Asianet Suvarna News Asianet Suvarna News

ಗೋಮಾತೆಗಾಗಿ ರಾಹುಲ್ ಪತ್ರ: ಮೋದಿ ಕೊಟ್ಟರು ಉತ್ತರ!

ಹಸುಗಳ ರಕ್ಷಣೆಗಾಗಿ ಪ್ರಧಾನಿಗೆ ಪತ್ರ! ಯುವ ರೈತನ ಪತ್ರಕ್ಕೆ ಉತ್ತರಿಸಿದ ಮೋದಿ! ಪಶು ಸಂಗೋಪನೆ ಅಧಿಕಾರಿಗಳು ಗ್ರಾಮಕ್ಕೆ! ಪಶು ಚಿಕಿತ್ಸಾ ಘಟಕ ಸ್ಥಾಪನೆಯ ಭರವಸೆ
ಪ್ರಧಾನಿ ಸ್ಪಂದನೆಗೆ ಗ್ರಾಮಸ್ಥರ ಹರ್ಷ!

Farmer wrote letter to PM and urges to save cows
Author
Bengaluru, First Published Aug 20, 2018, 12:19 PM IST

ಬೆಳಗಾವಿ(ಆ.20): ‘ಸ್ವಾಮಿ ಏನಾದ್ರೂ ಮಾಡಿ ನನ್ನ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ..’ ಹೀಗಂತ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಪ್ರಧಾನಿ ಸೂಕ್ತ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ತನ್ನ ಹಸುಗಳಿಗೆ ಚಿಕಿತ್ಸೆ ಕೊಡಿಸಲು ಮನವಿ ಮಾಡಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಯುವಕ ರಾಹುಲ್ ಬೆಕನಾಲಕರ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ. ಕೂಡಲೇ ಪ್ರಧಾನಿ ಕಚೇರಿಯಿಂದ ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆಗೆ ಪತ್ರ ಬಂದಿದ್ದು, ರೈತನಿಗೆ ಅಗತ್ಯ ನೆರವು ನೀಡಿ ಎಂದು ತಿಳಿಸಲಾಗಿದೆ.

Farmer wrote letter to PM and urges to save cows

ಕೂಡಲೇ ಎಚ್ಚೆತ್ತ ರಾಜ್ಯ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ರಾಹುಲ್ ಮನೆಗೆ ತೆರಳಿ ಹಸುಗಳ ಕುರಿತು ಮಾಹಿತಿ ಪಡೆದಿದ್ದಾರೆ. ಹೆರಿಗೆ ವೇಳೆ ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರಕದ ಕಾರಣ ತನ್ನ ಹಸು ಮತ್ತು ಕರು ಎರಡೂ ಸಾವನ್ನಪ್ಪಿವೆ ಎಂದು ರಾಹುಲ್ ಪ್ರಧಾನಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದ. ಅಲ್ಲದೇ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕ ಸ್ಥಾಪಿಸಿದರೆ ಇತರರ ಹಸುಗಳನ್ನು ಕಾಪಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದ.

"

ಅದರಂತೆ ರಾಹುಲ್ ಗ್ರಾಮಕ್ಕೆ ಬಂದ ಅಧಿಕಾರಿಗಳು, ಪರಿಶೀಲನೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಪಶು ಸಂಗೋಪನಾ ಚಿಕಿತ್ಸೆ ಘಟಕ ಬೈಲಹೊಂಗಲದಲ್ಲಿದ್ದು, ಅಲ್ಲಿಂದ ಈ ಗ್ರಾಮಕ್ಕೆ ಬಂದು ವೈದ್ಯರು ಚಿಕಿತ್ಸೆ ನೀಡಲು 5 ರಿಂದ 6 ಸಾವಿರ ರೂ. ಬಿಲ್ ಮಾಡುತ್ತಾರೆ. ಇದನ್ನು ತಪ್ಪಿಸಲು ಗ್ರಾಮದಲ್ಲೇ ಪಶುವೈದ್ಯಕೀಯ ಚಿಕಿತ್ಸಾ ಘಟಕ ಸ್ಥಾಪಿಸಲು ರಾಹುಲ್ ಮನವಿ ಮಾಡಿದ್ದಾನೆ.

ಇನ್ನು ಗ್ರಾಮದ ಯುವ ರೈತನ ಪತ್ರಕ್ಕೆ ಪ್ರಧಾನಿ ಮೋದಿ ಸ್ಪಂದಿಸಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಸಮಸ್ಯೆ ಇತ್ಯರ್ಥವಾಗುವ ಭರವಸೆಯಲ್ಲಿದ್ದಾರೆ. 

Follow Us:
Download App:
  • android
  • ios