ಪ್ರತಿಪಕ್ಷದ ರಾಜಕಾರಣಿಗಳ ಸಾಕಷ್ಟುಹೋರಾಟಗಳು, ಒತ್ತಾಯಗಳು ಸರ್ಕಾರಕ್ಕೆ ಮುಟ್ಟಿದ್ದರಿಂದ ಸರ್ಕಾರ ಕ್ವಿಂಟಲ್‌ಗೆ ಕೇವಲ ರು. 750 ಮಾತ್ರ ಏರಿಸಿ ಪ್ರಚಾರ ಪಡೆದಿದ್ದು ಬಿಟ್ಟರೆ, ಕೂಡಲೆ ಜಾರಿಗೆ ಬರುವಂತೆ ಆದೇಶಿಸದಿರುವುದು ಸರ್ಕಾರದ ನಿರ್ಲಕ್ಷ ಧೋರಣೆಗೆ ಸಾಕ್ಷಿಯಾಗಿದೆ.

25ಕ್ಕೆ ಹೆದ್ದಾರಿ ಬಂದ್‌ ಎಚ್ಚರಿಕೆ: ಲೋಕೇಶ್ವರ್‌

ತಿಪಟೂರು ಕೊಬ್ಬರಿಯ ರುಚಿ ಹಾಗೂ ಗುಣಮಟ್ಟದೇಶ ವಿದೇಶಗಳಲ್ಲಿ ಮನ್ನಣೆ ಪಡೆದಿದೆ. ರೈತರು ತೆಂಗಿನ ಮರದಿಂದ ಇಳಿಸಿದ ತೆಂಗಿನ ಕಾಯಿಗಳನ್ನು ತಮ್ಮ ಮನೆಯ ಅಟ್ಟಗಳಲ್ಲಿ ತುಂಬಿ ಒಣಗಿಸಿ ಕೊಬ್ಬರಿ ತಯಾರಿಸಲು ಈ ಹಿಂದೆ 8ರಿಂದ 9 ತಿಂಗಳ ಸಮಯ ಹಿಡಿಯುತ್ತಿತ್ತು. ಆದರೆ ಇತ್ತೀಚೆಗೆ ಮಳೆ ಹೆಚ್ಚಾದ ಹಾಗೂ ಶೀತವಾತಾವರಣದ ಕಾರಣ 15 ರಿಂದ 16 ತಿಂಗಳ ಸಮಯ ಹಿಡಿಯುತ್ತಿರುವುದಲ್ಲದೆ ಮಾರುಕಟ್ಟೆಯಲ್ಲಿ ಬೆಲೆ ಗಣನೀಯವಾಗಿ ಕುಸಿಯುತ್ತಿದೆ. ಹಾಗಾಗಿ ನಾವು ಕೊಬ್ಬರಿ ಬೆಂಬಲ ಬೆಲೆಯನ್ನು ಈಗಿದ್ದ ರು.11ಸಾವಿದಿಂದ 14ಸಾವಿರಕ್ಕಾದರೂ ಹೆಚ್ಚಿಸಬೇಕು. ತಿಪಟೂರಿನಲ್ಲಿ ನಡೆದ ಸಿದ್ದರಾಮ ಜಯಂತಿ ಸಮಾರಂಭಕ್ಕೆ ಸಿಎಂ ಬೊಮ್ಮಾಯಿ ಅವರು ಬಂದಾಗಲೂ ನಾವು ಮನವಿ ನೀಡಿದ್ದು, ಒಂದು ವಾರದಲ್ಲಿ ನಫೆಡ್‌ ಕೇಂದ್ರ ಪ್ರಾರಂಭಿಸಿ ಕೊಬ್ಬರಿ ಕೊಳ್ಳುವುದಾಗಿ ಲಕ್ಷಾಂತರ ರೈತರ ಮುಂದೆ ತಮ್ಮ ಭಾಷಣದಲ್ಲಿ ಹೇಳಿದ್ದರೂ ಪ್ರಾರಂಭಿಸಿಲ್ಲ. ಹಾಗಾಗಿ ಕ್ವಿಂಟಲ್‌ ಕೊಬ್ಬರಿಗೆ ರಾಜ್ಯ ಸರ್ಕಾರ 2 ಸಾವಿರ ಪೋ›ತ್ಸಾಹ ಬೆಲೆ ಘೋಷಿಸಿ 3-4 ದಿನಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಜ.25ರ ಬುಧವಾರದಂದು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ ಬಳಿ ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ ಹಾಗೂ ಗುಬ್ಬಿ ಭಾಗದ ತೆಂಗು ಬೆಳೆಗಾರರು, ರೈತರು, ಕನ್ನಡಪರ, ದಲಿತ ಹಾಗೂ ವಿವಿಧ ರೈತಪರ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ-74 ಬಂದ್‌ ಮಾಡುವ ಮೂಲಕ ನಮ್ಮ ತಿಪಟೂರು ಹೋರಾಟ ಸಮಿತಿಯಿಂದ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಸೇವಕ ಲೋಕೇಶ್ವರ ಹೇಳಿದರು 

Follow Us:
Download App:
  • android
  • ios