Asianet Suvarna News Asianet Suvarna News

ಚಿಕ್ಕಮಗಳೂರು: ಅಡಿಕೆ ಬೆಳೆಗಾರರ ಗಾಯದ ಮೇಲೆ ಬರೆ ಎಳೆಯಲು ಮುಂದಾದ ಸರ್ಕಾರ..!

ಸರ್ಕಾರ ಅಡಿಕೆ ಸುಲಿಯುವ ಯಂತ್ರಕ್ಕೂ ಪ್ರತ್ಯೇಕ ಮೀಟರ್ ಅಳವಡಿಕೆಗೆ ಮುಂದಾಗಿರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

Farmers Angry on Government For Separate Meter for Nut Peeling Machine grg
Author
First Published Nov 30, 2023, 12:00 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.30): ಒಂದೆಡೆ ಮಳೆ ಕೊರತೆ. ಮತ್ತೊಂದೆಡೆ ಹಳದಿ ಎಲೆರೋಗ, ಚುಕ್ಕಿರೋಗ. ಮಗದೊಡೆ ಕೊಳೆರೋಗ, ಅಡಿಕೆ ನಿಷೇಧದ ಗುಮ್ಮದೊಂದಿಗೆ ಕಾರ್ಮಿಕರ ಸಮಸ್ಯೆ. ಹೇಳೋಕೆ ಒಂದೋ...ಎರಡೋ... ಮಲೆನಾಡ ಅಡಿಕೆ ಬೆಳೆಗಾರರು ಹೇಳಿಕೊಳ್ಳೋಕಷ್ಟೆ ಬೆಳೆಗಾರರು. ಸಮಸ್ಯೆಗಳ ಸುಳಿಯಲ್ಲಿ ಜೀವ ಒಂದು ಉಳಿದಿದೆಯಷ್ಟೆ. ತೋಟಗಳು ಔಷಧಿ ಇಲ್ಲದ ರೋಗಕ್ಕೆ ತುತ್ತಾದ ಹಿನ್ನೆಲೆ ಗ್ರಾಮಗಳ ವೃದ್ಧಾಶ್ರಮಗಳಾಗಿವೆ. ಕೆಲವರು ಊರು-ಮನೆಗಳನ್ನೇ ಬಿಟ್ಟು ಗುಳೇ ಹೋಗಿದ್ದಾರೆ. ಅಳಿದುಳಿದ ಅಡಿಕೆ ಬೆಳೆಗಾರರು ಹೇಗೋ ಜೀವನ ಮಾಡ್ತಿದ್ದಾರೆ. ಆದ್ರೆ, ಸರ್ಕಾರದ ಆದೇಶ ಮಲೆನಾಡ ಅಡಿಕೆ ಬೆಳೆಗಾರರಿಗೆ ಗಾಯದ ಮೇಳೆ ಬರೆ ಎಳೆದಂತಾಗಿದೆ.

ಅಡಿಕೆ ಸುಲಿಯುವ ಯಂತ್ರಕ್ಕೂ ಪ್ರತ್ಯೇಕ ಮೀಟರ್, ಬೆಳೆಗಾರರು ರೆಬೆಲ್ 

ರಾಜ್ಯದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಲ್ಲಿ ಯತೇಚ್ಛವಾಗಿ ಅಡಿಕೆ ಬೆಳೆಯುತ್ತಾರೆ. 3-4-5 ಎಕರೆಯಲ್ಲಿ ಬದುಕಿಗಾಗಿ ಬೆಳೆ ಬೆಳೆಯುತ್ತಿರೋರೆ ಹೆಚ್ಚು. ಆದ್ರೆ, ಕಳೆದೊಂದು ದಶಕದಿಂದ ಅಡಿಕೆಗೆ ಹಳದಿ ಎಲೆರೋಗ ಆವರಿಸಿಕೊಂಡು ತೋಟಗಳೇ ಸರ್ವನಾಶ ಆಗುತ್ತಿದೆ. ಚುಕ್ಕಿರೋಗ, ಕೊಳೆರೋಗ ಬೆಳೆಗಾರರನ್ನ ಕಿತ್ತು ತಿನ್ನುತ್ತಿವೆ. ಅಡಿಕೆ ನಿಷೇಧದ ಗುಮ್ಮ, ಕಾರ್ಮಿಕರ ಸಮಸ್ಯೆ ಬೆಳೆಗಾರರನ್ನ ಹಿಂಡಿ-ಹಿಪ್ಪೆ ಮಾಡ್ತಿದೆ. ಹೀಗಿರುವಾಗ, ಇಷ್ಟು ದಿನ ಬೆಳೆಗಾರರು ಮನೆ ವಿದ್ಯುತ್ಗೆ ಎರಡು ಬೆಲ್ಟ್ ಯಂತ್ರದ ಮೂಲಕ ಅಡಿಕೆ ಸುಲಿಯುತ್ತಿದ್ದರು. ಆದ್ರೀಗ, ಸರ್ಕಾರ ಅಡಿಕೆ ಸುಲಿಯುವ ಯಂತ್ರಕ್ಕೂ ಪ್ರತ್ಯೇಕ ಮೀಟರ್ ಅಳವಡಿಕೆಗೆ ಮುಂದಾಗಿರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಸರ್ಕಾರಕ್ಕೆ ಪತ್ರ ಬರೆದು ವರ್ಷದಲ್ಲಿ 2-3 ತಿಂಗಳ ಮಾತ್ರ ಯಂತ್ರ ಬೇಕಾಗೋದು. ಅಡಿಕೆ ಬೆಳೆಗಾರರ ಹಿತದೃಷ್ಠಿಯಿಂದ ಆದೇಶವನ್ನ ಮರುಪರಿಶೀಲನೆ ಮಾಡಿ ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ. ಸರ್ಕಾರದ ನಡೆಗೆ ಅಡಿಕೆ ಬೆಳೆಗಾರರು ಕೂಡ ಅಸಮಾಧಾನ ಹೊರಹಾಕಿದ್ದಾರೆ. 

ಪೂಜೆ ವೇಳೆ ಅಲುಗಾಡುತ್ತೆ 16 ಅಡಿಯ ಹುತ್ತ ..ಕಾಫಿನಾಡಲ್ಲೊಂದು ವಿಸ್ಮಯ ಉತ್ಸವ..!

ಮನೆ ವಿದ್ಯುತ್‌ಗೆ ಓಡೋ ಯಂತ್ರಕ್ಕೆ ಕಮರ್ಷಿಯಲ್ ಬಣ್ಣ ಹಚ್ಚಿದ ಮೆಸ್ಕಾಂ

ಅಡಿಕೆಗೆ ಹಳದಿ ಎಲೆ ರೋಗದ ಜೊತೆ ನಾನಾ ಖಾಯಿಲೆಗಳು ಬೆಳೆಗಾರರ ಬದುಕನ್ನ ಸುಡುತ್ತಿದೆ. ಜನ ಗುಳೇ ಹೋಗ್ತಿದ್ದು, ಬದುಕಿ-ಬಾಳಿದ್ದ ಮನೆಗಳು ಪಾಳುಬಿದ್ದಿವೆ. ಗ್ರಾಮಗಳು ವೃದ್ಧಾಶ್ರಮಗಳಾಗ್ತಿವೆ. ಸಣ್ಣ-ಮಧ್ಯಮ ಬೆಳೆಗಾರರು ಬದುಕೋದೇ ಕಷ್ಟವಾಗಿದೆ. ಬೆಳೆಗಾರರ ಬದುಕು ಹೀಗಿರುವಾಗ ಸರ್ಕಾರ ಅಡಿಕೆ ಸುಲಿಯುವ ಯಂತ್ರಕ್ಕೂ ಪ್ರತ್ಯೇಕ ಮೀಟರ್ ಅಳವಡಿಕೆ ಮುಂದಾಗಿರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತ್ಯೇಕ ಮೀಟರ್ ಕೂರಿಸಿದ್ರೆ ವರ್ಷದಲ್ಲಿ ಎರಡು ಮೂರು ತಿಂಗಳು ಮಾತ್ರ ಬಳಸೋ ಯಂತ್ರಕ್ಕೆ ವರ್ಷಪೂರ್ತಿ ಕಮರ್ಷಿಯಲ್ ಮಿನಿಮಮ್ ಚಾರ್ಜ್ ಕಟ್ಟಲೇಬೇಕು. ಅದು ಕೂಡ ಬೆಳೆಗಾರರಿಗೆ ಹೊರೆಯೇ. ಯಾಕಂದ್ರೆ, 4-5 ಎರಕೆಯಲ್ಲಿ ಬದುಕು ಕಟ್ಟಿಕೊಂಡ ಬೆಳೆಗಾರರೇ ಹೆಚ್ಚಿದ್ದಾರೆ. ಹಾಗಾಗಿ, ಬೆಳೆಗಾರರ ಕಷ್ಟ-ನೋವನ್ನರಿತ ಮಲೆನಾಡು ಭಾಗದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಇಂಧನ ಸಚಿವ ಜಾರ್ಜ್, ಅದು ಕರ್ನಾಟಕ್ ಎಲೆಕ್ಟ್ರಿಕ್ಸಿಟಿ ರೆಗ್ಯುಲರ್ ಅವರು ಮೊದಲು ಮಾಡಿರುವ ಆದೇಶವದು. ಮರುಪರಿಶೀಲನೆ ಸೂಚನೆ ನೀಡಿದ್ದೇವೆ. ಅವರು ಮರುಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಒಟ್ಟಾರೆ, ಸರ್ಕಾರದ ಹೊಸ ನೀತಿಯಿಂದ ಬೆಳೆಗಾರರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಸರ್ಕಾರ ಅದು ಫ್ರೀ.... ಇದು ಫ್ರೀ... ಮತ್ತೊಂದು ಫ್ರೀ ಅಂತ ಎಲ್ಲಾ ಫ್ರೀ ಮಾಡಿ ಈಗ ಈ ರೀತಿ ಬರೆ ಎಳೆಯುತ್ತಿದೆ. ಇಷ್ಟು ವರ್ಷ ಇಲ್ಲದ ಪ್ರತ್ಯೇಕ ಮೀಟರ್ ಭಾಗ್ಯ ಈಗೇಕೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಅಡಿಕೆಗೆ ಹಳದಿ ಎಲೆ ರೋಗ ತಗುಲಿದ ಮೇಲೆ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ ಅಂದ್ರು ತಪ್ಪಿಲ್ಲ. ಸರ್ಕಾರಕ್ಕೆ ನಿಜಕ್ಕೂ ಬೆಳೆಗಾರರ ಹಿತಕಾಯಬೇಕೆಂದು ಮನಸ್ಸಿದ್ದರೆ ಕೂಡಲೇ ಈ ಆದೇಶವನ್ನ ಹಿಂಪಡೆಯಬೇಕಿದೆ. ಆದ್ರೆ, ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು. 

Follow Us:
Download App:
  • android
  • ios