ಚನ್ನಪಟ್ಟಣ [ಡಿ.22]:  ತಾಲೂಕು ಆಡಳಿತಕ್ಕೆ ಚುರುಕು ಮೂಡಿಸುವ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ತಾಪಂ ಅಧ್ಯಕ್ಷ ಮತ್ತು ಸದಸ್ಯರ ಕ್ಲಾಸ್‌ ಮುಗಿಸಿ ಬಂದಿದ್ದ ತಾಲೂಕಿನ ಅಧಿಕಾರಿಗಳಿಗೆ ಶನಿವಾರ ರೈತರು ವಿಶೇಷ ತರಗತಿ ತೆಗೆದು ಕೊಳ್ಳುವ ಮೂಲಕ ಮತ್ತೊಮ್ಮೆ ಬಿಸಿಮುಟ್ಟಿಸಿದ್ದಾರೆ.

ಶನಿವಾರ ತಹಸೀಲ್ದಾರ್‌ ಸುದರ್ಶನ್‌ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೈತರ ಕುಂದು-ಕೊರತೆ ಸಭೆಯಲ್ಲಿ ತಾಲೂಕಿನ ರೈತಾಪಿ ಸಮುದಾಯದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ರೈತರು, ಅಧಿಕಾರಿಗಳ ಎಡವಟ್ಟನ್ನು ಎಳೆ ಎಳೆಯಾಗಿ ಬಿಡಿಸುವ ಮೂಲಕ ತಾಲೂಕು ಆಡಳಿತಕ್ಕೆ ಚುರುಕು ಮೂಡಿಸಿದರು.

ಕೃಷಿ ಮಾರುಕಟ್ಟೆಅವ್ಯವಸ್ಥೆ, ಕಣ್ವ ನಾಲೆಗಳ ದುರಾವಸ್ಥೆ, ಕಾಡು ಪ್ರಾಣಿಗಳ ನಿರಂತರ ದಾಳಿ, ರಸ್ತೆ ಅವ್ಯವಸ್ಥೆ, ಖಾತೆ ಸಮಸ್ಯೆ, ಅಕ್ರಮವಾಗಿ ಮದ್ಯ ಮಾರಾಟ, ಕೆರೆಗಳ ಸಮಸ್ಯೆ, ನರೇಗಾದಲ್ಲಿ ಕಳಪೆ ಮತ್ತು ಅಕ್ರಮ ಕಾಮಗಾರಿಗಳ ಬಗ್ಗೆ ಆರೋಪ ಹೀಗೆ ತಾಲೂಕಿನ ವಿವಿಧ ಸಮಸ್ಯೆಗಳು ಸಭೆಯಲ್ಲಿ ಅನಾವರಣಗೊಂಡವು.

ಎಪಿಎಂಸಿಯಲ್ಲಿ ಗೋಲ್‌ಮಾಲ್‌:

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ ಸ್ಥಾಪಿಸಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಮೂರು ಹಂತದ ಬಿಲ್‌ ನೀಡುತ್ತಿಲ್ಲ. ತೂಕ ಮತ್ತು ಅಳತೆಯಲ್ಲಿ ರೈತರಿಗೆ ವಂಚನೆಯಾಗುತ್ತಿದೆ. ಪ್ರತಿದಿನ ಸಾಕಷ್ಟುವಹಿವಾಟು ನಡೆಯುತ್ತದೆಯಾದರೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿರುವುದಕ್ಕೆ ಯಾವುದೇ ರೈತನಿಗೆ ಬಿಲ್‌ ಕೊಡುವುದಿಲ್ಲ. ಬಿಳಿಚೀಟಿ ವ್ಯವಹಾರ ನಡೆಯುತ್ತಿದೆ. ಶೇ.5ರಿಂದ 10ರಷ್ಟುಕಮಿಷನ್‌ ರೈತರಿಂದ ನಿಯಮ ಬಾಹಿರವಾಗಿ ಪಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಾಜರಿದ್ದ ಎಪಿಎಂಸಿ ಕಾರ್ಯದರ್ಶಿ ಈ ಸಂಬಂಧ ವರ್ತಕರು ಮತ್ತು ಇಲಾಖಾ ಸಿಬ್ಬಂದಿಯ ಸಭೆ ನಡೆಸಿ ಇನ್ನು 10 ದಿನಗಳಲ್ಲಿ ಎಪಿಎಂಸಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಸಭೆಗೆ ಭರವಸೆ ನೀಡಿದರು.

ಕಾಡು ಪ್ರಾಣಿ ಕಟ್ಟಿಹಾಕಿಕೊಳ್ಳಿ:

ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡು ಪ್ರಾಣಿಗಳ ಹಾವಳಿ ಸಭೆಯಲ್ಲಿ ಸಾಕಷ್ಟುಸದ್ದು ಮಾಡಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ನಮ್ಮ ಸಾಕು ಪ್ರಾಣಿಗಳು ಕಾಡಿಗೆ ಬಂದರೆ ನೀವು ನಮ್ಮ ಮೇಲೆ ಪ್ರಕರಣ ದಾಖಲಿಸುತ್ತೀರಿ. ನಿಮ್ಮ ಕಾಡುಪ್ರಾಣಿಗಳು ಊರಿಗೆ ಬಂದಾಗ ನಾವು ಯಾರ ಮೇಲೆ ಪ್ರಕರಣ ದಾಖಲಿಸುವುದು. ನಮ್ಮ ಸಾಕು ಪ್ರಾಣಿಗಳನ್ನು ನಾವು ಸುರಕ್ಷತೆ ಮಾಡಿರುವಂತೆ, ನಿಮ್ಮ ಸಾಕು ಪ್ರಾಣಿಗಳನ್ನು ನೀವು ಕಾಡಿನಲ್ಲಿ ಜೋಪಾನ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.

ಕಣ್ವ ನಾಲೆಗಳ ಅವ್ಯವಸ್ಥೆ:

ಕಣ್ವ ನಾಲೆಗಳು ಕಳೆದ 25 ವರ್ಷಗಳಿಂದ ದುರಸ್ತಿ ಕಂಡಿಲ್ಲ. 35 ಕೋಟಿ ರು. ಯೋಜನೆ ಮಂಜೂರಾಗಿದೆ ಎಂದು ಹೇಳುವ ನೀರಾವರಿ ಇಲಾಖೆ, ನಾಲೆಗಳ ದುರಸ್ತಿ ಇರಲಿ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವು ಗೊಳಿಸಿಲ್ಲ. ಇದರಿಂದಾಗಿ ಈ ನಾಲೆಗಳು ಚಿರತೆ, ಕರಡಿಗಳ ವಾಸಸ್ಥಾನವಾಗಿವೆ. ಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ಕೆರೆಗಳ ದುರಾವಸ್ಥೆಯ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಪ್ರತಿಕ್ರಿತಿಸಿದ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌, ಕಣ್ವ ನಾಲೆಗಳ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ನಿಗಮದ ಸಭೆಯಲ್ಲಿ ಅನುಮತಿ ದೊರೆಯಬೇಕಿದೆ. ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಹಲವು ಸಮಸ್ಯೆಗಳ ಬಗ್ಗೆ ಚರ್ಚೆ:

ತಾಲೂಕಿನಲ್ಲಿ ಶಾಲೆ ಮತ್ತು ದೇವಾಲಯಗಳ ಸಮೀಪ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೃಷಿ ಇಲಾಖೆ ಸಂಪೂರ್ಣ ವ್ಯಾಪಾರೀಕರಣವಾಗಿದೆ. ಟಾರ್ಪಾಲ್‌, ಕೃಷಿ ಯಂತ್ರೋಪಕರಣಗಳು ಮತ್ತು ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿವೆ. ವೈಜ್ಞಾನಿಕವಾಗಿ ಇಂದಿಗೂ ರೈತನಿಗೆ ಉಪಯೋಗವಾಗುತ್ತಿಲ್ಲ ಎಂದು ರೈತರು ಸಭೆ ಗಮನ ಸೆಳೆದರು.

ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ. ಗ್ರಾನೈಟ್‌ ಗಣಿಗಾರಿಕೆ, ಶುದ್ಧ ಕುಡಿಯುವ ನೀರಿನ ಕೇಂದ್ರಗಳ ಅವ್ಯವಸ್ಥೆ. ಗ್ರಾಪಂಗಳು ಇ-ಖಾತೆಗೆ ರೈತರನ್ನು ಅಲೆದಾಡಿಸುತ್ತಿರುವುದು ಹಾಗೂ ಖಾತೆ ಮಾಡಿಕೊಡಲು ಹಣ ಕೇಳುತ್ತಿರುವ ಬಗ್ಗೆ, ಕಂದಾಯ ಇಲಾಖೆಯ ಸಮಸ್ಯೆಗಳು, ಅರಣ್ಯ ಇಲಾಖೆಯ ಅವ್ಯವಸ್ಥೆ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ರೈತರು ತಾಲೂಕು ಆಡಳಿತವನ್ನು ಎಚ್ಚರಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಸುದರ್ಶನ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ರೈತ ಸಂಘದ ಪದಾಧಿಕಾರಿಗಳಾದ ರಾಮೇಗೌಡ, ತಿಮ್ಮೇಗೌಡ, ಹೊನ್ನಾಯ್ಕನಹಳ್ಳಿ ಕೃಷ್ಣಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಸದ್ದು ಮಾಡಿದ ನರೇಗಾ ಗೋಲ್‌ಮಾಲ್‌!

ನರೇಗಾ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಗ್ರಾಮದಲ್ಲಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಬೇಕು. ಆದರೆ, ಜನರೇ ತಿರುಗಾಡದ ಜಾಗದಲ್ಲಿ ಕಾಮಗಾರಿ ನಿರ್ವಹಿಸಿದ್ದೀರಿ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವುದಿಲ್ಲ. ಅರ್ಧಕ್ಕೆ ಅರ್ಧದಷ್ಟುಕೆಲಸವೇ ನಡೆದಿಲ್ಲ. ತಾಲೂಕಿನ ಯಾವುದೇ ಗ್ರಾಮದಲ್ಲಿ ಶೇ.70ರಷ್ಟುನರೇಗಾ ಕೆಲಸ ನಡೆದಿದೆ ಎಂದು ಸಾಬೀತು ಪಡಿಸಿದರೆ, ರೈತ ಸಂಘ ನಿಮಗೆ ತಲೆಬಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಸವಾಲು ಹಾಕಿದರು. ಇದಕ್ಕೆ ಅಧಿಕಾರಿಗಳು ನಿರುತ್ತರರಾದರು.